

ರಾಣೆಬೆನ್ನೂರ: ರಾಜ್ಯವನ್ನು ಹಸಿರು ಕರ್ನಾಟಕ ಮಾಡುವ ನಿಟ್ಟಿನಲ್ಲಿ ನಗರದ ನಾಗರಿಕರು ಮನೆಗೊಂದು ಗಿಡ ನೆಡಬೇಕು ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಮಮತಾ ಹೊಸಗೌಡರ ಹೇಳಿದರು.
ಇಲ್ಲಿನ ಅಶೋಕ ವೃತ್ತದಲ್ಲಿ ಮಂಗಳವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಏರ್ಪಡಿಸಿದ್ದ 77ನೇ ಸ್ವಾತಂತ್ರೋತ್ಸವದ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ನಗರದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಇತರ ಬಡ ಜನಾಂಗ ಹಾಗೂ ಅಂಗವಿಕಲರ ಶ್ರೇಯೋಭಿವೃದ್ಧಿಗಾಗಿ ಪ್ರಸಕ್ತ ಸಾಲಿನಲ್ಲಿ 91 ಲಕ್ಷ ರೂ. ಕಾಯ್ದಿರಿಸಲಾಗಿದ್ದು ಅದನ್ನು ವೈಯಕ್ತಿಕ, ಶೈಕ್ಷಣಿಕ, ಉದ್ದಿಮೆ, ಕ್ರೀಡೆ ಇತ್ಯಾದಿಗಳನ್ನು ಕೈಗೊಳ್ಳಲು ಸಹಾಯಧನ ಒದಗಿಸಲು ಹಾಗೂ ಅಭಿವೃದ್ಧಿ ಕಾಮಗಾರಿಗಳಿಗೆ ಬಳಸಲಾಗುವುದು ಎಂದರು.
ಶಾಸಕ ಪ್ರಕಾಶ ಕೋಳಿವಾಡ, ನಗರಸಭೆ ಆಯುಕ್ತ ನಿಂಗಪ್ಪ ಕುಮ್ಮಣ್ಣನವರ, ಡಿವೈಎಸ್‌ಪಿ ಡಾ. ಗಿರೀಶ ಬೋಜಣ್ಣನವರ, ಬಿಇಒ ಎಂ.ಎಚ್. ಪಾಟೀಲ, ನಗರಸಭೆ ಸದಸ್ಯರು, ಅಧಿಕಾರಿಗಳು ಪಾಲ್ಗೊಂಡಿದ್ದರು.