ಸಹಕಾರ ಮೂರ್ತಿಯಾಗಿ ಕಾಣುವ ತಾಯಿ: ಚುಂಚಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಅಭಿಮತ

Inauguration of Sabhabhavan at Y Yarahalli village Mandya
Published on

ಮಂಡ್ಯ: ಮಕ್ಕಳ ಏಳಿಗೆಯಲ್ಲಿ ತಾಯಂದಿರ ಪಾತ್ರ ಹೆಚ್ಚು. ಆಕೆಯ ನಿಸ್ವಾರ್ಥ ಪ್ರೀತಿ, ತ್ಯಾಗ ಮತ್ತು ತಾಳ್ಮೆಯಿಂದ ಮಕ್ಕಳ ಬೆಳವಣಿಗೆಗೆ ಸಹಕಾರ ಮೂರ್ತಿಯಾಗಿ ಕಾಣುತ್ತಾರೆ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.

ತಾಲೂಕಿನ ವೈ.ಯರಹಳ್ಳಿಯಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘ ನೂತನ ಸಭಾಭವನ ಉದ್ಘಾಟನೆ, ಜಯಚಾಮರಾಜೇಂದ್ರ ಒಡೆಯರ್, ಡಾ.ಬಾಲಗಂಗಾಧರನಾಥ ಮಹಾಸ್ವಾಮೀಜಿ, ಸರ್‌ಎಂ.ವಿಶ್ವೇಶ್ವರಯ್ಯ ಅವರ ಪುತ್ಥಳಿ ಅನಾವರಣ ಹಾಗೂ ಕನ್ನಡ ರಾಜ್ಯೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದ ಏಳಿಗೆಗೆ ಶ್ರಮಿಸಿದ ನಾಯಕರ ಪ್ರತಿಮೆಯನ್ನು ಗ್ರಾಮದಲ್ಲಿ ಸ್ಥಾಪಿಸಲಾಗಿದೆ. ಇಂತಹವರ ಆದರ್ಶವನ್ನು ಯುವ ಜನಾಂಗ ಮೈಗೂಡಿಸಿಕೊಳ್ಳಬೇಕು. ತಾಯಂದಿರು ಮನಸ್ಸು ಮಾಡಿದರೆ ತಪ್ಪು ದಾರಿಯಲ್ಲಿ ಹೋಗುವ ಮಕ್ಕಳನ್ನು ಸರಿದಾರಿಗೆ ತರುವ ನಿಟ್ಟಿನಲ್ಲಿ ಬಾಲ್ಯದಲ್ಲಿಯೇ ಅವರನ್ನು ತಿದ್ದುವ ಕೆಲಸವಾಗಬೇಕು ಎಂದು ಸಲಹೆ ನೀಡಿದರು.

ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಬಡ ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡುವ ಮೂಲಕ ಶ್ರೀಮಠವು ಹೆಸರುವಾಸಿಯಾಗಿದೆ. ಜ್ಞಾನದ ವಿಷಯಕ್ಕೆ ಹೆಚ್ಚು ಒತ್ತು ನೀಡಿರುವ ಮಠವು ಎಲ್ಲ ವರ್ಗದ ವಿದ್ಯಾರ್ಥಿಗಳಿಗೂ ನೆರವಾಗಿರುವುದು ಮೆಚ್ಚುವ ಕೆಲಸ ಎಂದು ಶ್ಲಾಘಿಸಿದರು.

ಬಿಜೆಪಿ ಮುಖಂಡ ಸಚ್ಚಿದಾನಂದ ಇಂಡುವಾಳು ಮಾತನಾಡಿ, ಚುಂಚನಗಿರಿ ಮಠವನ್ನು ಚಿನ್ನದ ಗಿರಿ ಮಾಡಿದಂತಹ ಬಾಲಗಂಗಾಧರನಾಥ ಸ್ವಾಮೀಜಿ ಅವರು ಮಂಡ್ಯ ಜಿಲ್ಲೆಯನ್ನು ಅಂದಿನ ಕಾಲದಲ್ಲಿಯೇ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡುವಂತೆ ಮಾಡಿದ್ದಾರೆ. ವಿದ್ಯಾ ಸಂಸ್ಥೆಗಳನ್ನು ತೆರೆದು ವಿದ್ಯಾರ್ಥಿಗಳಿಗೆ ನೆರವಾಗಿದ್ದಾರೆ. ಗಿಡಗಳನ್ನು ನೆಡುವ ಮೂಲಕ ವೃಕ್ಷಾರಣ್ಯಗಳನ್ನು ಬೆಳೆಸಿರುವುದು ಕೀರ್ತಿ ತಂದಂತಾಗಿದೆ ಎಂದು ಸ್ಮರಿಸಿದರು.

ಜಲ ಸಂಪನ್ಮೂಲ ಇಲಾಖೆಯ ಅಧೀಕ್ಷಕ ಇಂಜಿನಿಯರ್ ಸತೀಶ್, ಕಾರ್ಯಕ್ರಮ ಸಂಯೋಜಕ ಶಿವಕುಮಾರ್ ವೈ.ಯರಹಳ್ಳಿ, ಮುಖಂಡರಾದ ಪುಟ್ಟಸ್ವಾಮಿ, ದೇವೇಗೌಡ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net