

ಶಿವಮೊಗ್ಗ: ದೇಶದ ಗಡಿ ಭಾಗದಲ್ಲಿ ಯುದ್ಧದ ಸ್ಥಿತಿ ನಿರ್ಮಾಣವಾಗಿರುವ ನಡುವೆ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯ ಪ್ರಮುಖ ಜಲಾಶಯಗಳಲ್ಲಿ ಹೆಚ್ಚಿನ ಭದ್ರತೆ ಒದಗಿಸಲಾಗುತ್ತಿದೆ. ಗಾಜನೂರಿನ ತುಂಗಾ ಜಲಾಶಯ ಹಾಗೂ ಬಿಆರ್‌ಪಿಯ ಭದ್ರಾ ಜಲಾಶಯಕ್ಕೆ ಪೊಲೀಸ್ ಭದ್ರತೆ ಒದಗಿಸಲಾಗಿದೆ.
ಹಲವು ವರ್ಷಗಳ ಹಿಂದಿನಿಂದಲೂ ಭದ್ರಾ ಹಾಗೂ ತುಂಗಾ ಜಲಾಶಯಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ. ಭದ್ರಾ ಜಲಾಶಯ ಸಂಪೂರ್ಣ ಭರ್ತಿಯಾದ ಸಂದರ್ಭದಲ್ಲಿ ಕ್ರಸ್ಟ್‌ಗೇಟ್‌ನಿಂದ ನೀರು ಹೊರಬಿಡುವ ಸಮಯದಲ್ಲಿ ಒಂದು ದಿನದ ಮಟ್ಟಿಗೆ ಸ್ಥಳೀಯರು ಜಲಾಶಯದ ಮೇಲ್ಭಾಗದಲ್ಲಿ ವೀಕ್ಷಣೆ ಮಾಡಲು ಅವಕಾಶ ನೀಡಲಾಗುತ್ತದೆ. ಉಳಿದಂತೆ ಇಲ್ಲಿ ಸಾರ್ವಜನಿಕರಿಗೆ ಪ್ರವೇಶ ಇರುವುದಿಲ್ಲ.
ಭದ್ರಾ ಜಲಾಶಯದ ಮೂರು ಗೇಟ್‌ಗಳ ಪೈಕಿ ಎರಡು ಗೇಟ್‌ಗಳಲ್ಲಿ ಶಸ್ತ್ರಸಜ್ಜಿತ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ. ಮತ್ತೊಂದು ಗೇಟ್ ಚಿಕ್ಕಮಗಳೂರು ಜಿಲ್ಲೆ ವ್ಯಾಪ್ತಿಗೆ ಸೇರುತ್ತದೆ. ಮುಂದಿನ ಒಂದೆರಡು ದಿನಗಳಲ್ಲಿ ರಾಜ್ಯ ಕೈಗಾರಿಕಾ ಭದ್ರತಾ ಪಡೆ ಸಿಬ್ಬಂದಿ ನಿಯೋಜಿಸಲಾಗುತ್ತದೆ. ಶಿವಮೊಗ್ಗ ತಾಲೂಕಿನ ತುಂಗಾ ಜಲಾಶಯಕ್ಕೂ ಸದ್ಯ ಸ್ಥಳೀಯ ಪೊಲೀಸ್ ಭದ್ರತೆ ಒದಗಿಸಲಾಗಿದೆ.
ಎರಡು ಜಲಾಶಯಗಳಿಗೆ ಮೂರು ಪಾಳಿಯಲ್ಲಿ ಪೊಲೀಸ್ ಸಿಬ್ಬಂದಿ ಕಾವಲಿರುತ್ತದೆ. ಇನ್ನು ಮೂರ‌್ನಾಲ್ಕು ದಿನಗಳ ಕಾಲ ಪೊಲೀಸರೇ ಜಲಾಶಯಗಳಿಗೆ ಭದ್ರತೆ ಒದಗಿಸಲಿದ್ದಾರೆ. ಬಳಿಕ ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆ ಸಿಬ್ಬಂದಿ ನಿಯೋಜಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಈಗಾಗಲೇ ಶರಾವತಿ ವಿದ್ಯುದಾಗಾರ, ವಾರಾಹಿ ಮುಂತಾದ ಕಡೆಗಳಲ್ಲಿ ಸೂಕ್ತ ಭದ್ರತೆ ಒದಗಿಸಲಾಗಿದೆ. ಇದೀಗ ತುಂಗಾ ಹಾಗೂ ಭದ್ರಾ ಜಲಾಶಯಗಳಿಗೂ ಹೆಚ್ಚಿನ ಭದ್ರತೆ ಒದಗಿಸಿರುವುದರಿಂದ ಆತಂಕ ದೂರಾಗಿದೆ. ಇಲಾಖೆ ಹಿರಿಯ ಸಿಬ್ಬಂದಿಯನ್ನು ಹೊರತುಪಡಿಸಿ ಬೇರೆಯವರಿಗೆಲ್ಲ ಪ್ರವೇಶ ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.
ಭಾರತ ಹಾಗೂ ಪಾಕ್ ನಡುವಿನ ಉದ್ವಿಘ್ನ ಸ್ಥಿತಿ ಶಮನವಾಗಿ ಪರಿಸ್ಥಿತಿ ಸಹಜ ಸ್ಥಿತಿಗೆ ಬರುವವರೆಗೂ ಜಲಾಶಯಗಳ ಭದ್ರತೆಯನ್ನು ಮುಂದುವರಿಸಲಾಗುತ್ತದೆ. ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆಯ ಒಂದು ಘಟಕ ಶಿವಮೊಗ್ಗದಲ್ಲೇ ಕಾರ್ಯಾರಂಭ ಮಾಡಿರುವುದರಿಂದ ಹೆಚ್ಚಿನ ಭದ್ರತೆ ಅವಶ್ಯಕತೆಯಿದ್ದಲ್ಲಿ ಸಿಬ್ಬಂದಿ ಕೊರತೆ ಆಗುವುದಿಲ್ಲ.