ಕಾನೂನಿನ ಅಜ್ಞಾನದಿಂದ ಪ್ರಕರಣ ಹೆಚ್ಚಳ: ಮಂಜುನಾಥ್ ನಾಯಕ್

National Legal Service day
ಎಟಿಎನ್‌ಸಿ ಕಾಲೇಜಿನಲ್ಲಿ ರಾಷ್ಟ್ರೀಯ ಕಾನೂನು ಸೇವೆಗಳ ದಿನವನ್ನು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮಂಜುನಾಥ್ ನಾಯಕ್ ಉದ್ಘಾಟಿಸಿದರು. ಸಿ.ಎನ್.ಚಂದನ್, ಪಿ.ಆರ್.ಮಮತಾ, ಪ್ರೊ. ಎಸ್.ಜಗದೀಶ್, ಪ್ರೊ. ಕೆ.ಎಂ.ನಾಗರಾಜು, ಅಂಜನ್, ಎಂ.ಟಿ.ಭಾಗ್ಯಾ ಇದ್ದರು.
Published on

ಶಿವಮೊಗ್ಗ: ಕಾನೂನಿನ ಅಜ್ಞಾನದಿಂದ ಶೇ.75ರಷ್ಟು ಪ್ರಕರಣಗಳು ದಾಖಲಾದರೆ ಶೇ.25ರಷ್ಟು ದ್ವೇಷ ಮನೋಭಾವದಿಂದ ದಾಖಲಾಗುತ್ತವೆ. ಆದ್ದರಿಂದ ಎಲ್ಲರೂ ಕಾನೂನಿನ ಅರಿವು ಹೊಂದುವುದು ಹಾಗೂ ಪ್ರೀತಿ-ವಿಶ್ವಾಸದಿಂದ ಬದುಕುವುದು ಅತ್ಯವಶ್ಯವಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮಂಜುನಾಥ್ ನಾಯಕ್ ಅಭಿಪ್ರಾಯಪಟ್ಟರು.

ಎಟಿಎನ್‌ಸಿ ಕಾಲೇಜಿನಲ್ಲಿ ಗುರುವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ರಾಷ್ಟ್ರೀಯ ಸೇವಾ ಯೋಜನಾ ವಿಭಾಗ ಐಕ್ಯುಎಸಿ, ಜಿಲ್ಲಾ ನ್ಯಾಯವಾದಿಗಳ ಸಂಘದ ಆಶ್ರಯದಲ್ಲಿ ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ದಿನನಿತ್ಯ ನಾವು ಕಾನೂನನ್ನು ಪಾಲಿಸಬೇಕು. ಕಾನೂನಿನ ಅರಿವು ಮತ್ತು ಜ್ಞಾನದಿಂದ ನಾವು ಎಷ್ಟೋ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು. ವಿದ್ಯಾರ್ಥಿಗಳು ತಮ್ಮ ಶಾಲಾ-ಕಾಲೇಜು ದಾಖಲಾತಿಗಳಾದ ಜನ್ಮ ದಿನಾಂಕ, ಜಾತಿ, ಪ್ರವರ್ಗ ಇತರೆ ದಾಖಲಾತಿಗಳನ್ನು ಈಗಲೇ ಪರಿಶೀಲಿಸಿಕೊಳ್ಳಬೇಕು. ಎಸ್ಸೆಸ್ಸೆಲ್ಸಿ ಆದ ನಂತರ ದಾಖಲಾತಿಗಳಲ್ಲಿ ದೋಷ ಕಂಡುಬಂದಲ್ಲಿ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಿ ಡಿಕ್ರಿ ಪಡೆಯಬೇಕಾಗುತ್ತದೆ. ಆದ್ದರಿಂದ ಈಗಲೇ ಪರಿಶೀಲಿಸಿಕೊಳ್ಳಬೇಕು. ವಾಹನ ಚಾಲನ ಪರವಾನಗಿ ಪಡೆದುಕೊಂಡು, ವಿಮೆಯನ್ನು ಮಾಡಿಸಿದ ನಂತರ ವಾಹನ ಚಾಲನೆ ಮಾಡಬೇಕು ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶ ಸಿ.ಎನ್.ಚಂದನ್ ಮಾತನಾಡಿ, ಕಾನೂನು ಸೇವಾ ಪ್ರಾಧಿಕಾರವು ಜಿಲ್ಲೆ, ತಾಲೂಕುಮಟ್ಟದಲ್ಲಿ ಉಚಿತ ಕಾನೂನು ಅರಿವು ಮತ್ತು ನೆರವು ನೀಡುತ್ತಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದವರು, ಮಹಿಳಾ ಮತ್ತು ಮಕ್ಕಳು, ಭಿಕ್ಷುಕರು, ಅಂಗವೈಫಲ್ಯ ಹೊಂದಿರುವವರು, ಬಾಲ ಅಪರಾಧಿಗಳು, ಕಾರ್ಖಾನೆ ಕಾರ್ಮಿಕರು, ಗುಂಪು ಘರ್ಷಣೆ, ಗಲಭೆ, ಪ್ರವಾಹ, ಭೂಕಂಪ, ಕೈಗಾರಿಕಾ ವಿನಾಶ ಮುಂತಾದವುಗಳಿಗೆ ತುತ್ತಾದವರು, ವಾರ್ಷಿಕ ಆದಾಯ 3 ಲಕ್ಷ ರೂ.ಗಳಿಗಿಂತ ಕಡಿಮೆ ಇರುವ ಎಲ್ಲ ವರ್ಗದ ನಾಗರಿಕರು ಉಚಿತವಾದ ಕಾನೂನಿನ ಸಲಹೆ ಮತ್ತು ನೆರವನ್ನು ಹಾಗೂ ಆಸಿಡ್ ದಾಳಿಗೆ ಒಳಗಾದ ವ್ಯಕ್ತಿಗಳು ಮತ್ತು ಇನ್ನಿತರೆ ಗಲಭೆಗಳಿಂದ ನೊಂದ ಸಂತ್ರಸ್ತರು ಪರಿಹಾರ ಪಡೆಯಲು ಅರ್ಹರಿದ್ದು, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ತಾಲೂಕು ಕಾನೂನು ಸೇವಾ ಸಮಿತಿಗಳ ಕಡೆಯಿಂದ ಮಾಹಿತಿ ಪಡೆದು ಸೌಲಭ್ಯಗಳ ಸದುಪಯೋಗ ಮಾಡಿಕೊಳ್ಳಬೇಕೆಂದು ಹೇಳಿದರು.
ಎಟಿಎನ್‌ಸಿ ಕಾಲೇಜಿನ ಪ್ರಾಚಾರ್ಯೆ ಪಿ.ಆರ್.ಮಮತಾ ಮಾತನಾಡಿದರು. ವಾಣಿಜ್ಯ ವಿಭಾಗದ ಮುಖ್ಯಸ್ಥ ಪ್ರೊ. ಎಸ್.ಜಗದೀಶ್, ಕಾಲೇಜಿನ ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಪ್ರೊ. ಕೆ.ಎಂ.ನಾಗರಾಜು, ಇಂಗ್ಲಿಷ್ ಉಪನ್ಯಾಸಕ ಅಂಜನ್, ವಾರ್ತಾ ಸಹಾಯಕಿ ಎಂ.ಟಿ.ಭಾಗ್ಯಾ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net