

ಶಿವಮೊಗ್ಗ: ಸಮಾಜದಲ್ಲಿ ಕೊಲೆ, ಸುಲಿಗೆ ಸೇರಿ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿದ್ದು ಅವುಗಳನ್ನು ತನಿಖೆಗೆ ಒಳಪಡಿಸಿದಾಗ ಶೇ.80ರಷ್ಟು ಪ್ರಕರಣಗಳು ಮದ್ಯದಂತಹ ಅಮಲು ಪದಾರ್ಥಗಳ ಸೇವನೆಯಿಂದ ಆಗುತ್ತಿರುವುದು ಆತಂಕಕಾರಿಯಾಗಿದೆ ಎಂದು ಎಸ್‌ಪಿ ಜಿ.ಕೆ.ಮಿಥುನ್‌ಕುಮಾರ್ ಕಳವಳ ವ್ಯಕ್ತಪಡಿಸಿದರು.
ನವುಲೆ ಗ್ರಾಮದ ಶ್ರೀ ಆಂಜನೇಯ ಸ್ವಾಮಿ ಸಮುದಾಯ ಭವನದಲ್ಲಿ ಗುರುವಾರ ನವುಲೆಯ ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್, ಬೆಳ್ತಂಗಡಿಯ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್, ಶಿವಮೊಗ್ಗ ಜಿಲ್ಲಾ ಜನಜಾಗೃತಿ ವೇದಿಕೆ ಟ್ರಸ್ಟ್, ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರ, ಬೆಂಗಳೂರಿನ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಅಬ್ಬಲಗೆರೆ ವಲಯದ ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟದ ಆಶ್ರಯದಲ್ಲಿ 1,890ನೇ ಮದ್ಯವರ್ಜನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಒಂದೊಂದು ಅಪರಾಧಕ್ಕೂ ಒಂದೊಂದು ಹಿನ್ನೆಲೆಗಳು ಇರುತ್ತದೆ. ಅವುಗಳ ಮೂಲ ಬೆನ್ನತ್ತಿದಾಗ ಒಂದೊಂದೇ ಸುಳಿವುಗಳು ಬಿಚ್ಚಿಕೊಳ್ಳುತ್ತವೆ. ಇತ್ತೀಚಿನ ದಿನಗಳಲ್ಲಿ ಯುವ ಪೀಳಿಗೆ ಅಮಲು ಪದಾರ್ಥಗಳ ಸೇವಿಸಿ ನಾನಾ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದಾರೆ. ಜತೆಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವವರಲ್ಲಿ ಮದ್ಯವ್ಯಸನಿಗಳೇ ಹೆಚ್ಚಿದ್ದಾರೆ. ಇಂತಹ ಸಂದರ್ಭಗಳಲ್ಲಿ ಧರ್ಮಸ್ಥಳ ಸಂಘವು ಮಾಡುತ್ತಿರುವ ಮದ್ಯವರ್ಜನ ಶಿಬಿರದ ಮೂಲಕ ಸ್ವಾಸ್ಥೃ ಸಮಾಜವನ್ನು ಮರು ನಿರ್ಮಿಸುವ ಪ್ರಯತ್ನ ಮಾಡುತ್ತಿದೆ ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರು ಮಾಡುತ್ತಿರುವ ವಿನೂತನ ಕಾರ್ಯಕ್ರಮ ಇದಾಗಿದೆ. ಇದುವರೆಗೂ ಯಾರೂ ಮಾಡದಿರುವ ವಿಶೇಷವಾದ ಕಾರ್ಯಕ್ರಮವನ್ನು ಜಗತ್ತಿನಲ್ಲಿ ಯಾರಾದರೂ ಮಾಡುವವರಿದ್ದರೆ ಅದು ಹೆಗ್ಗಡೆ ಅವರು ಎಂಬುದೇ ಹೆಗ್ಗಳಿಕೆ ಎಂದು ಹೇಳಿದರು.
ಶಿವಮೊಗ್ಗ ಜಿಲ್ಲೆಯ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ನಿರ್ದೇಶಕ ಕೆ.ಮುರಳೀಧರ್ ಶೆಟ್ಟಿ ಮಾತನಾಡಿ, ಮದ್ಯವರ್ಜನ ಶಿಬಿರವು ಪವಿತ್ರ ಕಾರ್ಯಕ್ರಮ. ಇದು ಕೇವಲ ಧರ್ಮಸ್ಥಳದ ಕಾರ್ಯಕ್ರಮವಲ್ಲ. ಬದಲಾಗಿ ಇದೊಂದು ಸಮುದಾಯದ ಸಹಭಾಗಿತ್ವದ ಕಾರ್ಯಕ್ರಮವಾಗಿದೆ. ಆದ್ದರಿಂದ ಸಾರ್ವಜನಿಕರ ತನು-ಮನ-ಧನ ಸಹಕಾರದೊಂದಿಗೆ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದರು.
1890ನೇ ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎನ್.ಆರ್.ಮಂಜುನಾಥ ಅಧ್ಯಕ್ಷತೆ ವಹಿಸಿದ್ದರು. ಚಿತ್ರದುರ್ಗ ಪ್ರಾದೇಶಿಕ ವಿಭಾಗದ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಯೋಜನಾಧಿಕಾರಿ ನಾಗರಾಜ್ ಕುಲಾಲ್, ಸಮಿತಿ ಗೌರವಾಧ್ಯಕ್ಷ ಎಂ.ಈಶ್ವರಪ್ಪ, ನವುಲೆ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ ಸಮಿತಿ ಅಧ್ಯಕ್ಷ ಶೇಖರಪ್ಪ, ಸೂಡಾ ಅಧ್ಯಕ್ಷ ಎಚ್.ಎಸ್.ಸುಂದರೇಶ್, ಮಹಾನಗರ ಪಾಲಿಕೆ ಮಾಜಿ ಸದಸ್ಯ ಇ.ವಿಶ್ವಾಸ್, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ರಮೇಶ್, ಉದಯ ಕುಮಾರ್ ಶೆಟ್ಟಿ, ಮಮತಾ ಶಿವಣ್ಣ, ದಾವಣಗೆರೆ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ರಮೇಶ್ ಕತ್ತಿಗೆ, ವಕೀಲ ರಾಮಚಂದ್ರ, ಬೆಳ್ತಂಗಡಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಶಿಬಿರಾಧಿಕಾರಿ ಪಿ.ಪಿ.ನಂದಕುಮಾರ್, ಆರೋಗ್ಯ ಸಹಾಯಕಿ ನೇತ್ರಾವತಿ, ಕ್ಷೇತ್ರ ಯೋಜನಾಧಿಕಾರಿ ರೂಪಾ ಆದರ್ಶ, ಪ್ರಭಾವತಿ, ಅಬ್ಬಲಗೆರೆ ವಲಯದ ಮೇಲ್ವಿಚಾರಕಿ ಅನ್ನಪೂರ್ಣ ಉಪಸ್ಥಿತರಿದ್ದರು.