ದೇಶದ ಪ್ರಥಮ ಭೂಗತ ಪರಿವರ್ತಕ ಲೋಕಾರ್ಪಣೆ ನಾಳೆ

transformer
Published on

ಬೆಂಗಳೂರು: ಭಾರತದಲ್ಲೇ ಮೊದಲು ವಿದ್ಯುಚ್ಛಕ್ತಿ ಸಂರ್ಪಕ ಪಡೆದ ನಗರವೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಬೆಂಗಳೂರು ನಗರ, ಈಗ ದೇಶದಲ್ಲೇ ಪ್ರಥಮ ಬಾರಿಗೆ ಭೂಗತ ಪರಿವರ್ತಕವನ್ನು ಹೊಂದುವ ಅವಕಾಶ ದೊರೆತಿದೆ. ಇಂಜಿನಿಯರ್‌ಗಳ ತಾಂತ್ರಿಕ ನೈಪುಣ್ಯಗೆ ಸಾಕ್ಷಿಯಾಗಿರುವ ಈ ಕಾರ್ಯಕ್ಕೆ ಬೆಸ್ಕಾಂ ಹಾಗೂ ಬಿಬಿಎಂಪಿ ಸಹಯೋಗ ನೀಡಿದ್ದು, ಮಲ್ಲೇಶ್ವರದಲ್ಲಿ ನಿರ್ಮಿಸಿರುವ ಮಂಗಳವಾರ (ಸೆ.5) ಸಾರ್ವಜನಿಕ ಸೇವೆಗೆ ಮುಕ್ತವಾಗಲಿದೆ.

ಸಂಪೂರ್ಣ ಸುರಕ್ಷತೆ ಹಾಗೂ ಯಾವುದೇ ಅವಘಡಗಳಿಗೆ ಆಸ್ಪದ ನೀಡದ ಈ ಭೂಗತ ಪರಿವರ್ತಕಗಳು ವಿದೇಶಗಳಲ್ಲಿ ಜನಪ್ರಿಯತೆ ಪಡೆದಿವೆ. ಆದರೆ, ಭಾರತದಲ್ಲಿ ಈಗಷ್ಟೇ ಪ್ರಯೋಗ ಮಾಡಲಾಗಿದೆ. ನಿಕಟಪೂರ್ವ ಸರ್ಕಾರದ ಇಂಧನ ಸಚಿವ ಸುನೀಲ್‌ಕುಮಾರ್ ಅವರು ಈ ಯೋಜನೆಗೆ ಹೆಚ್ಚಿನ ಆಸಕ್ತಿ ತೋರಿಸಿದ್ದು, ಕಾಮಗಾರಿ ಆರಂಭಿಸಲು ಒಪ್ಪಿಗೆ ಸೂಚಿಸಿದ್ದರು. ಸುಮಾರು ಒಂದು ವರ್ಷದ ತಾಂತ್ರಿಕ ಪರಿಶೀಲನೆ, ಕಾಮಗಾರಿ ಹಾಗೂ ಇನ್ನಿತರ ಕೆಲಸಗಳು ಪೂರ್ಣಗೊಂಡ ಬಳಿಕ ಅಧಿಕೃತ ಬಳಕೆಗೆ ಸಿದ್ಧಪಡಿಸಲಾಗಿದೆ.

ಮಲ್ಲೇಶ್ವರದ 15ನೇ ಅಡ್ಡರಸ್ತೆಯಲ್ಲಿ ನಿರ್ಮಿಸಿರುವ 500 ಕೆವಿ ಭೂಗತ ಪರಿವರ್ತಕವನ್ನು 8 ಅಡಿ ಆಳದಲ್ಲಿ ಅಳವಡಿಸಲಾಗಿದೆ. ಚೇಂಬರ್ ಮಾದರಿಯ ಬಾಕ್ಸ್‌ನಲ್‌ಇ ಹವಾನಿಯಂತ್ರಿತ ವ್ಯವಸ್ಥೆ ಇದ್ದು, ಪರಿವರ್ತಕ ಬಿಸಿಯಾದರೂ, ಅದರಿಂದ ಹೊರಹೊಮ್ಮುವ ಬಿಸಿ ಯಾರಿಗೂ ತಟ್ಟಲಾರದು. ಮಳೆ, ಗಾಳಿ ಬೀಸಿದಾಗ ಸಾಮಾನ್ಯ ಪರಿವರ್ತಕಗಳು ಹಾಳಗಲಿದ್ದು, ಈ ಹೊಸ ಮಾದರಿಯದ್ದು ಯಾವುದಕ್ಕೂ ಜಗ್ಗುವುದಿಲ್ಲ. ದೀರ್ಘ ಬಾಳಿಕೆಯೂ ಬರುವುದರಿಂದ ದುರಸ್ತಿ ಕೂಡ ಕಡಿಮೆ. ಆದರೆ, ವೆಚ್ಚ ಮಾತ್ರ ದುಬಾರಿಯಾಗಿದೆ.

1.97 ಕೋಟಿ ರೂ. ವೆಚ್ಚ:

ಮಲ್ಲೇಶ್ವರದಲ್ಲಿ ನಿರ್ಮಿಸಿರುವ ಈ ಭೂಗತ ಪರಿವರ್ತಕ ನಿರ್ಮಿಸಲು 1.97 ಕೋಟಿ ರೂ. ವೆಚ್ಚವಾಗಲಿದೆ. ಈ ಪೈಕಿ 1.33 ಕೋಟಿ ರೂ. ಇಲೆಕ್ಟ್ರಿಕಲ್ ಕಾಮಗಾರಿಗೆ ಖರ್ಚಾಗಿದೆ. ವಿಶೇಷವೆಂದರೆ ಬಿಬಿಎಂಪಿ ಕೂಡ ಬೆಸ್ಕಾಂನ ಯೋಜನೆಗೆ ಕೈಜೋಡಿಸಿದ್ದು, 64 ಲಕ್ಷ ರೂ. ಅನುದಾನ ಒದಗಿಸಿದೆ. ಇತರ ಸಾಮಾನ್ಯ ಪರಿವರ್ತಕಗಳಿಗಿಂತ ಹೆಚ್ಚು ಬಾಳಿಕೆ ಬರುವುದರಿಂದ ಇನ್ನಷ್ಟೇ ನಿಖರವಾಗಿ ವೆಚ್ಚ ತಗ್ಗಿಸುವ ಕುರಿತು ಮಾಹಿತಿ ಸಂಗ್ರಹಿಸಲು ಬೆಸ್ಕಾಂ ಅಧಿಕಾರಿಗಳು ಮುಂದಾಗಿದ್ದಾರೆ.

ಮುಖ್ಯಮಂತ್ರಿಯಿಂದ ಉದ್ಘಾಟನೆ:

ದೇಶದಲ್ಲೇ ಪ್ರಥಮ ಭೂಗತ ಪರಿವರ್ತಕ ಕೇಂದ್ರವನ್ನು ಸೆ.5ರ ಬೆಳಿಗ್ಗೆ 11 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ಇಂಧನ ಸಚಿವ ಕೆ.ಜೆ.ಜಾರ್ಜ್, ಸಂಸದ ಡಿ.ವಿ.ಸದಾನಂದಗೌಡ, ಶಾಸಕ ಡಾ. ಸಿ.ಎನ್. ಅಶ್ವತ್ಥ್‌ನಾರಾಯಣ ಹಾಗೂ ಬೆಸ್ಕಾಂ ಅಧಿಕಾರಿಗಳು ಭಾಗಿಯಾಗಲಿದ್ದಾರೆ.

ಮಲ್ಲೇಶ್ವರದ 15ನೇ ಅಡ್ಡರಸ್ತೆಯಲ್ಲಿ ಭಾರತದಲ್ಲೇ ಪ್ರಪ್ರಥಮವಾಗಿ ನಿರ್ಮಿಸಿರುವ 500 ಕೆವಿಎ ಸಾಮರ್ಥ್ಯದ ಭೂಗತ ಪರಿವರ್ತಕ ಹಾಗೂ 8ವೇ ಆರ್‌ಎಂಯು ಮಂಗಲವಾರ ಉದ್ಘಾಟನೆ ಮಾಡಲಾಗುತ್ತಿದೆ. ಪಾದಚಾರಿಗಳ ಸುರಕ್ಷತೆ, ನಿರಂತರ ವಿದ್ಯುತ್ ಪೂರೈಕೆ ಹಾಗೂ ಸ್ಥಳಾವಕಾಶದ ಸದುಪಯೋಗವನ್ನು ಗಮನದಲ್ಲಿರಿಸಿ ಅತ್ಯಾಧುನಿಕ ಶೈಲಿಯಲ್ಲಿ ಈ ಭೂಗತ ಪರಿವರ್ತಕವನ್ನು ನಿರ್ಮಿಸಲಾಗಿದೆ.

- ಡಾ. ಸಿ.ಎನ್. ಅಶ್ವತ್ಥ್‌ನಾರಾಯಣ, ಮಲ್ಲೇಶ್ವರ ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net