

ಸಾಗರ: ನೂತನ ಶಿಲಾಮಯ ಯಲ್ಲಮ್ಮನ ದೇವಸ್ಥಾನ ಉದ್ಘಾಟನಾ ಕಾರ್ಯಕ್ರಮವು ಫೆ.3ರಿಂದ 5ರವರೆಗೆ ಆಯೋಜಿಸಲಾಗಿದೆ. ಸುಮಾರು 2.50 ಕೋಟಿ ರೂ. ವೆಚ್ಚದಲ್ಲಿ ದೇವಸ್ಥಾನ ನಿರ್ಮಿಸಲಾಗಿದೆ ಎಂದು ಯಲ್ಲಮ್ಮ ದೇವಿ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಎಸ್.ಬಿ.ರಘುನಾಥ್ ತಿಳಿಸಿದರು.
ನೂರಾರು ವರ್ಷಗಳ ಇತಿಹಾಸ ಇರುವ ದೇವಸ್ಥಾನವನ್ನು ಅತ್ಯಂತ ಸುಂದರವಾಗಿ ಮರುನಿರ್ಮಾಣ ಮಾಡಲಾಗಿದೆ. ಸಂಸದರ ನಿಧಿ ಜತೆಗೆ ದಾನಿಗಳು ದೇವಸ್ಥಾನ ನಿರ್ಮಾಣಕ್ಕೆ ಆರ್ಥಿಕ ಸಹಕಾರ ನೀಡಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಫೆ.3ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ಫೆ.4ರಂದು ಬೆಳಗ್ಗೆ 9.15ರ ಶುಭಲಗ್ನದಲ್ಲಿ ದೇವಸ್ಥಾನ ಹಾಗೂ ಯಲ್ಲಮ್ಮ ದೇವಿಯ ವಿಗ್ರಹದ ಪ್ರತಿಷ್ಠಾಪನೆ ನಡೆಯಲಿದೆ. ಮಧ್ಯಾಹ್ನ 12.30ಕ್ಕೆ ಸಾರ್ವಜನಿಕ ಅನ್ನ ಸಂತರ್ಪಣೆ ಇರುತ್ತದೆ. ಸಂಜೆ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಲಿವೆ ಎಂದು ತಿಳಿಸಿದರು.
ಫೆ.5ರಂದು ಬೆಳಿಗ್ಗೆ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ಸಂಜೆ 5ಕ್ಕೆ ನೂತನ ಸಭಾಭವನವನ್ನು ಶಾಸಕ ಗೋಪಾಲಕೃಷ್ಣ ಬೇಳೂರು ಉದ್ಘಾಟಿಸುವರು. ಸಂಸದ ಬಿ.ವೈ.ರಾಘವೇಂದ್ರ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸುವರು. ಮಾಜಿ ಸಚಿವ ಹರತಾಳು ಹಾಲಪ್ಪ, ಉಪವಿಭಾಗಾಧಿಕಾರಿ ಯತೀಶ್, ಪೌರಾಯುಕ್ತ ಎಚ್.ಕೆ.ನಾಗಪ್ಪ, ಪ್ರತಿಷ್ಠಾನದ ಅಧ್ಯಕ್ಷ ಎಸ್.ಬಿ.ರಘುನಾಥ್, ಪ್ರಮುಖರಾದ ಪ್ರಫುಲ್ಲಾ ಮಧುಕರ್, ಎಸ್.ಟಿ.ದೇವರಾಜ್, ಎನ್.ಲಲಿತಮ್ಮ, ಕುಸುಮಾ ಸುಬ್ಬಣ್ಣ ಇನ್ನಿತರರು ಉಪಸ್ಥಿತರಿರುವರು. ನಂತರ ಭರತನಾಟ್ಯ, ಜಾನಪದ ನೃತ್ಯ ಹಾಗೂ ಸುಗಮ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದರು.
ಗೋಷ್ಠಿಯಲ್ಲಿ ಪ್ರತಿಷ್ಠಾನದ ಉಮೇಶ್ ಹಿರೇನೆಲ್ಲೂರು ಚಂದ್ರಕಾಂತ್ ಜಿಂಗಾಡೆ, ಶಶಿಧರಮೂರ್ತಿ ಹಾಜರಿದ್ದರು.