

ನವದೆಹಲಿ: ಚಿನ್ನದ ಬೆಲೆ ಏರಿಕೆಯಾಗುವ ಜತೆಗೆ ಇದರಲ್ಲಿ ದೇಶದ ಜನರ ಹೂಡಿಕೆಯೂ ಹೆಚ್ಚಿದೆ. ಅಕ್ಟೋಬರ್ನಲ್ಲಿ ಗೋಲ್ಡ್ ಎಕ್ಸ್ಚೆಂಜ್-ಟ್ರೇಡೆಡ್ ಫಂಡ್ಸ್ (ಇಟಿಎಫ್)ನಲ್ಲಿ 7500 ಕೋಟಿ ರೂ.ಗಳ ಹೂಡಿಕೆಯಾಗಿದೆ. ವರ್ಲ್ಡ್ ಗೋಲ್ಡ್ ಕೌನ್ಸಿಲ್ನ ವರದಿಯ ಪ್ರಕಾರ, ಇಟಿಎಫ್ನಲ್ಲಿ ಕಳೆದ ಐದು ತಿಂಗಳಿಂದ ಹೂಡಿಕೆ ಹೆಚ್ಚುತ್ತಲೇ ಇದೆ. ಮೇನಲ್ಲಿ ಮಾತ್ರ ಹೂಡಿಕೆದಾರರು ಇಟಿಎಫ್ನಿಂದ 602 ಕೋಟಿ ರೂ. ಹಿಂಪಡೆದಿದ್ದರು. ಆದರೆ, ಜೂನ್ನಿಂದ ಅಕ್ಟೋಬರ್ವರೆಗಿನ ಐದು ತಿಂಗಳಲ್ಲಿ ಹೂಡಿಕೆ ಪ್ರಮಾಣ ಹೆಚ್ಚುತ್ತಲೇ ಇದೆ. ಸೆಪ್ಟೆಂಬರ್ನಲ್ಲಿ 8075 ಕೋಟಿ ರೂ. ಹೂಡಿಕೆ ಮಾಡಲಾಗಿದೆ. 2025ರ ಜನವರಿಯಿಂದ ಅಕ್ಟೋಬರ್ವರೆಗೆ ಇಟಿಎಫ್ನಲ್ಲಿ 25,500 ಕೋಟಿ ರೂ. ಹೂಡಿಕೆಯಾಗಿದ್ದು, ಇದು ಸಾರ್ವಕಾಲಿಕ ಗರಿಷ್ಠ ಮೊತ್ತವಾಗಿದೆ. ಕಳೆದ ಒಂದು ವರ್ಷದಲ್ಲಿ ಇಟಿಎಫ್ನಿಂದ ಸರಾಸರಿ 56% ರಿಟರ್ನ್ ಬಂದಿದೆ.
ಭಾರತ ಮೂರನೇ ಸ್ಥಾನದಲ್ಲಿ: ಅಕ್ಟೋಬರ್ ತಿಂಗಳ ಚಿನ್ನ ಇಟಿಎಫ್ ಹೂಡಿಕೆಯಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ. 56 ಸಾವಿರ ಕೋಟಿ ರೂ. ಹೂಡಿಕೆಯೊಂದಿಗೆ ಅಮೆರಿಕ ಮೊದಲ ಸ್ಥಾನದಲ್ಲಿದ್ದರೆ, 40 ಸಾವಿರ ಕೋಟಿ ರೂ. ಹೂಡಿಕಯೊಂದಿಗೆ ಚೀನಾ ಎರಡನೇ ಸ್ಥಾನದಲ್ಲಿದೆ.
2024ರ ಡಿಸೆಂಬರ್ 31ರಂದು 10 ಗ್ರಾಂ ಚಿನ್ನದ (ಶೇ.99.9 ಶುದ್ಧತೆ) ದರ 76,162 ರೂ. ಇತ್ತು. ನವೆಂಬರ್ 07ರ ಹೊತ್ತಿಗೆ 1.22 ಲಕ್ಷ ರೂ. ತಲುಪಿದೆ. ಅಂದರೆ, 11 ತಿಂಗಳ ಅವಧಿಯಲ್ಲೇ 45 ಸಾವಿರಕ್ಕೂ ಅಧಿಕ ಹೆಚ್ಚಳ ದಾಖಲಿಸಿದೆ.
ನವದೆಹಲಿ: ಅಕ್ಟೋಬರ್ ತಿಂಗಳಲ್ಲಿ ಷೇರುಗಳ ಖರೀದಿಗೆ ಆದ್ಯತೆ ನೀಡಿದ್ದ ವಿದೇಶಿ ಹೂಡಿಕೆದಾರರು (ಎಫ್ಪಿಐ) ನವೆಂಬರ್ ಮೊದಲ ವಾರದಲ್ಲಿ ದೇಶದ ಷೇರುಪೇಟೆಯಿಂದ ಹಣ ಹಿಂಪಡೆಯತೊಡಗಿದ್ದಾರೆ. ಎಫ್ಪಿಐಗಳು ನವೆಂಬರ್ನಲ್ಲಿ ಇದುವರೆಗೆ ಒಟ್ಟು 12,569 ಕೋಟಿ ರೂ. ಬಂಡವಾಳವನ್ನು ಹಿಂಪಡೆದಿದ್ದಾರೆ. ವಿದೇಶಿ ಹೂಡಿಕೆದಾರರು ಅಕ್ಟೋಬರ್ನಲ್ಲಿ ಒಟ್ಟು 14,610 ಕೋಟಿ ರೂ. ಹೂಡಿಕೆ ಮಾಡಿದ್ದರು. ಆದರೆ, ಸೆಪ್ಟೆಂಬರ್ನಲ್ಲಿ 23,885 ಕೋಟಿ ರೂ., ಆಗಸ್ಟ್ನಲ್ಲಿ 34,990 ಕೋಟಿ ರೂ. ಹಾಗೂ ಜುಲೈನಲ್ಲಿ 17,700 ಕೋಟಿ ರೂ. ಹೂಡಿಕೆ ಹಿಂಪಡೆದಿದ್ದರು. ನವೆಂಬರ್ ಆರಂಭದಲ್ಲಿ ಮತ್ತೆ ಷೇರು ಮಾರಾಟಕ್ಕೆ ಆದ್ಯತೆ ನೀಡಿದ್ದಾರೆ. 2025ರಲ್ಲಿ ಇದುವರೆಗೆ ವಿದೇಶಿ ಹೂಡಿಕೆದಾರರು 1.5 ಲಕ್ಷ ಕೋಟಿ ರೂ.ಗಿಂತ ಹೆಚ್ಚಿನ ಮೊತ್ತವನ್ನು ಹಿಂಪಡೆದಿದ್ದಾರೆ. ಕೆಲವು ಹೂಡಿಕೆದಾರರು ಭಾರತದ ಮಾರುಕಟ್ಟೆಗಳಿಂದ ಹಣವನ್ನು ಹಿಂಪಡೆದು, ಕೃತಕ ಬುದ್ಧಿಮತ್ತೆ ಆಧಾರಿತ ಕಂಪನಿಗಳ ಷೇರುಗಳಲ್ಲಿ ಹೂಡಿಕೆ ಮಾಡುತ್ತಿದ್ದಾರೆ ಎಂದು ತಜ್ಞರು ವಿವರಿಸಿದ್ದಾರೆ.