

ಬೆಂಗಳೂರು: ಬಿಜೆಪಿ ಸಂಘಟನಾ ಬಲ, ಪಕ್ಷದ ರಾಷ್ಟ್ರ, ರಾಜ್ಯ ನಾಯಕರಿಗೆ ಸೆಡ್ಡು ಹೊಡೆದ ‘ಸ್ವಯಂಘೋಷಿತ ನಾಯಕ’ನ ವಿರುದ್ಧ ಹೋರಾಟಕ್ಕೆ ಇಳಿದಿದ್ದೇವೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ವಾಗ್ದಾಳಿ ಮಾಡಿದರು.
ಮಾಜಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ನಿವಾಸದಲ್ಲಿ ಮಾಜಿ ಶಾಸಕರು, ಮುಖಂಡರೊಂದಿಗೆ ಶುಕ್ರವಾರ ಸಭೆ ನಡೆಸಿದ ಬಳಿಕ ಸುದ್ದಿಗಾರರಿಗೆ ಪ್ರತಿಕ್ರಿಯಿಸಿ, ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರನ್ನು ಕೂಡಲೇ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟಿಸಲು ಒತ್ತಾಯಿಸುತ್ತಿದ್ದೇವೆ. ಬಿ.ವೈ.ವಿಜಯೇಂದ್ರ ನಾಯಕತ್ವವನ್ನು ಸಂಪೂರ್ಣವಾಗಿ ಬೆಂಬಲಿಸುತ್ತಿದ್ದೇವೆ. ಯಾವುದೇ ಕಾರಣಕ್ಕೂ ಅವರ ನಾಯಕತ್ವ ಬದಲಾವಣೆ ಮಾಡಬಾರದು ಎಂದು ವರಿಷ್ಠರಿಗೆ ಕೋರಿದರು.
ಸುಪಾರಿ ಪಡೆದವರು: ಕಾಂಗ್ರೆಸ್ನಿಂದ ಸುಪಾರಿ ಪಡೆದಿರುವ ಯತ್ನಾಳ್ ಪಕ್ಷ ವಿರೋಧಿ ಚಟುವಟಿಕೆಗೆ ಇಳಿದಿದ್ದಾರೆ. ಇದೇ ಕಾರಣಕ್ಕೆ ಉಚ್ಚಾಟಿಸಲು ಒತ್ತಾಯಿಸುತ್ತಿದ್ದೇವೆ ಎಂದು ರೇಣುಕಾಚಾರ್ಯ ಹೇಳಿದರು.
ಸಂಘಟನಾ ಬಲಕ್ಕೆ ಪೆಟ್ಟು, ಕಾರ್ಯಕರ್ತರಿಗೆ ಘಾಸಿ, ಯಡಿಯೂರಪ್ಪ, ಡಿ.ವಿ.ಸದಾನಂದಗೌಡರ ಬಗ್ಗೆಯೂ ಯತ್ನಾಳ್ ಕೇವಲವಾಗಿ ಮಾತನಾಡುತ್ತಿದ್ದು, ಉಚ್ಚಾಟನೆ ಏಕೈಕ ಕ್ರಮವಾಗಿದೆ. ಪಕ್ಷದ ಹಿತದೃಷ್ಟಿಯಿಂದ ಸದಾನಂದಗೌಡ ಕೆಲವೊಂದು ಸಲಹೆ ನೀಡಿದರೆ, ನಿಮ್ಮದು ಬಿಚ್ಚಿಡುತ್ತೇನೆ ಎಂದು ಬ್ಲಾಕ್ ಮೇಲರ್ ರೀತಿ ಹೇಳಿಕೆ ಕೊಟ್ಟಿದ್ದಾರೆ. ಯತ್ನಾಳ್ ಬಾಯಿ ಮುಚ್ಚಿಕೊಂಡಿರದಿದ್ದರೆ ಬೀದಿಗೆ ಇಳಿಯಬೇಕಾಗುತ್ತದೆ ಎಂದು ರೇಣುಕಾಚಾರ್ಯ ಎಚ್ಚರಿಸಿದರು.
ಕೋಲಾರ ಜಿಲ್ಲೆಯ ಕುರುಡುಮಲೆ ವಿನಾಯಕ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವುದರೊಂದಿಗೆ ಸಂಘಟನಾ ಪ್ರವಾಸ ಕೈಗೊಂಡಿದ್ದು, ಶನಿವಾರ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ತೆರಳಿ ಚಾಮುಂಡೇಶ್ವರಿ ದರ್ಶನ ಪಡೆಯುತ್ತೇವೆ ಎಂದು ತಿಳಿಸಿದರು.
ಕಟ್ಟಾ ಸುಬ್ರಮಣ್ಯ ನಾಯ್ಡು ಮಾತನಾಡಿ, ಪಕ್ಷದ ಸಂಘಟನೆ ಬಲಿಷ್ಠವಾಗಿದ್ದು, ಯಾವುದೇ ಒಡಕಿಲ್ಲ. ಕೆಲವರು ಗೊಂದಲ ಸೃಷ್ಟಿಸಲು ಪ್ರಯತ್ನಿಸುತ್ತಿದ್ದು, ಅದರಲ್ಲಿ ಅವರು ಯಶಸ್ವಿಯಾಗುವುದಿಲ್ಲ ಎಂದು ವಿರೋಧಿ ಬಣಕ್ಕೆ ಕುಟುಕಿದರು.
ಮಾಜಿ ಸಚಿವ ಹರತಾಳು ಹಾಲಪ್ಪ ಮಾತನಾಡಿ, ಬಿ.ವೈ.ವಿಜಯೇಂದ್ರ ಅವರನ್ನು ಪಕ್ಷದ ವರಿಷ್ಠರು ರಾಜ್ಯಾಧ್ಯಕ್ಷರನ್ನಾಗಿ ಮಾಡಿದ್ದಾರೆ. ನಮಗೆ ಇಷ್ಟವೋ, ಕಷ್ಟವೋ ಪಕ್ಷದ ತೀರ್ವನವನ್ನು ಒಪ್ಪಿ ಅದರಂತೆಯೇ ನಡೆದುಕೊಳ್ಳಬೇಕು, ಕಾರ್ಯಕರ್ತರಲ್ಲಿ ಗೊಂದಲ ಸೃಷ್ಟಿ ಸಲ್ಲದು ಎಂದರು.
ಮಾಜಿ ಶಾಸಕರಾದ ಪರಣ್ಣ ಮುನವಳ್ಳಿ, ಬಸವರಾಜ ದಡೆಸುಗೂರು, ಗೋಪಾಲ ನಾಯಕ, ಬಸವರಾಜ ನಾಯಕ, ಪಿಳ್ಳಮುನಿಸ್ವಾಮಪ್ಪ, ಬೆಳ್ಳಿ ಪ್ರಕಾಶ್, ಮಸಾಲೆ ಜಯರಾಮ್ ಎಂ.ಡಿ.ಲಕ್ಷ್ಮೀನಾರಾಯಣ ಇನ್ನಿತರರು ಸಭೆಯಲ್ಲಿದ್ದರು.
ಕುರುಡುಮಲೆಯಲ್ಲಿ ವಿಶೇಷ ಪೂಜೆ: ಕುರುಡುಮಲೆ ಲಕ್ಷ್ಮೀಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿತು. ಸ್ವಪಕ್ಷದ ಹಿರಿಯ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಹೋರಾಟದ ಸಂಕಲ್ಪ ಮಾಡುವ ಮೂಲಕ ‘ಯತ್ನಾಳ್ ಹಟಾವೋ ಬಿಜೆಪಿ ಬಚಾವೋ’ ಎಂಬ ಕೂಗು ಆರಂಭಿಸಿತು.
ಮಾಜಿ ಸಚಿವರಾದ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಬಿ.ಸಿ.ಪಾಟೀಲ್, ರೇಣುಕಾಚಾರ್ಯ ನಾಯಕತ್ವದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೇಣುಕಾಚಾರ್ಯ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಸೈಕಲ್ ತುಳಿದು ಬಿಜೆಪಿ ಕಟ್ಟಿದ ಮಹಾನ್ ನೇತಾರ. ಅವರು ಹಾಗೂ ಬಿ.ವೈ.ವಿಜಯೇಂದ್ರ ಬಗ್ಗೆ ಹೊಲಸುಬಾಯಿ ಯತ್ನಾಳ್ ಇಲ್ಲಸಲ್ಲದ ಆರೋಪ ಮಾಡುವುದನ್ನು ನಿಲ್ಲಿಸಬೇಕು ಎಂದು ಎಚ್ಚರಿಕೆ ನೀಡಿದರು. ಬೈ ಎಲೆಕ್ಷನ್ ಸೋಲಿಗೆ ವಿಜಯೇಂದ್ರ ಅವರನ್ನು ಹೊಣೆ ಮಾಡುವುದು ಸರಿಯಲ್ಲ, ಯತ್ನಾಳ್ ಗೆದ್ದಿದ್ದು ಕಾಂಗ್ರೆಸ್ ನಾಯಕರ ಬೆಂಬಲದಿಂದ. ಅದೊಂದು ಗೆಲುವಲ್ಲ ಎಂದು ಮಾಜಿ ಸಚಿವ ಬಿ.ಸಿ.ಪಾಟೀಲ್ ಲೇವಡಿ ಮಾಡಿದರು.
ಯತ್ನಾಳ್ ಹೀಗೆಯೇ ಮಾತನಾಡಿದರೆ ನಾವೂ ಕೀಳುಮಟ್ಟಕ್ಕೆ ಇಳಿದು ಮಾತನಾಡುತ್ತೇವೆ. ಸದಾನಂದಗೌಡರು ಎಷ್ಟು ಒಳ್ಳೆಯವರು, ಅವರ ಬಗ್ಗೆ ಹಗುರವಾಗಿ ಮಾತನಾಡಿದರೆ ಸಹಿಸಲು ಸಾಧ್ಯವಿಲ್ಲ ಎಂದು ಕಟ್ಟಾ ಸಬ್ರಹ್ಮಣ್ಯನಾಯ್ಡು ಹೇಳಿದರು.
ಹೊಂದಾಣಿಕೆ ರಾಜಕಾರಣದ ಕರಾರು ಅಂತ್ಯ: ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಮೇಲಿನ ಭ್ರಷ್ಟಾಚಾರ ಆರೋಪ ಹಾಗೂ ತನಿಖೆಗೆ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಇಷ್ಟು ದಿನ ಅವರು ಮತ್ತು ಇವರು ಹೊಂದಾಣಿಕೆಯಿಂದ ಇದ್ದರು. ನಮ್ಮದನ್ನು ನೀವು ಮುಚ್ಚಿಡೋದು ನಿಮ್ಮದನ್ನ ನಾವು ಮುಚ್ಚಿಡೋದು ಎಂಬ ಒಪ್ಪಂದವಿತ್ತು. ಆ ಕರಾರು ಮುರಿದು ಹೋಗಿದೆ. ಹಾಗಾಗಿ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. ಕಾಂಗ್ರೆಸ್ ಒಂದೂವರೆ ವರ್ಷದ ಆಡಳಿತದ ಬಳಿಕ ದ್ವೇಷ ರಾಜಕಾರಣ ಮಾಡುತ್ತಿದೆ. ಮುಡಾ ಹಗರಣ ಗಂಭೀರತೆ ಪಡೆದುಕೊಂಡಿದೆ. ಇಡಿ ತನಿಖೆ ಜೋರಾಗಿದೆ, ವಾಲ್ಮೀಕಿ ನಿಗಮದ ಹಗರಣವನ್ನು ಹೈಕೋರ್ಟ್ ನಿಗಾದಲ್ಲಿ ಸಿಬಿಐ ತನಿಖೆಗೆ ನೀಡಬೇಕೆಂದು ಒತ್ತಾಯಿಸಿದ್ದೇವೆ. ಹೀಗಾಗಿ ದ್ವೇಷ ರಾಜಕಾರಣ ಮಾಡುತ್ತಿದ್ದಾರೆಂದರು.
ಬಿ.ವೈ.ವಿಜಯೇಂದ್ರ ಅವರನ್ನು ಬಿಜೆಪಿ ಹೈಕಮಾಂಡ್ ಅಧ್ಯಕ್ಷರನ್ನಾಗಿ ನೇಮಕ ಮಾಡಿದೆ. ನಾವೆಲ್ಲರೂ ಅದನ್ನು ಒಪ್ಪಿಕೊಂಡಿದ್ದೇವೆ. ಈ ವಿಷಯದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಅವರ ನಡೆ ಸರಿಯಲ್ಲ. ನಾಳೆ ಯತ್ನಾಳ್ ಅಧ್ಯಕ್ಷರಾದರೆ ನಾವು ಒಪು್ಪವುದಿಲ್ಲ ಎಂದು ಹೇಳಿದರೆ ಹೇಗಿರುತ್ತದೆ?. ಎಲ್ಲವನ್ನೂ ಹೈಕಮಾಂಡ್ ಗಮನಿಸುತ್ತಿದ್ದು, ನಮ್ಮಲ್ಲಿರುವ ಗೊಂದಲಗಳನ್ನು ಸರಿಪಡಿಸಿ ಸೂಕ್ತ ಕ್ರಮ ಕೈಗೊಳ್ಳಲಿದೆ.
| ಛಲವಾದಿ ನಾರಾಯಣಸ್ವಾಮಿ ವಿಧಾನಪರಿಷತ್ ವಿಪಕ್ಷ ನಾಯಕ