ಪಿಎಂ ಸ್ವನಿಧಿ ಯೋಜನೆಗೆ ಪತ್ರಿಕಾ ವಿತರಕರ ಸೇರ್ಪಡೆ

pm swanidi
Published on

ಬೆಂಗಳೂರು: ಪಿಎಂ ಸ್ವನಿಧಿ ಯೋಜನೆ ವ್ಯಾಪ್ತಿಗೆ ಪತ್ರಿಕಾ ವಿತರಕರನ್ನು ಸೇರ್ಪಡೆ ಮಾಡಿದ್ದು, ಈ ವರ್ಗದವರು ಸೇರಿದಂತೆ ಬೀದಿ ಬದಿ ವ್ಯಾಪಾರಿಗಳು ಒಳಗೊಂಡ ಅಸಂಘಟಿತ ಕ್ಷೇತ್ರದಲ್ಲಿರುವವರಿಗೆ ಕಿರು ಸಾಲಸೌಲಭ್ಯ ಕಲ್ಪಿಸಲು ಸೆ.16ರಿಂದ ಅ.15ರ ವರೆಗೆ ಮಾಸಾಚರಣೆ ಕೈಗೊಳ್ಳಲಾಗಿದೆ.

ಪಿಎಂ ಸ್ವನಿಧಿ ಹಾಗೂ ಸ್ವನಿಧಿ ಸೇ ಸಮೃದ್ಧಿ ಯೋಜನೆಗಳಡಿ ಎಲ್ಲ ಎಂಟೂ ಸಾಮಾಜಿಕ ಭದ್ರತಾ ಯೋಜನೆಗಳನ್ನು ಕಲ್ಪಿಸಲು, ಡಿಜಿಟಲ್ ವಹಿವಾಟನಲ್ಲಿ ತೊಡಗಿಸಿಕೊಳ್ಳಲು ಉತ್ತೇಜಿಸಲು ಕೆಲ ಉಪಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಈ ಮಾಸಾಚರಣೆ ಅವಧಿಯಲ್ಲಿ ಮಂಜೂರಾತಿ ಹಾಗೂ ವಿತರಣೆಗೆ ಬಾಕಿ ಉಳಿದಿರುವ ಅರ್ಜಿಗಳನ್ನು ವಿಲೇ ಮಾಡಲು ಕ್ರಮಕ್ಕೆ ಮುಂದಾಗುವಂತೆ ಸೂಚಿಸಲಾಗಿದೆ.

ಮಂಜೂರಾತಿಗಾಗಿ ಹಾಗೂ ವಿತರಣೆಗಾಗಿ ಬಾಕಿ ಉಳಿದಿರುವ ಅರ್ಜಿಗಳನ್ನು ಸಂಬಂಧಿಸಿದ ಬ್ಯಾಂಕ್ ಮತ್ತು ನಗರ ಸ್ಥಳೀಯ ಸಂಸ್ಥೆಗಳೊಂದಿಗೆ ಸಂಯೋಜನೆ ಮಾಡಿಕೊಂಡು ವಿಲೇಗೆ ಕ್ರಮ ವಹಿಸಬೇಕು. ಪ್ರತೀ ಬ್ಯಾಂಕಿನ ಶಾಖಾ ಮಟ್ಟದಲ್ಲಿ ಸಾಲ ಮೇಳ ಆಯೋಜಿಸುವುದು, ಡಿಜಿಟಲ್ ವಹಿವಾಟಿನಲ್ಲಿ ತೊಡಗಿಸಿಕೊಳ್ಳಲು ಉತ್ತೇಜನ, ಅರ್ಹ ಲಾನುಭವಿಗಳಿಗೆ ಗುರುತಿನಚೀಟಿ ಹಾಗೂ ಮಾರಾಟ ಸದಸ್ಯರಿಗೆ ಪ್ರಮಾಣಪತ್ರ ವಿತರಿಸುವುದು. ಬೀದಿಬದಿ ವ್ಯಾಪಾರಿಗಳಿಗೆ ಮತ್ತು ಅವರ ಕುಟುಂಬಸ್ಥರಿಗೆ ಆರೋಗ್ಯ ಶಿಬಿರ ಆಯೋಜನೆ, ಆಹಾರ ಬೀದಿಬದಿ ವ್ಯಾಪಾರಿಗಳ ಮೇಳ ಆಯೋಜಿಸಲು ರಾಷ್ಟ್ರೀಯ ಜೀವನೋಪಾಯ ಅಭಿಯಾನದ ನಿರ್ದೇಶಕಿ ಡಾ.ರಾಗಪ್ರಿಯಾ ಆರ್ ಅವರು ಸೂಚಿಸಿದ್ದಾರೆ.

ಪಿಎಂ ಸ್ವನಿಧಿ ಯೋಜನೆಗೆ ಪತ್ರಿಕಾ ವಿತರಕರನ್ನು ಸೇರ್ಪಡೆಗೊಳಿಸಿರುವುದು ಅಭಿನಂದನೀಯ. ಪತ್ರಿಕಾ ಏಜೆಂಟರು, ಪತ್ರಿಕೆ ಹಂಚುವ ಹುಡುಗರು ಇದರ ಲಾಭ ಪಡೆಯಲು ಮುಂದಾಗಬೇಕು. ಒಕ್ಕೂಟದ ಜಿಲ್ಲಾ ಮುಖಂಡರು ಈ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು.
- ಕೆ.ಶಂಭುಲಿಂಗ, ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ಅಧ್ಯಕ್ಷ

ಎ.ರಾಮದಾಸ್‌ಗೆ ಅಭಿನಂದನೆ:

ಪಿಎಂ ಸ್ವನಿಧಿ ಯೋಜನೆಯ ರಾಜ್ಯ ಸಂಚಾಲಕ ಎ. ರಾಮದಾಸ್ ಅವರನ್ನು ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ಪದಾಧಿಕಾರಿಗಳು ಭೇಟಿ ನೀಡಿದ್ದ ಅಭಿನಂದನೆ ಸಲ್ಲಿಸಿದರು. ಪತ್ರಿಕಾ ವಿತರಕರನ್ನು ಯೋಜನೆ ವ್ಯಾಪ್ತಿಗೆ ಸೇರಿಸಲು ಸಹಕರಿಸಿದ ಹಿನ್ನೆಲೆಯಲ್ಲಿ ಒಕ್ಕೂಟವು ಹರ್ಷ ವ್ಯಕ್ತಪಡಿಸಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net