

ಪಣಜಿ: ರಾಜ್ಯ ಬಿಜೆಪಿ ವಕ್ತಾರ ಪ್ರೇಮಾನಂದ್ ಮಹಾಂಬ್ರೆ ಅವರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಪಕ್ಷೇತರ ಶಾಸಕ ರೋಹನ್ ಖೌಂಟೆ ಅವರನ್ನು ಪೊಲೀಸರು ಬಂಧಿಸಿ ಬಳಿಕ ಜಾಮೀನಿನ ಆಧಾರದಲ್ಲಿ ಬಿಡುಗಡೆ ಮಾಡಿದ್ದಾರೆ.
ರೋಹನ್ ಖೌಂಟೆ ತಮಗೆ ಹೊಡೆದಿದ್ದಾರೆ ಎಂದು ಮಹಾಂಬ್ರೆ ಬುಧವಾರ ಪೊಲೀಸರಿಗೆ ದೂರು ನೀಡಿದ್ದರು. ಆ ದೂರಿನ ಒಂದು ಪ್ರತಿಯನ್ನು ವಿಧಾನಸಭಾಸ್ಪೀಕರ್ಗೂ ನೀಡಿದ್ದರು. ದೂರಿನ ಅನ್ವಯ ಖೌಂಟೆ ಅವರನ್ನು ಬುಧವಾರ ರಾತ್ರಿ ಬಂಧಿಸಲಾಗಿದೆ ಎಂದು ಡಿಎಸ್ಪಿ ಎಡ್ವಿನ್ ಕೊಲಾಕೋ ತಿಳಿಸಿದ್ದಾರೆ. ಪ್ರಕರಣದ ಬಗ್ಗೆ ಹೆಚ್ಚಿನ ವಿವರಣೆಯನ್ನು ನೀಡಲು ನಿರಾಕರಿಸಿದ್ದಾರೆ.
ಅದರಲ್ಲೂ ಗೋವಾದಲ್ಲಿ ವಿಧಾನಸಭಾ ಅಧಿವೇಶನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಖೌಂಟೆಯನ್ನು ಬಂಧಿಸಲು ಸ್ಪೀಕರ್ ಅನುಮತಿಯೂ ಬೇಕಾಗುತ್ತದೆ. ಹಾಗಾಗಿ ಮೊದಲು ಸ್ಪೀಕರ್ ರಾಜೇಶ್ ಪಟ್ನೇಕರ್ ಅವರ ಬಳಿ ಅನುಮತಿ ಪಡೆದು ಬಂಧಿಸಿದ್ದಾಗಿ ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ಸ್ವತಂತ್ರ ಎಂಎಲ್ಎ ರೋಹನ್ ಖೌಂಟೆ ಅಕ್ರಮಗಳಲ್ಲಿ ಭಾಗಿಯಾಗಿದ್ದಾರೆ ಪ್ರೇಮಾನಂದ್ ಮಹಾಂಬ್ರೆ ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು. ಅದರಿಂದ ಸಿಟ್ಟಿಗೆದ್ದ ಖೌಂಟೆ ಬಿಜೆಪಿ ವಕ್ತಾರನ ಕೈ ಹಿಡಿದು ಎಳೆದಿದ್ದಲ್ಲೆ, ಎಂದು ಬಿಜೆಪಿ ಗೋವಾ ಘಟಕಾಧ್ಯಕ್ಷ ಹೇಳಿದ್ದಾರೆ.
ಆದರೆ ಖೌಂಟೆ ಇದನ್ನು ನಿರಾಕರಿಸಿದ್ದಾರೆ. ನಾನು ಯಾರನ್ನೂ ಮುಟ್ಟಿಲ್ಲ. ಯಾರಿಗೂ ಹೊಡೆದಿಲ್ಲ. ನಾವು ಸದನದಲ್ಲಿ ಬಿಜೆಪಿಯ ವಿಫಲತೆಯನ್ನು ಹೊರಹಾಕಿದ್ದರಿಂದ ಹತಾಶರಾಗಿ ಇಂತಹ ದೂರುಗಳನ್ನು ನೀಡುತ್ತಿದ್ದಾರೆ. ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಇಂತಹ ಪ್ರಯತ್ನಗಳನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ರೋಹನ್ ಖೌಂಟೆ ಪೋರ್ವೋರಿಮ್ ಕ್ಷೇತ್ರದ ಶಾಸಕ. ಈ ಹಿಂದೆ ಬಿಜೆಪಿಯೊಂದಿಗೆ ಇದ್ದು ಕಂದಾಯ ಸಚಿವರಾಗಿದ್ದರು. ಕಳೆದ ವರ್ಷ ಅವರನ್ನು ಕೈಬಿಡಲಾಗಿತ್ತು.(ಏಜೆನ್ಸೀಸ್)