

ಸಾಗರ: ತಾಲೂಕಿನ ಡಿಪೋದಲ್ಲಿ 90 ಸರ್ಕಾರಿ ಬಸ್‌ಗಳು ಸಂಚರಿಸುತ್ತಿದ್ದು, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹೆಚ್ಚಿನ ಬಸ್‌ಗಳು ಪ್ರಯಾಣಿಕರ ಸಂಚಾರಕ್ಕೆ ಲಭ್ಯವಾಗಿವೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ಸಾಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಸಾಗರ-ಮಂತ್ರಾಲಯ ಬಸ್ ಸಂಚಾರಕ್ಕೆ ಹಸಿರು ನಿಶಾನೆ ತೋರಿಸಿ ಮಾತನಾಡಿ, ಜೂ. 11ರಿಂದ ಶಕ್ತಿ ಯೋಜನೆ ಪ್ರಾರಂಭವಾಗಿದ್ದು, ಈತನಕ ಮಹಿಳೆಯರು 62 ಲಕ್ಷ ಬಾರಿ ಯೋಜನೆಯ ಸದುಪಯೋಗ ಪಡೆದುಕೊಂಡಿದ್ದಾರೆ. 28.28 ಕೋಟಿ ರೂ. ಆದಾಯ ಬಂದಿದೆ. ಪ್ರತಿ ದಿನ 13 ಸಾವಿರ ಮಹಿಳೆಯರು ಪ್ರಯಾಣಿಸುತ್ತಿದ್ದು, 5.88ಲಕ್ಷ ರೂ. ಆದಾಯ ಸಂಗ್ರಹವಾಗುತ್ತದೆ ಎಂದು ತಿಳಿಸಿದರು.
ಸಾಗರದ ಶಾಹಿ ಗಾರ್ಮೆಂಟ್ಸ್ ಮಹಿಳೆಯರು ಚುನಾವಣಾ ಪೂರ್ವದಲ್ಲಿ ಸರ್ಕಾರಿ ಬಸ್ ಸೌಲಭ್ಯ ಕಲ್ಪಿಸುವಂತೆ ಮನವಿ ಮಾಡಿದ್ದರು. ಶಾಹಿ ಗಾರ್ಮೆಂಟ್ಸ್‌ನಿಂದ ಆನಂದಪುರ, ರಿಪ್ಪನಪೇಟೆ, ಬಟ್ಟೆಮಲ್ಲಪ್ಪ ಭಾಗಗಳಿಗೆ ಬಸ್ ಸೌಲಭ್ಯ ಕಲ್ಪಿಸಲಾಗಿದೆ. ಪ್ರಯಾಣಿಕರ ಬೇಡಿಕೆ ಹಿನ್ನೆಲೆಯಲ್ಲಿ ವರದಹಳ್ಳಿ-ಮಂತ್ರಾಲಯಕ್ಕೆ ನೂತನ ಪಲ್ಲಕ್ಕಿ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
ನಗರೋತ್ಥಾನ ಯೋಜನೆ ಮೂಲಕ ಸಾಗರದ ರಸ್ತೆಗಳ ದುರಸ್ತಿ ಕಾಮಗಾರಿ ಆರಂಭವಾಗಲಿದ್ದು, ನನೆಗುದಿಗೆ ಬಿದ್ದ ಸೊರಬ ರಸ್ತೆ ಅಗಲೀಕರಣ ಕಾರ್ಯ ಶೀಘ್ರ ಕೈಗೆತ್ತಿಕೊಳ್ಳಲಾಗುವುದು. ಅಭಿವೃದ್ಧಿ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವ ಪ್ರಶ್ನೆ ಇಲ್ಲ ಎಂದು ತಿಳಿಸಿದರು.
ಡಿಪೋ ಮ್ಯಾನೇಜರ್ ರಾಜಪ್ಪ, ನಗರಸಭೆ ಸದಸ್ಯರಾದ ಮಂಡಗಳಲೆ ಗಣಪತಿ, ಮಧುಮಾಲತಿ, ಲಲಿತಮ್ಮ, ಜಾಕೀರ್, ಎಲ್.ಚಂದ್ರಪ್ಪ, ರವಿಕುಮಾರ್, ಉಮೇಶ್, ಪ್ರಮುಖರಾದ ಅಶೋಕ ಬೇಳೂರು, ಅನಿತಾ ಕುಮಾರಿ, ಎನ್.ಉಷಾ, ಕಲಸೆ ಚಂದ್ರಪ್ಪ ಇತರರಿದ್ದರು.