ನದಿಯ ನೀರಿನಲ್ಲಿ ಸಿಲುಕಿದ್ದ ವ್ಯಕ್ತಿಗೆ ಸಹಾಯಾಸ್ತ ಚಾಚಿದ ಒರಾಂಗುಟನ್​: ಬೆಲೆ ಕಟ್ಟಲಾಗದ ಫೋಟೋ ಇದು!

Oranguton
Published on

ನವದೆಹಲಿ: ಮಾನವ ಮತ್ತು ಪ್ರಾಣಿ ಸಂಘರ್ಷದಂತಹ ಘಟನೆಯ ನಡುವೆ ಇಬ್ಬರ ನಡುವಿನ ಸಾಮರಸ್ಯವನ್ನು ನೋಡಿದಾಗ ತುಂಬಾ ಖುಷಿಯಾಗುತ್ತದೆ. ಅದರಲ್ಲೂ ಸಂಕಷ್ಟದಲ್ಲಿರೋ ಪ್ರಾಣಿಯ ನೆರವಿಗೆ ಮನುಷ್ಯ ಬರುವುದನ್ನು ಹೆಚ್ಚಾಗಿ ನೋಡಿದ್ದೇವೆ. ಆದರೆ, ಅದೇ ಮಾನವ ಕಷ್ಟದಲ್ಲಿದ್ದಾಗ ಪ್ರಾಣಿಗಳು ಜೀವ ಉಳಿಸಲು ಮುಂದಾಗುವ ಸನ್ನಿವೇಶವೇ ವಿರಳ. ಅಂತಹದ್ದೇ ಒಂದು ಸಂದರ್ಭ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಹೌದು, ನದಿಯ ನೀರಿನಲ್ಲಿ ಸಿಲುಕಿದ ಸಂರಕ್ಷಣಾವಾದಿಯನ್ನು ರಕ್ಷಿಸಲು ಕೋತಿ ಜಾತಿಯ ಒರಾಂಗುಟನ್​ ಸಹಾಯಾಸ್ತ ಚಾಚಿದ ಫೋಟೋವೊಂದು ನೆಟ್ಟಿಗರ ಭಾವನೆಗಳನ್ನು ಬಡಿದೆಬ್ಬಿಸಿದೆ. ಫೋಟೋವನ್ನು ಏಷ್ಯಾದ ದ್ವೀಪ ರಾಷ್ಟ್ರ ಬೊರ್ನಿಯೋ ಸಂರಕ್ಷಣಾ ಅರಣ್ಯದಲ್ಲಿ ಸೆರೆಹಿಡಿಯಲಾಗಿದೆ. ವಾನರ ಪ್ರಭೇದ ಹೆಚ್ಚಾಗಿ ವಾಸಿಸುವ ಏರಿಯಾದಲ್ಲಿ ಅವುಗಳನ್ನು ಹಾವುಗಳಿಂದ ರಕ್ಷಿಸಲು ಸಂರಕ್ಷಣಾವಾದಿ ಹಾವುಗಳಿಗಾಗಿ ಹುಡುಕುತ್ತಿರುತ್ತಾರೆ. ಮಣ್ಣು ಮಿಶ್ರಿತ ನದಿಯ ನೀರಿನಲ್ಲಿ ಸೊಂಟದವರೆಗೆ ಮುಳುಗಿದ ಸ್ಥಿತಿಯಲ್ಲಿದ್ದವನನ್ನು ನೋಡಿ ಒರಾಂಗುಟನ್​ ರಕ್ಷಣೆಗಾಗಿ ಕೈಚಾಚುತ್ತದೆ.

ಈ ಫೋಟೋವನ್ನು ಅನಿಲ್​ ಪ್ರಭಾಕರ್​ ಎಂಬುವರು ಸೆರೆಹಿಡಿದಿದ್ದಾರೆ. ಅನಿಲ್​ ತಮ್ಮ ಸ್ನೇಹಿತರೊಂದಿಗೆ ಸಫಾರಿಯಲ್ಲಿದ್ದಾಗ ಈ ಹೃದಯಸ್ಪರ್ಶಿ ದೃಶ್ಯವನ್ನು ತಮ್ಮ ಕ್ಯಾಮರಾ ಕಣ್ಣಲ್ಲಿ ಸೆರೆ ಹಿಡಿದಿದ್ದಾರೆ.

ಸಂರಕ್ಷಣವಾದಿಯು ಬೊರ್ನಿಯೋ ಸರ್ವೈವಲ್​ ಫೌಂಡೇಶನ್​ನಲ್ಲಿ ಕೆಲಸ ಮಾಡುವವರಾಗಿದ್ದು, ಅಳಿವಿನಂಚಿನಲ್ಲಿರುವ ಜೀವಿಗಳನ್ನು ರಕ್ಷಿಸುವುದು ಈ ಫೌಂಡೇಶನ್​ ಗುರಿಯಾಗಿದೆ. ಈ ಫೋಟೋವನ್ನು ಬೊರ್ನಿಯೋ ಒರಾಂಗುಟನ್​ ಸರ್ವೈವಲ್ ಯುಕೆ ಎಂಬ ಫೇಸ್​ಬುಕ್​ ಪೇಜ್​ನಲ್ಲಿ ಗುರುವಾರ ಶೇರ್​ ಮಾಡಿಕೊಂಡಿದ್ದಾರೆ.

ಅನಿಲ್​ ಅವರ ಪ್ರಕಾರ ಒರಾಂಗುಟನ್​ ಸಹಾಯಾಸ್ತವನ್ನು ಸಂರಕ್ಷಣಾವಾದಿ ನಿರಾಕರಿಸಿದರಂತೆ. ಈ ಬಗ್ಗೆ ಪ್ರಶ್ನಿಸಿದಾಗ ಅದೊಂದು ಕಾಡು ಪ್ರಾಣಿಯಾಗಿದ್ದು, ನಾವು ಅದರೊಂದಿಗೆ ಹೆಚ್ಚು ಪಳಗಿಲ್ಲದಿರುವುದರಿಂದ ಅಂತರ ಕಾಯ್ದುಕೊಳ್ಳುವುದು ಒಳಿತು ಎಂದು ತಿಳಿಸಿದ್ದಾಗಿ ಅನಿಲ್​ ಹೇಳಿದ್ದಾರೆ. ಆದರೂ ಫೋಟೋ ಕುರಿತು ಸಾಕಷ್ಟು ಮೆಚ್ಚುಗೆಗಳು ಜಾಲತಾಣದಲ್ಲಿ ಹರಿದು ಬರುತ್ತಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net