

* ಕಿರುವಾರ ಎಸ್.ಸುದರ್ಶನ್ ಕೋಲಾರ
ಸುಮಾರು ದಿನಗಳಿಂದ ರೇಷ್ಮೆ ಗೂಡಿನ ಬೆಲೆ ಕುಸಿತದಿಂದ ಸೊರಗಿದ್ದ ಬೆಳೆಗಾರರಿಗೆ ದಿಢೀರ್ ಬೆಲೆ ಏರಿಕೆಯು ಖುಷಿ ತಂದಿದೆ.
ರೇಷ್ಮೆ ಗೂಡು ಉತ್ಪಾದನೆಯಲ್ಲಿ ರಾಮನಗರ ಜಿಲ್ಲೆಯ ನಂತರ, ಕೋಲಾರ ಜಿಲ್ಲೆಯು ಪ್ರಮುಖ ಸ್ಥಾನ ಪಡೆದುಕೊಂಡಿದ್ದು, ಮಿಶ್ರ ತಳಿ ಮತ್ತು ದ್ವಿತಳಿ ಬೆಳೆಯುವ ಬೆಳೆಗಾರರು ಹೆಚ್ಚಾಗಿದ್ದು, ಕೋಲಾರ ಮಾರುಕಟ್ಟೆಯಲ್ಲಿ ಕೆಜಿ ಗೂಡು 800ಕ್ಕೂ ಹೆಚ್ಚು ದರಕ್ಕೆ ಮಾರಾಟವಾಗುತ್ತಿದೆ.
ನಿತ್ಯ ಮಾರುಕಟ್ಟೆಗೆ ಮಿಶ್ರ ತಳಿ 1,500 ಕೆಜಿಗೂ ಹೆಚ್ಚು ಸರಬರಾಜು ಆಗುತ್ತಿದ್ದು ಕೆಜಿ ಗೂಡು ಸರಾಸರಿ 600 ರೂ. ಹಾಗೂ 4,000 ಕೆಜಿಗೂ ಅಧಿಕ ಸರಬರಾಜು ಆಗುತ್ತಿರುವ ದ್ವಿತಳಿಯ ಕೆಜಿ ಗೂಡು 800 ರೂ. ಗಡಿ ದಾಟಿದೆ. ಶ್ರೀನಿವಾಸಪುರ ಮಾರುಕಟ್ಟೆಗೆ 800 ಕೆಜಿ ಗೂಡು ಸಬರಾಜು ಆಗುತ್ತಿದ್ದು ಕೆಜಿ ಗೂಡು 650 ರೂ.ಗೆ ಮಾರಾಟವಾಗುತ್ತಿದೆ.
ಮಾರುಕಟ್ಟೆಗೆ ಮತ್ತಷ್ಟು ಗುಣಮಟ್ಟದ ಗೂಡು ಸರಬರಾಜು ಮಾಡಿ ಅತಿಹೆಚ್ಚು ಬೆಲೆಗೆ ಮಾರಾಟ ಮಾಡುತ್ತಿರುವ ಬೆಳೆಗಾರರಿಗೆ ಮಾರುಕಟ್ಟೆಗೆ ಪ್ರಶಂಸನಾ ಪತ್ರ ವಿತರಿಸುವ ಮೂಲಕ ಗೂಡು ಉತ್ಪಾದಕರಿಗೆ ಉತ್ತೇಜನ ನೀಡುತ್ತಿರುವುದು ವಿಶೇಷ. ಹಿಂದೆ 2&3 ವರ್ಷಗಳಿಂದ ರೇಷ್ಮೆ ಗೂಡಿನ ಬೆಲೆಯು ಹೇಳಿಕೊಳ್ಳುವಷ್ಟು ಇರಲಿಲ್ಲ. ಇದೀಗ ಕಳೆದ 6 ತಿಂಗಳಿಂದ ಒಂದೇ ರೀತಿಯ ದರಗಳು ಇದ್ದು, ದಿಢೀರ್ ಬೆಲೆ ಏರಿಕೆಯು ರೈತರಿಗೆ ವರದಾನವಾಗಿದೆ.
ಜಿಲ್ಲೆಯಲ್ಲಿ ಒಟ್ಟು 19,907.98 ಹೆಕ್ಟೇರ್ ವಿಸ್ತೀರ್ಣದಲ್ಲಿ ಹಿಪು$್ಪನೇರಳೆ ಬೆಳೆಯಿದ್ದು, ಸುಮಾರು 20 ಸಾವಿರಕ್ಕೂ ಹೆಚ್ಚು ರೇಷ್ಮೆ ಕೃಷಿ ಬೆಳೆಗಾರರಿದ್ದಾರೆ. ಈ ಸಂಖ್ಯೆಯನ್ನು ಹೆಚ್ಚಿಸಲು ರೇಷ್ಮೆ ಮಾರುಕಟ್ಟೆಯಿಂದ ಪ್ರಯತ್ನ ನಡೆಯುತ್ತಿದೆ. ಕೋಲಾರ ಜಿಲ್ಲೆ ಎಂದರೆ ಹಿಂದೆ ಸಿಲ್ಕ್, ಮಿಲ್ಕ್ ಆ್ಯಂಡ್ ಗೋಲ್ಡ್ಗೆ ಖ್ಯಾತಿ ಪಡೆದುಕೊಂಡಿತ್ತು. ಈಗ ಗೋಲ್ಡ್ ಇಲ್ಲದಿದ್ದರೂ ಸಿಲ್ಕ್&ಮಿಲ್ಕ್ ಉತ್ಪಾದನೆಯಲ್ಲಿ ಪ್ರಮುಖ ಸ್ಥಾನದಲ್ಲಿದೆ. ಬಹುತೇಕ ರೈತರು ಹೈನೋದ್ಯಮದ ಜತೆಗೆ ರೇಷ್ಮೆಕೃಷಿ ಪ್ರಧಾನವಾಗಿಸಿಕೊಂಡಿದ್ದರು. ಕಾಲ ಬದಲಾಗುತ್ತಿದ್ದಂತೆ ಬಹಳಷ್ಟು ಮಂದಿ ರೇಷ್ಮೆ ಉತ್ಪಾದನೆಯಿಂದ ದೂರ ಸರಿದರು, ಹಿಂದೆ ಕೋವಿಡ್ ಕಾಲದಲ್ಲೂ ರೇಷ್ಮೆ ಕೃಷಿಯಿಂದ ದೂರ ಸರಿದು ಹಿಪು$್ಪ ನೇರಳೆ ಬೆಳೆ ನಾಶಪಡಿಸಿದರು. ಆಗ ಗಣನಿಯವಾಗಿ ಬೆಳೆಗಾರರ ಸಂಖ್ಯೆ ಕುಸಿಯಿತು.
* ಕಾಲಕ್ಕೆ ತಕ್ಕಂತೆ ರೈತರಿಗೆ ತರಬೇತಿ
ಜಿಲ್ಲೆಯ ಸುಮಾರು 19 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹಿಪ್ಪು ನೇರಳೆ ಬೆಳೆಯುತ್ತಿದ್ದು ಕೋಲಾರ, ಬಂಗಾರಪೇಟೆ, ಶ್ರೀನಿವಾಸಪುರ ತಾಲೂಕಿನ ಅತಿ ಹೆಚ್ಚಿನ ಪ್ರದೇಶದಲ್ಲಿ ಹಿಪ್ಪುನೇರಳೆ ಕೃಷಿ ಮಾಡಲಾಗುತ್ತಿದೆ. ರೇಷ್ಮೆ ಗೂಡಿಗೆ ತಕ್ಕಮಟ್ಟಿಗೆ ಒಳ್ಳೆ ಬೆಲೆ ಇರುವ ಹಿನ್ನೆಲೆಯಲ್ಲಿ ಸಾಕಷ್ಟು ರೈತರು ಒಲವು ತೋರಿದ್ದರು. ಆದರೆ ಬೆಲೆ ಚೇತರಿಕೆ ಕಾಣದ ಕಾರಣ ಸಾಕಷ್ಟು ಮಂದಿ ಹಿಪು$್ಪ ನೇರಳೆ ತೋಟಗಳನ್ನು ತೆಗೆದು ಟೊಮ್ಯಾಟೊ, ಥೈವಾನ್ ಸೀಬೆ, ಮಾವು ಬೆಳೆಗಳಿಗೆ ಮಾರು ಹೋದರು. ಇದರಿಂದ ಆರ್ಥಿಕ ನಷ್ಟ ಅನುಭವಿಸಿದವರು ಮರಳಿ ರೇಷ್ಮೆ ಕೃಷಿಯತ್ತ ಮುಖ ಮಾಡುತ್ತಿದ್ದಾರೆ.
ರೇಷ್ಮೆ ಬೆಳೆಗಾರರನ್ನು ಹೆಚ್ಚಿಸಿಕೊಳ್ಳಲು ರೇಷ್ಮೆ ಇಲಾಖೆಯವರು ಸಹ ರೈತರ ತೋಟಗಳಿಗೆ ಹೋಗಿ ಕ್ಷೇತ್ರೋತ್ಸವ ನಡೆಸುವುದು, ಕಾಲಕಾಲಕ್ಕೆ ತಕ್ಕಂತೆ ಬೆಳೆ ನಿರ್ವಹಣೆ ಕುರಿತು ತರಬೇತಿ ನೀಡುತ್ತಿದ್ದಾರೆ.
* ಉತ್ತೇಜಿಸಲು ಪ್ರಶಂಸಾ ಪತ್ರ ವಿತರಣೆ
ಜಿಲ್ಲೆಯಲ್ಲಿ ಶ್ರೀನಿವಾಸಪುರ, ಕ್ಯಾಲನೂರು ಹಾಗೂ ಕೋಲಾರದಲ್ಲಿ ರೇಷ್ಮೆ ಮಾರುಕಟ್ಟೆಗಳು ಕಾರ್ಯನಿರ್ವಹಿಸುತ್ತಿದ್ದು, ಜಿಲ್ಲೆಯಲ್ಲದೆ ಹೋಸಕೋಟೆ, ಆಂಧ್ರಪ್ರದೇಶ, ತಮಿಳುನಾಡಿನಿಂದಲೂ ರೇಷ್ಮೆ ಗೂಡನ್ನು ಮಾರಾಟ ಮಾಡಲು ರೈತರು ತರುತ್ತಾರೆ. ಗುಣಮಟ್ಟದ ಆಧಾರದ ಮೇಲೆ ಬೆಲೆ ನಿಗದಿಯಾಗುತ್ತಿದೆ. ಅತಿ ಹೆಚ್ಚಿನ ಬೆಲೆಗೆ ಮಾರಾಟವಾಗುವ ರೈತರಿಗೆ ಮಾರುಕಟ್ಟೆ ಸಮಿತಿಯಿಂದ ಪ್ರಶಂಸಾ ಪತ್ರ ನೀಡಲಾಗುತ್ತಿದೆ. ಇಂತಹ ರೈತರನ್ನು ನೋಡಿ ಇತರ ರೈತರು ಮುಂದಿನ ದಿನಗಳಲ್ಲಿ ಗುಣಮಟ್ಟದ ಗೂಡು ತಂದು ಪ್ರಶಸ್ತಿ ಪಡೆಯುವ ಆಲೋಚನೆ ಹೊಂದುತ್ತಾರೆ ಎಂಬುದು ಸಮಿತಿಯ ಮುಂದಾಲೋಚನೆ.
* ಬೆಲೆ ಮೇಲೆ ಪರಿಣಾಮ
ಬದಲಾದ ವಾತಾವರಣದಿಂದ ಗೂಡಿನ ಗುಣಮಟ್ಟ ಕಳೆದುಕೊಳ್ಳುತ್ತದೆ, ಇದು ದರ ನಿಗದಿಯ ಮೇಲೆ ಪರಿಣಾಮ ಬೀರುತ್ತದೆ. ಅಲ್ಲದೆ ಬಜೆಟ್ ಮಂಡನೆಯ ಸಮಯದಲ್ಲೂ ಮಾರುಕಟ್ಟೆಯಲ್ಲಿ ರೇಷ್ಮೆಗೆ ಬೇಡಿಕೆ ಕಡಿಮೆಯಾಗುತ್ತದೆ. ಇದು ಬೆಲೆ ಮೇಲೆ ಪರಿಣಾಮ ಬೀಗುತ್ತದೆ. ಸದ್ಯ ಕೆಜಿ ಗೂಡಿನ ಮೇಲೆ ವಾರದಿಂದ ಶೇಕಡವಾರು ದರ ಕಡಿಮೆಯಾಗಿದ್ದು, ಮುಂದಿನ ವಾರದೊಳಗೆ ಬೆಲೆ ಏರಿಕೆಯಾಗುವ ಸಾಧ್ಯತೆಯಿದೆ.
ಕೋಟ್...
ಇಲಾಖೆಯಿಂದ ರೇಷ್ಮೆ ಬೆಳೆಗಾರರನ್ನು ಉತ್ತೇಜಿಸುವ ಕೆಲಸ ಮಾಡಲಾಗುತ್ತಿದೆ. ಗುಣಮಟ್ಟದ ಗೂಡು ಸರಬರಾಜು ಮಾಡಿ ಅತಿ ಹೆಚ್ಚು ಬೆಲೆಗೆ ಮಾರಾಟ ಆಗುವ ರೈತರಿಗೆ ಪ್ರಶಂಸಾ ಪತ್ರ ನೀಡಲಾಗುತ್ತಿದೆ. ಇದು ಇತರರಿಗೂ ಸ್ಫೂರ್ತಿಯಾಗುತ್ತದೆ.
> ಎಂ.ನಾಗರಾಜು, ರೇಷ್ಮೆ ಉಪನಿರ್ದೇಶಕ, ಕೋಲಾರ