

ನವದೆಹಲಿ: ಭಾರತ ಮತ್ತು ಚೀನಾದ ವಿಶೇಷ ಪ್ರತಿನಿಧಿಗಳು ಭಾನುವಾರ ಮಾತುಕತೆ ನಡೆಸಿದ ಬಳಿಕ ಭಾರತ ಮತ್ತು ಚೀನಾದ ಸೇನಾಪಡೆಗಳು ಲಡಾಖ್ನ ವಿವಾದಿತ ಪ್ರದೇಶದಿಂದ 2 ಕಿ.ಮೀ.ನಷ್ಟು ಹಿಂದಕ್ಕೆ ಸರಿದಿವೆ. ಗಸ್ತು ಪಾಯಿಂಟ್ 15 ಮತ್ತು ಹಾಟ್ಸ್ಪ್ರಿಂಗ್ಸ್ನಲ್ಲಿನ ಸೇನೆ ಹಿಂದೆಗೆತ ಪ್ರಕ್ರಿಯೆ ಪೂರ್ಣಗೊಂಡಿದೆ. ಗೋಗ್ರಾದಲ್ಲಿನ ಗಸ್ತು ಪಾಯಿಂಟ್ 17ಎ ಬಳಿಯಿಂದ 2 ಕಿ.ಮೀ. ಹಿಂದಕ್ಕೆ ಸರಿಯುವ ಪ್ರಕ್ರಿಯೆ ಗುರುವಾರದಂದು ನಡೆಯಲಿದೆ ಎಂದು ಸೇನಾಪಡೆ ಮೂಲಗಳು ತಿಳಿಸಿವೆ.
ಪ್ಯಾಂಗಾಂಗ್ ಸರೋವರದ ಫಿಂಗರ್ 4 ಪ್ರದೇಶದಲ್ಲಿ ಚೀನಿ ಯೋಧರ ಚಲನವಲನ ಕಂಡುಬಂದಿದೆ. ಅಲ್ಲಿನ ಟೆಂಟ್ಗಳು ಮತ್ತು ವಾಹನಗಳನ್ನು ತೆರವುಗೊಳಿಸಲಾಗಿದೆ. ಆದರೆ ಏಣುಗಳಲ್ಲಿ ಇನ್ನೂ ಟೆಂಟ್ಗಳು ಹಾಗೆಯೇ ಇದ್ದು ಅವುಗಳಲ್ಲಿ ಯೋಧರು ಇದ್ದಾರೆ ಎಂದು ಮಾಹಿತಿ ನೀಡಿವೆ.
ಅಂದಾಜು ನಾಲ್ಕು ದಶಕಗಳ ಬಳಿಕ ಭಾರತ ಮತ್ತು ಚೀನಾ ಯೋಧರ ನಡುವೆ ಉಂಟಾದ ರಕ್ತಸಿಕ್ತ ಘರ್ಷಣೆ ನಡೆದ ಗಲ್ವಾನ್ ಕಣಿವೆ ಪ್ರದೇಶದಿಂದ ಉಭಯ ಸೇನೆಗಳು ಮಂಗಳವಾರವೇ ಕಾಲ್ತೆಗೆದಿದ್ದವು. ಉಪಗ್ರಹ ಚಿತ್ರಗಳು ಕೂಡ ಇದನ್ನು ಖಚಿತಪಡಿಸಿದ್ದವು.
ಇದೀಗ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ (ಪಿಎಲ್ಎ) ಯೋಧರು ನಿಖರವಾಗಿ ವಾಸ್ತವ ಗಡಿರೇಖೆಯ ತಮ್ಮ ಭಾಗದ ಕಡೆಯಲ್ಲಿ ನೆಲೆಸಿದ್ದಾರೆ ಎಂದು ಮೂಲಗಳು ಹೇಳಿವೆ.