

ಚಿಕ್ಕಮಗಳೂರು: ಗ್ರಾಮೀಣ ಅಂಚೆ ಸೇವಕರಿಗೆ ಪ್ರತಿದಿನ 8 ತಾಸು ಕೆಲಸ ನೀಡಬೇಕು. ಪಿಂಚಣಿ ಸೇರಿ ಎಲ್ಲ ರೀತಿಯ ಸವಲತ್ತು ನೀಡಬೇಕು ಎಂದು ಒತ್ತಾಯಿಸಿ ಅಖಿಲ ಭಾರತ ಗ್ರಾಮೀಣ ಅಂಚೆ ಸೇವಕರ ಚಿಕ್ಕಮಗಳೂರು ವಿಭಾಗದ ಸಿಬ್ಬಂದಿ ಬುಧವಾರ ಪ್ರತಿಭಟನೆ ನಡೆಸಿದರು.
ನಗರದ ಮುಖ್ಯ ಅಂಚೆ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದ ಅವರು, ಸೇವಾ ಹಿರಿತನದ ಆಧಾರದ ಮೇಲೆ ಗ್ರಾಮೀಣ ಅಂಚೆ ಸೇವಕರಿಗೆ ವಿಶೇಷವಾಗಿ ವೇತನ ಹೆಚ್ಚಳ ಮಾಡಬೇಕು ಎಂದು ಒತ್ತಾಯಿಸಿದರು.
ಗ್ರಾಮೀಣ ಅಂಚೆ ಸೇವಕರಿಗೆ ಅವೈಜ್ಞಾನಿಕ ಗುರಿ ನೀಡುತ್ತಿರುವುದನ್ನು ಕೂಡಲೇ ನಿಲ್ಲಿಸಬೇಕು. ಅವೈಜ್ಞಾನಿಕ ಗುರಿ ಸಾಧಿಸಲು ಸಾಧ್ಯವಾಗದ ಜಿಡಿಎಸ್ ನೌಕರರಿಗೆ ಕಿರುಕುಳ ನಿಡಲಾಗುತ್ತಿದ್ದು, ಇದು ಕೂಡಲೇ ನಿಲ್ಲಬೇಕು. ಅಂಚೆ ಸೇವಕರಿಗೆ ಗ್ರೂಪ್ ಇನ್ಶೂರೆನ್ಸ್ ಅನ್ನು 5 ಲಕ್ಷ ರೂ.ವರೆಗೆ ಹೆಚ್ಚಿಸಬೇಕು ಎಂದು ಆಗ್ರಹಿಸಿದರು.
ಗ್ರಾಮೀಣ ಅಂಚೆ ಸೇವಕರು ಹಾಗೂ ಅವರ ಕುಟುಂಬದ ಸದಸ್ಯರಿಗೆ ವೈದ್ಯಕೀಯ ಸೌಲಭ್ಯ ಒದಗಿಸಬೇಕು. ಜತೆಗೆ ನೌಕರರಿಗೆ 180 ದಿನಗಳ ರಜೆ ಉಳಿಸಿಕೊಳ್ಳಲು ಅವಕಾಶ ಕಲ್ಪಿಸಬೇಕು ಮತ್ತು ಗ್ರಾಚ್ಯುಟಿ ಹಣವನ್ನು 5 ಲಕ್ಷ ರೂ.ವರೆಗೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.
ಅಖಿಲ ಭಾರತ ಗ್ರಾಮೀಣ ಅಂಚೆ ನೌಕರರ ಸಂಘದ ವಿಭಾಗೀಯ ಅಧ್ಯಕ್ಷ ಟಿ.ಸಿ.ಚಂದ್ರಪ್ರಕಾಶ್, ಖಜಾಂಚಿ ಭರತ್, ಕಾರ್ಯದರ್ಶಿ ಟಿ.ಹನುಮಂತಪ್ಪ, ಪ್ರಮುಖರಾದ ರವಿ, ಶಿವಶಂಕರ್, ವೀಣಾ ಮತ್ತಿತರರಿದ್ದರು.