

ಕಿರುವಾರ ಎಸ್. ಸುದರ್ಶನ್ ಕೋಲಾರ
ಲೋಕಸಭಾ ಚುನಾವಣಾ ಕಣದಲ್ಲಿರುವ ಪ್ರಚಾರ ಬಿರುಸುಗೊಂಡಿರುವ ನಡುವೆ ರಾಜಕೀಯ ಪಕ್ಷಗಳ ಮುಖಂಡರು, ಕಾರ್ಯಕರ್ತರಲ್ಲಿನ ಗುಂಪುಗಾರಿಕೆ ಹೆಚ್ಚುತ್ತಿರುವುದು ಅಭ್ಯರ್ಥಿಗಳಲ್ಲಿ ಆತಂಕ ಸೃಷ್ಟಿಸಿದೆ.
ಕೋಲಾರ ಮೀಸಲು ಲೋಕಸಭೆ ಕ್ಷೇತ್ರದಲ್ಲಿ ಇತ್ತೀಚೆಗೆ ಅಭ್ಯರ್ಥಿಗಳ ಪರವಾಗಿ ರಾಜ್ಯ ನಾಯಕರು ಪ್ರಚಾರಕ್ಕೆ ಆಗಮಿಸುತ್ತಿದ್ದು, ನಾಯಕರ ಭಾಷಣದ ವೇಳೆ ಸ್ಥಳಿಯವಾಗಿ ಪರಿಣಾಮ ಬೀರುವ ಬಾಂಬ್ ಸಿಡಿಸುತ್ತಿದ್ದಾರೆ. ಇದು ಕಾರ್ಯಕರ್ತರು, ಮುಖಂಡರ ಅಸಮಾಧಾನಕ್ಕೂ ಕಾರಣವಾಗುತ್ತಿದೆ.
ಮೈತ್ರಿ ಪಕ್ಷದಿಂದ ವಿಧಾನಸಭಾವಾರು ಸಮನ್ವಯ ಸಮಿತಿ ಸಭೆ ಪೂರ್ಣಗೊಂಡಿದ್ದು, ಹೋಬಳಿವಾರು ಸಭೆ ಹಮ್ಮಿಕೊಂಡಿದ್ದಾರೆ. ಎನ್ಡಿಎ ಅಭ್ಯರ್ಥಿ ಮಲ್ಲೇಶ್ ಬಾಬು ಪರವಾಗಿ ಈಗಾಲೇ ಸ್ಟಾರ್ ಪ್ರಚಾರಕಿ ಶ್ರುತಿ, ಪ್ರತಿಪಕ್ಷದ ನಾಯಕ ಆರ್.ಅಶೋಕ್ ಸೇರಿ ಹಲವರು ಪ್ರಚಾರ ನಡೆಸಿದ್ದಾರೆ. ಕಾಂಗ್ರೆಸ್ನಿಂದಲೂ ವಿಧಾನಸಭಾ ಕ್ಷೇತ್ರವಾರು ಮುಖಂಡರ ಸಭೆಗಳು ಮುಗಿದಿದ್ದು, ಹೋಬಳಿಮಟ್ಟದಲ್ಲಿ ಪ್ರಚಾರ ಹಮ್ಮಿಕೊಂಡಿದ್ದಾರೆ. ಗೌತಮ್ ಪರ ಪ್ರಚಾರಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವರಾದ ಡಾ.ಎಂ.ಸಿ.ಸುಧಾಕರ್, ಬೈರತಿ ಸುರೇಶ್ ಸೇರಿ ಹಲವು ರಾಜ್ಯ ಮುಖಂಡರು ಆಗಮಿಸಿದ್ದರು. ಆದರೆ, ರಾಜ್ಯ ನಾಯಕರು ಜಿಲ್ಲೆಗೆ ಆಗಮಿಸಿದಾಗ ರಾಜಕೀಯ ಮುಖಂಡರು, ಕಾರ್ಯಕರ್ತರ ಗುಂಪುಗಾರಿಗೆ ಪ್ರದರ್ಶನವಾಗುತ್ತಿದೆ. ಇದು ಗೆಲುವಿನ ಮೇಲೆ ಪರಿಣಾಮ ಬೀರಲಿದ್ದು, ಭಿನ್ನಾಭಿಪ್ರಾಯ ಶಮನ ಮಾಡುವುದು ಸವಾಲಾಗಿದೆ.
ಎಲ್ಲೂ ಕಾಣಿಸಿಕೊಳ್ಳದ ಕೆಎಚ್ಎಂ ಬೆಂಬಲಿಗರು
ಲೋಕಸಭೆ ಮತದಾನಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇವೆ, ಕಾಂಗ್ರೆಸ್ ಅಭ್ಯರ್ಥಿ ಗೌತಮ್ ಅವರ ಜತೆ ಶಾಸಕ ಕೊತ್ತೂರು ಜಿ.ಮಂಜುನಾಥ್, ಎಂಎಲ್ಸಿ ಅನಿಲ್ ಕುಮಾರ್ ಹೊರತುಪಡಿಸಿದರೆ ಬೇರೆ ಯಾರು ಕಾಣಿಸಿಕೊಳ್ಳುತ್ತಿಲ್ಲ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಿ ನಾರಾಯಣ ಸೇರಿ ಇತರ ಪದಾಧಿಕಾರಿಗಳು ವೇದಿಕೆಗಳಲ್ಲಿ ಕಾಣಿಸಿಕೊಳ್ಳದಿರುವುದು ಕಾರ್ಯಕರ್ತರಲ್ಲಿ ಹಲವು ಅನುಮಾನಗಳಿಗೆ ಕಾರಣವಾಗಿದೆ. ಚುನಾವಣೆ ಪ್ರಚಾರಕ್ಕೆ ಜಿಲ್ಲೆಯಲ್ಲಿನ ಕಾಂಗ್ರೆಸ್ ಕೆಲ ಶಾಸಕರ, ಮುಖಂಡರ ಸಹಕಾರ ಸಿಗುತ್ತಿಲ್ಲ ಎಂದು ಗೌತಮ್ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಳಿ ಅಳಲು ತೊಡಗಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು ಸಚಿವ ಕೆ.ಎಚ್.ಮುನಿಯಪ್ಪ ಕ್ಷೇತ್ರದಲ್ಲಿ ಕಾಣಿಸಿಕೊಂಡಿರುವುದು ಅಷ್ಟಕ್ಕಷ್ಟೇ. ಇನ್ನು ಕೆಜಿಎ್ ಶಾಸಕಿ ಎಂ.ರೂಪಕಲಾ ಕ್ಷೇತ್ರ ಬಿಟ್ಟು ಹೊರ ಬಂದಿಲ್ಲ.
ಉಭಯ ಪಕ್ಷಗಳಲ್ಲಿ ಭಿನ್ನಮತದ ಬೇಗುದಿ
ಕೋಲಾರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಾಳಯದ ಗುಂಪುಗಾರಿಕೆ ಜಗಜ್ಜಾಹಿರಾಗಿದೆ. ಮೈತ್ರಿ ಪಕ್ಷಗಳ ಮುಖಂಡರ ನಡುವೆಯೂ ಭಿನ್ನಮತ ಶುರುವಾಗಿದೆ. ಕೆಜಿಎಫ್ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ವೈ.ಸಂಪಂಗಿ ಹಾಗೂ ಸಂಸದ ಮುನಿಸ್ವಾಮಿ ನಡುವಿನ ವೈಮನಸ್ಸು ಮುಂದುವರಿದಿದೆ. ಕೋಲಾರ ಹಾಗೂ ಕೆಜಿಎಫ್ನಲ್ಲಿ ನಡೆದ ಜೆಡಿಎಸ್ ಮತ್ತು ಬಿಜೆಪಿ ಸಮನ್ವಯ ಸಭೆಗಳಲ್ಲೂ ಕೂಡ ಇಬ್ಬರ ನಡುವಿನ ಭಿನ್ನಾಭಿಪ್ರಾಯಗಳು ವೇದಿಕೆ ಮೇಲೆಯೇ ಪ್ರದರ್ಶನವಾಗಿತ್ತು. ಕೆಜಿಎಫ್ನಲ್ಲಿ ನಡೆದ ಸಮನ್ವಯ ಸಭೆಯಲ್ಲಿ ಸಂಸದರನ್ನು ಹೊರಗಿಟ್ಟು ಸಭೆ ಮಾಡಿದ್ದರು. ಸಂಸದ ಮುನಿಸ್ವಾಮಿ ಬೆಂಬಲಿಗ ಮೋಹನ್ಕೃಷ್ಣ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ಮತ್ತು ಚುನಾವಣೆಗೆ ಬೆಂಬಲ ಕೋರುವ ವಿಚಾರದಕ್ಕೂ ಸಂಪಂಗಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.