ರಾಜಕೀಯ ಬಿಕ್ಕಟ್ಟು ಕಾರಣವೇ? ಸೋಂಕಿತರ ಸಂಖ್ಯೆ ಹೆಚ್ಚಳ, ಮಧ್ಯಪ್ರದೇಶದಲ್ಲಿ ಆರೋಗ್ಯ ಸಚಿವರೇ ಇಲ್ಲ

page 7 3
Published on

ನವದೆಹಲಿ: ಮಧ್ಯಪ್ರದೇಶ ಕಾಂಗ್ರೆಸ್ ಮುಖಂಡ ಕಮಲ್​ನಾಥ್ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಮಾರ್ಚ್ 20ರಂದು. ಅದಾಗಿ ತಿಂಗಳು ಮುಗಿಯುತ್ತಿದೆ. ಈ ಅವಧಿಯಲ್ಲಿ ರಾಜ್ಯದಲ್ಲಿ ಸುಮಾರು 1400 ಕರೊನಾ ವೈರಸ್ ಸೋಂಕಿತರು ಪತ್ತೆಯಾಗಿದ್ದಾರೆ.

ಕಾಂಗ್ರೆಸ್ ಸರ್ಕಾರ ಪತನಗೊಂಡು ಹೊಸ ಸರ್ಕಾರ ರಚನೆ ಮಾಡುವಾಗ ಇದ್ದ ಸಂಭ್ರಮ ಈಗ ಬಿಜೆಪಿ ನಾಯಕರಲ್ಲಿ ಕಾಣುತ್ತಿಲ್ಲ. ವೈರಸ್ ಸೋಂಕಿಗೆ ರಾಜ್ಯದ 69 ಮಂದಿ ಬಲಿಯಾಗಿದ್ದಾರೆ. ನಿತ್ಯವೂ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಸಾವಿನ ಸಂಖ್ಯೆಯ ಏರಿಕೆಗೆ ಕಡಿವಾಣ ಹಾಕುವ ದೈತ್ಯ ಸವಾಲು ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಮುಂದಿದೆ.

ರಾಜ್ಯದಲ್ಲೀಗ ಆರೋಗ್ಯ ಸಚಿವರಿಲ್ಲ. ಆರೋಗ್ಯ ಇಲಾಖೆಯ ಉನ್ನತಾಧಿಕಾರಿಗಳು ಕರೊನಾ ಸೋಂಕಿನಿಂದಾಗಿ ಐಸೋಲೇಷನ್ ಕೇಂದ್ರ ಸೇರಿದ್ದಾರೆ. ಇಲಾಖೆಯ ಸುಮಾರು 90 ಮಂದಿ ಸೋಂಕಿಗೆ ತುತ್ತಾಗಿದ್ದಾರೆ. 40 ಮಂದಿ ಪೊಲೀಸ್ ಸಿಬ್ಬಂದಿ ಮತ್ತವರ ಕುಟುಂಬಸ್ಥರೂ ವೈರಸ್ ಪೀಡಿತರಾಗಿದ್ದಾರೆ. ಸರ್ಕಾರ ರಚನೆ, ರಾಜಕೀಯ ಬಿಕ್ಕಟ್ಟು ಹಾಗೂ ಕೋವಿಡ್-19 ನಿಯಂತ್ರಣಕ್ಕೆ ಆಡಳಿತಶಾಹಿ ಮತ್ತು ಅಧಿಕಾರಶಾಹಿಯ ಕಾರ್ಯನಿರ್ವಹಣೆ ಸಾಧ್ಯವಾಗದಿರುವುದೇ ಸೋಂಕಿತರ ಸಂಖ್ಯೆ ಹೆಚ್ಚಳಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.

ಕಳೆದ ತಿಂಗಳ ಆರಂಭದಿಂದ ಹಿಡಿದು 20ರ ತನಕ ಮಾಜಿ ಸಿಎಂ ಕಮಲ್​ನಾಥ್ ಸೇರಿ ಇತರೆ ಕೆಲವು ಕ್ಯಾಬಿನೆಟ್ ಸಚಿವರು ಸರ್ಕಾರ ರಕ್ಷಿಸುವ ಯತ್ನದಲ್ಲಿದ್ದರು. ಮತ್ತೆ ಕೆಲವರು, ಸರ್ಕಾರ ಉರುಳಿಸಿ ಬಿಜೆಪಿ ಸೇರುವ ತವಕದಲ್ಲಿದ್ದರು. ಅವರ್ಯಾರೂ ಕರೊನಾ ವೈರಸ್ ಈ ಪರಿಯಲ್ಲಿ ರಾಜ್ಯಾದ್ಯಂತ ಹರಡಲಿದೆ ಎಂದು ಕಲ್ಪಿಸಿಯೂ ಇರಲಿಲ್ಲ. ಆ ಸಂದರ್ಭದಲ್ಲಿ ಅವರಿಗೆ ಸರ್ಕಾರ ಉಳಿಸುವುದು ಮತ್ತು ಸ್ಥಾಪಿಸುವುದೊಂದೇ ಗುರಿಯಾಗಿತ್ತು.

ಸದ್ಯ ಮಧ್ಯಪ್ರದೇಶದಲ್ಲಿ 1355 ಕೋವಿಡ್ ಕೇಸುಗಳು ಪತ್ತೆಯಾಗಿವೆ. ಇಂದೋರ್​ನಲ್ಲಿ (841) ಅತ್ಯಧಿಕ ಸೋಂಕಿತರಿದ್ದಾರೆ. 197 ಸೋಂಕಿತರಿರುವ ಭೋಪಾಲ್​ಗೆ 2ನೇ ಸ್ಥಾನ. 70 ಮಂದಿ ಗುಣಮುಖರಾಗಿದ್ದರೆ, 69 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಆರೋಗ್ಯ ಸಚಿವರ ಕೊರತೆ ನಡುವೆ ಇಲಾಖೆಯ ಉನ್ನತಾಧಿಕಾರಿಗಳು ಸೋಂಕಿಗೆ ತುತ್ತಾಗಿರುವುದು ಸಿಎಂ ಚೌಹಾಣ್​ಗೆ ಇನ್ನಿಲ್ಲದ ಬಿಕ್ಕಟ್ಟನ್ನು ತಂದೊಡ್ಡಿದೆ. ಇಲಾಖೆ ಪ್ರಧಾನ ಕಾರ್ಯದರ್ಶಿ, ರಾಜ್ಯ ಆರೋಗ್ಯ ನಿಗಮದ ವ್ಯವಸ್ಥಾಪಕ ನಿರ್ದೇಶಕ, ರಾಜ್ಯ ಆಯುಷ್ಮಾನ್ ಭಾರತ್ ಕಾರ್ಯಕ್ರಮದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೇರಿ ಅನೇಕರು ವೈರಸ್​ನಿಂದ ಬಳಲುತ್ತಿದ್ದಾರೆ. ಇಂದೋರ್ ಡೇಂಜರ್

ಸ್ವಚ್ಛ ನಗರಿ ಎಂದು ಗುರುತಿಸಿಕೊಂಡಿರುವ ಇಂದೋರ್​ನಲ್ಲಿ ಕರೊನಾ ವೈರಸ್ ಹಬ್ಬಿದ ಪ್ರಮಾಣ ಹಾಗೂ ಮರಣ ಪ್ರಮಾಣವೂ ಇತರೆ ರಾಜ್ಯಗಳಿಗಿಂತ ಅತಿ ಹೆಚ್ಚು ಪ್ರಮಾಣದಲ್ಲಿರುವುದು ನಗರ ನಿವಾಸಿಗರಲ್ಲಿ ಆತಂಕ ಹೆಚ್ಚಿಸಿದೆ. ಕೋವಿಡ್​ನಿಂದಾಗಿ ರಾಜ್ಯದಲ್ಲಿ ಮೃತಪಟ್ಟ 69 ಮಂದಿಯಲ್ಲಿ 47 ಮಂದಿ ಇಂದೋರ್​ನವರು! ಕೋವಿಡ್​ಗೆ ಮೃತಪಟ್ಟವರ ರಾಷ್ಟ್ರೀಯ ಸರಾಸರಿಗೆ ಹೋಲಿಸಿದರೆ ಇಂದೋರ್​ನ ಸಾವಿನ ಪ್ರಮಾಣ ಐದು ಪಟ್ಟು ಹೆಚ್ಚಿದೆ. ಆರಂಭದಲ್ಲಿ ಸೋಂಕಿನ ಲಕ್ಷಣಗಳಿದ್ದರೂ ಅನೇಕ ಮಂದಿ ಆಸ್ಪತ್ರೆಗೆ ಬರಲೇ ಇಲ್ಲ. ಪರಿಸ್ಥಿತಿ ಗಂಭೀರ ಎನಿಸಿದ ಬಳಿಕ ಪರೀಕ್ಷೆ ನಡೆಸಿ ಎಂದು ಮುಂದೆ ಬಂದರು. ಆದರೆ, ಆಗ ಕಾಲ ಮಿಂಚಿತ್ತು ಎಂದು ಅಲ್ಲಿನ ಅಧಿಕಾರಿಯೊಬ್ಬರು ಹೇಳುತ್ತಾರೆ.

ಕಾರ್ಯಪಡೆ ರಚನೆ: ಸಿಎಂ ಆಗಿ ಶಿವರಾಜ್ ಸಿಂಗ್ ಅಧಿಕಾರ ಸ್ವೀಕರಿಸಿ 25 ದಿನ ಪೂರ್ಣಗೊಂಡಿದೆ. ಆದರೆ, ಈವರೆಗೆ ಕ್ಯಾಬಿನೆಟ್ ರಚಿಸಲು ಸಾಧ್ಯವಾಗಿಲ್ಲ. ಇದಕ್ಕೆ ಕಾರಣ ಕರೊನಾ. ಈ ಪರಿಸ್ಥಿತಿಗೆ ಬಿಜೆಪಿ ಅಧಿಕಾರ ದಾಹವೇ ಕಾರಣ ಎಂದು ಕಾಂಗ್ರೆಸ್ ಟೀಕೆಗಳ ಮಧ್ಯೆ ಏಪ್ರಿಲ್ 13ರಂದು ಕೆಲ ಬಿಜೆಪಿ ಮುಖಂಡರನ್ನು ಸೇರಿಸಿ ಕರೊನಾ ನಿಯಂತ್ರಣಕ್ಕೆ ಸಿಎಂ ನೇತೃತ್ವದಲ್ಲಿ ಬಿಜೆಪಿ ಕಾರ್ಯಪಡೆ ರಚಿಸಲಾಗಿದೆ.

ಪಲ್ಲವಿ ಗೋವಿಲ್ ಪ್ರಕರಣ: ಆರೋಗ್ಯ ಇಲಾಖೆ ಮುಖ್ಯ ಕಾರ್ಯದರ್ಶಿ ಪಲ್ಲವಿ ಗೋವಿಲ್ ತಮಗೆ ಕೋವಿಡ್ ಲಕ್ಷಣಗಳಿದ್ದರೂ, ಅದನ್ನು ಮುಚ್ಚಿಟ್ಟು ಕರ್ತವ್ಯದಲ್ಲಿ ತೊಡಗಿದ್ದರು ಮತ್ತು ಸಭೆಗಳನ್ನೂ ನಡೆಸುತ್ತಿದ್ದರು. ಐಸೋಲೇಷನ್ ವಾರ್ಡ್​ಗೆ

ವರ್ಗಾವಣೆಯಾಗುವ ಬದಲು ಮನೆಯಲ್ಲೇ ಚಿಕಿತ್ಸೆ ಪಡೆದುಕೊಳ್ಳಲು ಮುಂದಾಗಿದ್ದರು. ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದ ಎಲ್ಲ ನಿಯಮಾವಳಿ ಗಾಳಿಗೆ ತೂರಿದ್ದ ಅಧಿಕಾರಿ ತಮ್ಮ ಪುತ್ರನ ವಿದೇಶ ಪ್ರವಾಸದ ಹಿನ್ನೆಲೆಯನ್ನೂ ಗುಟ್ಟಾಗಿಟ್ಟಿದ್ದರು. ಈ ಬಗ್ಗೆ ಕಾಂಗ್ರೆಸ್ ಸಂಸದ ವಿವೇಕ್ ಠಂಕಾ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೂ ದೂರು ನೀಡಿದ್ದರು.

ಭೋಪಾಲ್ ಅನಿಲ ದುರಂತದ ಸಂತ್ರಸ್ತರೂ ಬಲಿ: 1984ರ ಭೋಪಾಲ್ ಅನಿಲ ದುರಂತದಲ್ಲಿ ಸಾವಿರಾರು ಮಂದಿ ಮೃತಪಟ್ಟಿದ್ದರು ಮತ್ತು ವಿಷಾನಿಲದ ಕರಾಳತೆ ಪರಿಣಾಮ ನಗರದ ಸಾವಿರಾರು ಮಂದಿ ಈಗಲೂ ಶ್ವಾಸಕೋಶ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ವಿಪರ್ಯಾಸ ಎಂದರೆ, ಶ್ವಾಸಕೋಶದ ಸಮಸ್ಯೆಯುಳ್ಳವರಿಗೆ ಕರೊನಾ ಮಾರಣಾಂತಿಕವಾಗಿ ಪರಿಣಮಿಸುತ್ತಿದೆ. ಭೋಪಾಲ್​ನಲ್ಲಿ ಸೋಂಕಿನಿಂದ ಮೃತಪಟ್ಟ ಐವರೂ 35 ವರ್ಷ ಹಿಂದಿನ ಅನಿಲ ದುರಂತದ ಸಂತ್ರಸ್ತರು. ಶ್ವಾಸಕೋಶದ ವಿವಿಧ ತೊಂದರೆಗೆ ತುತ್ತಾಗಿದ್ದ ಅವರು, ಕಳೆದ ಅನೇಕ ವರ್ಷಗಳಿಂದ ಭೋಪಾಲ್ ಮೆಮೋರಿಯಲ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೊಳಗಾಗಿದ್ದರು. ಕರೊನಾಪೀಡಿತರೆಲ್ಲರೂ ಸಾಯುತ್ತಾರೆಂದಲ್ಲ. ಆದರೆ, ಶ್ವಾಸಕೋಶದ ಸಮಸ್ಯೆ ಎದುರಿಸುತ್ತಿರುವರು ಬಹಳ ಎಚ್ಚರಿಕೆಯಿಂದಿರಬೇಕು ಎನ್ನುವುದಕ್ಕೆ ಭೋಪಾಲ್ ಘಟನೆಯೇ ತಾಜಾ ಉದಾಹರಣೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net