

ಶಿವಮೊಗ್ಗ: ಸಮಾಜ ಸುಧಾರಣೆ ಮಾಡಬೇಕಾದರೆ ಅಥವಾ ತಪ್ಪುಗಳನ್ನು ಸರಿಪಡಿಸಬೇಕಾದರೆ ಸಂಬಂಧಪಟ್ಟ ಅಧಿಕಾರಿ, ಇಲಾಖೆ ಗಮನಕ್ಕೆ ತರಬೇಕು ಹೊರತು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವುದು ಸರಿಯಲ್ಲ. ಅದು ಬೇರೆಯವರಿಗೆ ಪ್ರಚೋದನೆ ನೀಡಿ ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂದು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹೇಳಿದರು.
ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ನಗರದ ಡಿಎಆರ್ ಸಭಾಂಗಣದಲ್ಲಿ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯಿಂದ ಗುರುವಾರ ಏರ್ಪಡಿಸಿದ್ದ ಶಾಂತಿ ಸಭೆಯಲ್ಲಿ ಮಾತನಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದರಿಂದ ಮತ್ತೊಬ್ಬರಿಗೆ ಪ್ರಚೋದನೆ ಆಗಲಿದೆ ಎಂದು ತಿಳಿಸಿದರು.
ಸಭೆಯಲ್ಲಿ ಚರ್ಚೆಯಾದ ವಿಷಯಗಳನ್ನು ವಿವಿಧ ಧರ್ಮಗಳ ಮುಖಂಡರು ಆಯಾ ಸಮಾಜದ ಯುವ ಪೀಳಿಗೆಗೆ ತಿಳಿಸಬೇಕು. ಸಣ್ಣ ಸಮಸ್ಯೆಗಳು ಗಮನಕ್ಕೆ ಬಂದಾಗಲೇ ಸರಿಪಡಿಸಿದರೆ ಗೊಂದಲಗಳು ಆಗುವುದಿಲ್ಲ ಎಂದರು.
ವಕೀಲ ರಾಮಚಂದ್ರಪ್ಪ ಮಾತನಾಡಿ, ಹಬ್ಬಗಳ ಸಂದರ್ಭ ಎಲ್ಲರೂ ಕರ್ತವ್ಯ, ಜವಾಬ್ದಾರಿಗಳನ್ನು ನಿರ್ವಹಿಸಿದರೆ ಯಾವುದೇ ಸಮಸ್ಯೆಗಳು ಉದ್ಭವಿಸುವುದಿಲ್ಲ. ಶಾಂತಿಯನ್ನು ಕದಡಿ ಕೆಲವರು ತಮ್ಮ ಬೇಳೆ ಬೇಯಿಸಿಕೊಳ್ಳುವುದಕ್ಕೆ ಯತ್ನಿಸುತ್ತಾರೆ. ಇದಕ್ಕೆ ಅವಕಾಶ ಕೊಡಬಾರದು ಎಂದು ಸಲಹೆ ನೀಡಿದರು.
ಮಹಾನಗರ ಪಾಲಿಕೆ ಆಯುಕ್ತ ಕೆ.ಮಾಯಣ್ಣ ಗೌಡ, ಮುಸ್ಲಿಂ ಮುಖಂಡ ಅಫ್ತಾಬ್ ಪರ್ವೇಜ್, ಮುಖಂಡ ರಮೇಶ್ ಬಾಬು ಜಾಧವ್ ಮಾತನಾಡಿದರು. ಎಎಸ್‌ಪಿ ಅನಿಲ್‌ಕುಮಾರ್ ಭೂಮರಡ್ಡಿ, ಕೆ.ಸಿ.ಕಾರ್ಯಾಪ್ಪ, ಪಶು ಇಲಾಖೆ ಉಪ ನಿರ್ದೇಶಕ ಡಾ. ಬಿ.ಶಿವಯೋಗಿ ಯಲಿ, ಶಿವಮೊಗ್ಗ ತಹಸೀಲ್ದಾರ್ ಬಿ.ಎನ್.ಗಿರೀಶ್ ಉಪಸ್ಥಿತರಿದ್ದರು.
ಕಿಡಿಗೇಡಿಗಳ ಗಡೀಪಾರಿಗೆ ಪರಿಶೀಲನೆ
ಮೂರ್ನಾಲ್ಕು ವರ್ಷಗಳ ಅಪರಾಧ ಹಿನ್ನೆಲೆಯನ್ನು ಪರಿಶೀಲಿಸಿ ಕೆಲ ಕಿಡಿಗೇಡಿಗಳನ್ನು ಪತ್ತೆ ಮಾಡಿದ್ದೇವೆ. ಅವರನ್ನು ಗಡೀಪಾರು ಮಾಡಬೇಕೋ, ಬೇಡವೋ ಎಂಬುದನ್ನು ಪರಿಶೀಲಿಸುತ್ತೇವೆ ಎಂದು ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ಎಚ್ಚರಿಸಿದರು. ಜಿಲ್ಲೆಯ ಎಲ್ಲ ಠಾಣಾ ವ್ಯಾಪ್ತಿಯಲ್ಲೂ ಬೀಟ್ ಮತ್ತು ಸೂಕ್ಷ್ಮ ಪ್ರದೇಶಗಳಲ್ಲಿ ಮೊಹಲ್ಲಾ ಸಭೆ ನಡೆಸಲಾಗುತ್ತಿದೆ. ವಿಶೇಷವಾಗಿ ಮುಸ್ಲಿಮರು ಕುರ್ಬಾನಿ ಕೊಡುವಾಗ ಎಚ್ಚರಿಕೆ ವಹಿಸಬೇಕು. ಪೋಟೋ, ವಿಡಿಯೋಗಳನ್ನು ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಾಕುವ ಬಗ್ಗೆ ಪರಾಮರ್ಶಿಸಬೇಕು. ವಿಡಿಯೋ ಅಥವಾ ಫೋಟೋದಲ್ಲಿ ಮತ್ತೊಂದು ಧರ್ಮೀಯರನ್ನು ಅವಹೇಳನ ಮಾಡಬಾರದು ಎಂದು ಸಲಹೆ ನೀಡಿದರು.