

ಬೆಂಗಳೂರು:
ಮುಂದಿನ 5 ವರ್ಷಗಳಲ್ಲಿ 7.50 ಲಕ್ಷ ಕೋಟಿ ಹೂಡಿಕೆ ಮಾಡುವ ಗುರಿ ಹೊಂದಲಾಗಿದೆ. ಸದ್ಯ
ರಾಜ್ಯದಲ್ಲಿ 6,57,660 ಕೋಟಿ ಮೊತ್ತದ ಬಂಡವಾಳ ಹೂಡಿಕೆಗೆ 115 ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದ್ದು, 2,32,771 ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆ ಇದೆ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ತಿಳಿಸಿದರು.
ವಿಧಾನಸೌಧದಲ್ಲಿ, ಕೈಗಾರಿಕೆ ಹಾಗೂ ಮೂಲಸೌಲಭ್ಯ ಇಲಾಖೆಗಳಲ್ಲಿನ 2 ವರ್ಷಗಳಲ್ಲಿನ ಸಾಧನೆ ಬಿಂಬಿಸುವ ಪ್ರಗತಿ ಪಥದ ಮುಂದಣ ಹೆಜ್ಜೆ ಕೈಪಿಡಿ ಅನಾವರಣ ಮಾಡಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಲಾಖೆಯಲ್ಲಿನ ಸಾಧನೆ ತೃಪ್ತಿ ತಂದಿದೆ ಎಂದರು.
ದೇಶ ವಿದೇಶಗಳ ಪ್ರಮುಖ ಕೈಗಾರಿಕೆಗಳು, ಬಹುರಾಷ್ಟ್ರೀಯ ಕಂಪನಿಗಳು ಹಾಗೂ ಉದ್ಯಮ ದಿಗ್ಗಜರಿಂದ ಬಂಡವಾಳ ಹೂಡಿಕೆ ಆಕರ್ಷಿಸುವಲ್ಲಿ ರಾಜ್ಯವು ತನ್ನ ಮುಂಚೂಣಿ ಸ್ಥಾನ ಉಳಿಸಿಕೊಂಡಿದೆ. ಫೆಬ್ರುವರಿಯಲ್ಲಿ ನಡೆದ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ಇನ್ವೆಸ್ಟ್ ಕರ್ನಾಟಕದಲ್ಲಿ ಒಟ್ಟು 98 ಕಂಪನಿಗಳ ಜೊತೆಗೆ 6,23,970 ಕೋಟಿ ಹೂಡಿಕೆಯ ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದೆ. 4,03,533 ಕೋಟಿ ಹೂಡಿಕೆ ಮಾಡಲು 1,101 ಕಂಪನಿಗಳು ವಿವಿಧ ಸಮಿತಿಗಳಿಂದ ಅನುಮೋದನೆ ಪಡೆದಿವೆ. ಈ ಎಲ್ಲ ಯೋಜನೆಗಳಿಂದ ರಾಜ್ಯದಲ್ಲಿ 6 ಲಕ್ಷ ಉದ್ಯೋಗಗಳು ಸೃಷ್ಟಿಯಾಗಬಹುದು ಎಂದರು.
ಕೈಗಾರಿಕ ಕ್ಷೇತ್ರದಲ್ಲಿ ಹಿಂದುಳಿದ ಜಿಲ್ಲೆಗಳ, ತಾಲ್ಲೂಕುಗಳಲ್ಲಿ ಹೂಡಿಕೆ ಮಾಡಲು ಹೆಚ್ಚಿನ ಉತ್ತೇಜನೆಗಳನ್ನು ನೀಡುತ್ತಿದೆ. ಇದೇ ಕಾರಣಕ್ಕೆ ಉದ್ಯೋಗ ಸೃಷ್ಟಿಯಲ್ಲಿ ಶೇ.75ರಷ್ಟು ಬೆಂಗಳೂರಿನ ಆಚೆಗೆ ಹಾಗೂ ಶೇ.45 ರಷ್ಟು ಉತ್ತರ ಕರ್ನಾಟಕದ ಭಾಗದಲ್ಲಿ ಇರಲಿವೆ ಎಂದರು.
ಕ್ವಿನ್ ಸಿಟಿ, ಸ್ವಿಫ್ಟ್ ಸಿಟಿ:
ದೊಡ್ಡಬಳ್ಳಾಪುರ-ದಾಬಸ್‌ಪೇಟೆ ರಸ್ತೆಯಲ್ಲಿ 40 ಸಾವಿರ ಕೋಟಿ ಹೂಡಿಕೆಯ ಜ್ಞಾನ, ಯೋಗಕ್ಷೇಮ ಮತ್ತು ನಾವೀನ್ಯತೆಯ ಕ್ವಿನ್ ಸಿಟಿಯ ಮೊದಲ ಹಂತ ಅಭಿವೃದ್ಧಿಪಡಿಸಲಾಗುತ್ತಿದೆ.
ಕೃತಕ ಬುದ್ಧಿಮತ್ತೆ, ದತ್ತಾಂಶ ವಿಶ್ಲೇಷಣೆ, ಹಣಕಾಸು - ತಂತ್ರಜ್ಞಾನ ಉದ್ಯಮಗಳಿಗೆ ನೆಲೆ ಕಲ್ಪಿಸಲು ಬೆಂಗಳೂರಿಗೆ ಸಮೀಪದಲ್ಲಿ 1 ಸಾವಿರ ಎಕರೆ ವಿಸ್ತೀರ್ಣದಲ್ಲಿ ಸ್ವ್‌ಟಿ ಸಿಟಿ ನಿರ್ಮಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಂಡಿದೆ ಎಂದರು.
ಏಕಗವಾಕ್ಷಿ ಜಾಲ:
ಮೈಕ್ರೊಸಾಫ್ಟ್ ಸಹಯೋಗದಲ್ಲಿ ಹೂಡಿಕೆದಾರ ಸ್ನೇಹಿ ಏಕಗವಾಕ್ಷಿ ಅಂತರ್ಜಾಲ ತಾಣವನ್ನು ಅಭಿವೃದ್ಧಿಸಲಾಗಿದೆ. 30 ಇಲಾಖೆಗಳ 100ಕ್ಕೂ ಹೆಚ್ಚು ಸೇವೆಗಳನ್ನು ಈ ತಾಣದಲ್ಲಿ ಸುಲಭವಾಗಿ ಪಡೆಯಬಹುದಾಗಿದೆ ಎಂದು ವಿವರಿಸಿದರು.
ಆಯ್ದ 6 ತಯಾರಿಕಾ ವಲಯಗಳ ಬಲವರ್ಧನೆಗೆ ಕೈಗೊಳ್ಳಬೇಕಾದ ಉಪಕ್ರಮಗಳ ಕುರಿತು ನಡೆದ ಉತ್ಪಾದನಾ ಮಂಥನದಲ್ಲಿ ಉದ್ಯಮ ವಲಯದ ದಿಗ್ಗಜರು ರಾಜ್ಯ ಸರ್ಕಾರಕ್ಕೆ ನೀಲನಕ್ಷೆ ಸಿದ್ಧಪಡಿಸಿ ಕೊಟ್ಟಿದ್ದಾರೆ. ಉದ್ಯಮ ಪ್ರಮುಖರ ನಿರೀಕ್ಷೆಗಳನ್ನು ಈಡೇರಿಸಲು ಸರ್ಕಾರ ಬದ್ಧವಾಗಿದೆ ಎಂದರು.
ಏಷ್ಯಾದ ಎಂಆರ್‌ಒ ರಾಜಧಾನಿ:
ವೈಮಾನಿಕ ಕ್ಷೇತ್ರದಲ್ಲಿ ಬೆಂಗಳೂರು ಈಗ ವಿಮಾನಗಳ ವಿಮಾನಗಳ ನಿರ್ವಹಣೆ, ದುರಸ್ತಿ ಮತ್ತು ಸಂಪೂರ್ಣ ನವೀಕರಣದ (ಎಂಆರ್‌ಒ) ಏಷ್ಯಾದ ರಾಜಧಾನಿ ಯಾಗಿ ರೂಪುಗೊಳ್ಳಲಿದೆ. ಟಾಟಾ, ಇಂಡಿಗೊ, ಲಾಕ್ಕೀಡ್ ಸಂಸ್ಥೆಗಳು ಕ್ರಮವಾಗಿ 1460 ಕೋಟಿ, 1100 ಕೋಟಿ ಹಾಗೂ 500 ಕೋಟಿ ಹೂಡಿಕೆ ಮಾಡಲಿವೆ ಎಂದರು.
ಕೋಲಾರ ಜಿಲ್ಲೆಯ ಶ್ರೀನಿವಾಸಪುರದಲ್ಲಿ ಫಾರ್ಮಾ ಪಾರ್ಕ್, ವಿಜಯಪುರದಲ್ಲಿ ಸೋಲಾರ್ ಸೆಲ್ ಪಾರ್ಕ, ಚಿತ್ರದುರ್ಗದಲ್ಲಿ ಡ್ರೋನ್ ಪಾರ್ಕ್, ಡಾಬಸಪೇಟೆಗೆ ಸಮೀಪದ ಹನುಮಂತಪುರದಲ್ಲಿ ಮೆಗಾ ಲಾಜಿಸ್ಟಿಕ್ಸ್ (ಸರಕು ಸಾಗಣೆ) ಪಾರ್ಕ್, ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆಯಲ್ಲಿ ಡೀಪ್-ಟೆಕ್ ಪಾರ್ಕ್, ಹುಬ್ಬಳ್ಳಿಯಲ್ಲಿ 200 ಎಕರೆ ಪ್ರದೇಶದಲ್ಲಿ ಸ್ಟಾರ್ಟ್‌ಅಪ್ ಪಾರ್ಕ್ ಸ್ಥಾಪಿಸಲಾಗುತ್ತಿದೆ ಎಂದರು.
2 ವರ್ಷಗಳಲ್ಲಿನ ಹೂಡಿಕೆಯ ಸಂಕ್ಷಿಪ್ತ ವಿವರ:
1. ಫಾಕ್ಸ್‌ಕಾನ್: ₹ 22,000 ಕೋಟಿ ಹೂಡಿಕೆ
2. ಎನ್‌ಎಕ್ಸ್‌ಪಿ ಸೆಮಿಕಂಡಕ್ಟರ್: 1 ಶತಕೋಟಿ ಡಾಲರ್ ಹೂಡಿಕೆ
3. ಟೊಯೋಟಾ ಕಿರ್ಲೋಸ್ಕರ್: ₹3,700 ಕೋಟಿ
4. ಸಂವರ್ಧನ ಮದರ್ಸನ್ ಕಂಪನಿ: ₹3,700 ಕೋಟಿ
5. ಎಂವಿ ಎನರ್ಜಿ ಪ್ರೈವೇಟ್ ಲಿಮಿಟೆಡ್: ₹5,000 ಕೋಟಿ
6. ಕ್ರೋನ್ಸ್ ಕಂಪನಿ: ₹315 ಕೋಟಿ
7. ಸನ್ಸೇರಾ ಕಂಪನಿ: ₹2,150 ಕೋಟಿ
8. ಡಿಎನ್ ಸೊಲ್ಯೂಷನ್ಸ: ₹998 ಕೋಟಿ
9. ಎಪ್ಸಿಲಾನ್ ಗ್ರೂಪ್: ₹15,350 ಕೋಟಿ
10: ಜಿಂದಾಲ್ ಎನರ್ಜಿ ಕಂಪನಿ: ₹4,960 ಕೋಟಿ
11. ನೈಡೆಕ್: 600 ಕೋಟಿ
---
ಆಸ್ತಿ ತೆರಿಗೆ ಸಂಗ್ರಹದಲ್ಲಿ ಶೇ.70ರಷ್ಟು ಹಣ
ಮೂಲಸೌಕರ್ಯಕ್ಕೆ ಮೀಸಲು: ಎಂ.ಬಿ.ಪಾಟೀಲ್
ರಾಜ್ಯದಲ್ಲಿ ವ್ಯವಸ್ಥಿತ ಮತ್ತು ವ್ಯಾಪಕ ಕೈಗಾರಿಕಾ ಬೆಳವಣಿಗೆಯನ್ನು ಸಾಧಿಸಲು 44,165 ಎಕರೆ ವಿಸ್ತೀರ್ಣದಲ್ಲಿ ಹಾಲಿ ಇರುವ ಪೀಣ್ಯ ಸೇರಿದಂತೆ ಒಟ್ಟು 18 ಕೈಗಾರಿಕಾ ವಸಹಾತುಗಳನ್ನು ವಿಶೇಷ ಬಂಡವಾಳ ಹೂಡಿಕೆ ಪ್ರದೇಶಗಳಾಗಿ (ಎಸ್‌ಐಆರ್- ಸ್ಪೆಷಲ್ ಇನ್ವೆಸ್ಟ್ಮೆಂಟ್ ರೀಜನ್) ಘೋಷಣೆ ಮಾಡಿದ್ದು, ಅಧಿಸೂಚನೆ ಹೊರಡಿಸಲಾಗಿದೆ. ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದು ಸಚಿವ ಎಂ.ಬಿ.ಪಾಟೀಲ ತಿಳಿಸಿದರು.
ಎಸ್‌ಐಆರ್ ಮಾದರಿಯನ್ನು ಜಾರಿಗೆ ತರಲಾಗುತ್ತಿದೆ. ಹೊಸ ವ್ಯವಸ್ಥೆಯಿಂದಾಗಿ ಈ ಪ್ರದೇಶಗಳಲ್ಲಿನ ಕೈಗಾರಿಕೆಗಳಿಂದ ಇನ್ನು ಮುಂದೆ ಕೆಐಎಡಿಬಿಯೇ ಆಸ್ತಿ ತೆರಿಗೆ ಸಂಗ್ರಹಿಸಲಿದೆ. ಅದರಲ್ಲಿ ಶೇ.70ರಷ್ಟು ಹಣವನ್ನು ಸ್ಥಳೀಯ ಕೈಗಾರಿಕಾ ಪ್ರದೇಶದ ಅಭಿವೃದ್ಧಿಗೆ ಮೀಸಲಿಡಲಿದೆ. ಉಳಿದ ಶೇ 30ರಷ್ಟು ಹಣವನ್ನು ಸ್ಥಳೀಯ ಪಾಲಿಕೆ, ನಗರಸಭೆ ಸಂಸ್ಥೆಗಳಿಗೆ ನೀಡಲಿದೆ ಎಂದರು.
ಧಾರವಾಡ ಜಿಲ್ಲೆಯ ಮುಮ್ಮಿಗಟ್ಟಿ ಮತ್ತು ನರೇಂದ್ರ ಹಾಗೂ ಗುಗ್ಗಲಗಟ್ಟಿಗಳಲ್ಲಿ 2818.23 ಎಕರೆ ಜಾಗವನ್ನು ಗುರುತಿಸಲಾಗಿದ್ದು, ಮಾ.19ರಂದು ಅಧಿಸೂಚನೆ ಹೊರಬಿದ್ದಿದೆ. ಒಟ್ಟು 44165.71 ಎಕರೆ ಭೂಮಿಯನ್ನು ವಿಶೇಷ ಹೂಡಿಕೆ ಪ್ರದೇಶದಡಿ ತರಲಾಗುತ್ತಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತರಾದ ಗುಂಜನ್ ಕೃಷ್ಣ, ಎಂಎಸ್‌ಐಎಲ್ ವ್ಯವಸ್ಥಾಪಕ ನಿರ್ದೇಶಕ ಡಾ.ಮನೋಜ್ ಕುಮಾರ, ಕೆಐಎಡಿಬಿ ಸಿಇಒ ಡಾ.ಮಹೇಶ್, ಕೆಎಸ್‌ಡಿಎಲ್ ವ್ಯವಸ್ಥಾಪಕ ನಿರ್ದೇಶಕ ಡಾ.ಪ್ರಶಾಂತ ಅವರು ಇದ್ದರು.