ನಿಲ್ಲದ ಮಳೆ, ಜಮೀನುಗಳಲ್ಲಿ ನಿಂತ ನೀರು

IMG-20240522-WA0157
ಹನಗೋಡಿನಲ್ಲಿ ಸುರಿದ ಭಾರಿ ಮಳೆಗೆ ಅಂಗಡಿ, ಬೇಕರಿಗೆ ನೀರು ನುಗ್ಗಿದೆ.
Published on

ಹನಗೋಡು: ಸುತ್ತಮುತ್ತಲ ಗ್ರಾಮಗಳಲ್ಲಿ ಮಂಗಳವಾರ ರಾತ್ರಿಯೂ ಭಾರಿ ಮಳೆ ಬಿದ್ದಿದ್ದು, ಜಮೀನಿನಲ್ಲಿ ಅಪಾರ ನೀರು ನಿಂತಿದೆ. ಬೆಳೆಗಳು ಕೊಚ್ಚಿ ಹೋಗಿದೆ. ರಸ್ತೆ ಮೇಲೆ ನೀರು ಹರಿಯುತ್ತಿದೆ.
ಹನಗೋಡು ಗ್ರಾಮದಲ್ಲಿ ಅಂಗಡಿ, ಮನೆಗೆ ನೀರು ನುಗ್ಗಿ ಸಾಕಷ್ಟು ಅನಾಹುತ ಸೃಷ್ಟಿಸಿದೆ. ಎಡೆಬಿಡದ ಮಳೆಯಿಂದಾಗಿ ಹನಗೋಡು, ಹಿಂಡಗುಡ್ಡು, ಕಿರಂಗೂರು, ಹರಳಹಳ್ಳಿ, ಬಿ.ಆರ್.ಕಾವಲ್, ಅಬ್ಬೂರು ಸೇರಿದಂತೆ ವಿವಿಧ ಹಳ್ಳಿಗಳ ಜಮೀನು ಕೆರೆಗಳಂತಾಗಿದೆ. ಶುಂಠಿ, ತಂಬಾಕು, ಮೆಣಸಿಗೆ, ಮುಸುಕಿನ ಜೋಳದ ಬೆಳೆಗಳು ನೀರು ಪಾಲಾಗಿದೆ.
ರಸ್ತೆ ಬಂದ್: ಹನಗೋಡು-ಕಿರಂಗೂರು-ಹರಳಹಳ್ಳಿ ರಸ್ತೆಯ ಹಳ್ಳದಲ್ಲಿ ಭಾರಿ ನೀರು ರಸ್ತೆ ಮೇಲೆ ಹರಿದು ಬುಧವಾರ ಮುಂಜಾನೆ ವರೆವಿಗೂ ರಸ್ತೆ ಬಂದ್ ಆಗಿತ್ತು. ಹನಗೋಡಿನ ಕೃಷ್ಣೇಗೌಡ ಹಾಗೂ ದಲಿತ ಬಡಾವಣೆಯ ಹರೀಶ್ ಅವರ ಮನೆ ಗೋಡೆ ಕುಸಿದಿದ್ದು, ಮನೆಯೊಳಗಿದ್ದ ದವಸ ಧಾನ್ಯ, ಬಟ್ಟೆ ಸೇರಿದಂತೆ ಪದಾರ್ಥಗಳು ನೀರಿನಲ್ಲಿ ತೋಯ್ದು ಹಾಳಾಗಿವೆ. ಹನಗೋಡಿನ ಬಸ್ ನಿಲ್ದಾಣದ ಎದುರಿನ ಬೇಕರಿ, ಮೆಡಿಕಲ್ಸ್, ದಿನಸಿ ಅಂಗಡಿಗಳಿಗೆ ನೀರು ನುಗ್ಗಿದ ಪರಿಣಾಮ ಅಪಾರ ಹಾನಿಯಾಗಿದ್ದು, ಮಳಿಗೆಗಳಿಂದ ಮಳೆ ನೀರನ್ನು ಹರಸಾಹಸಪಟ್ಟು ಹೊರ ಹಾಕಿದರು. ಹನಗೋಡು ಹೋಬಳಿಯ ಹರೀನಹಳ್ಳಿ ಮುತ್ತುರಾಯನಹೊಸಹಳ್ಳಿ, ಕಣಗಾಲು, ಕಲ್ಲಹಳ್ಳಿ, ಅತ್ತಿಕುಪ್ಪೆ ಚಿಲ್ಕುಂದ ಸೇರಿದಂತೆ ಬಹುತೇಕ ಗ್ರಾಮಗಳಲ್ಲಿ ಮಳೆ ಬಿದ್ದಿದ್ದು, ಸಾಕಷ್ಟು ಬೆಳೆ ಹಾನಿಯಾಗಿದೆ. ಕಲ್ಲಹಳ್ಳಿಯ ಬೈಕಟ್ಟೆ ತುಂಬಿ ರಸ್ತೆ ಮೇಲೆ ಅಪಾರ ಪ್ರಮಾಣದ ನೀರು ಜಮೀನಿನ ಮೇಲೆ ಹರಿದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net