ಬಿಜೆಪಿ ಮಂತ್ರಾಕ್ಷತೆ: ಡಿಸಿಎಂ ಶಿವಕುಮಾರ್ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ

HD Kumaraswamy
Published on

ಬೆಂಗಳೂರು: ನಮ್ಮ ಅಕ್ಕಿ ಬಳಸಿಕೊಂಡು ಜನತೆಗೆ ಬಿಜೆಪಿ ಮಂತ್ರಾಕ್ಷತೆ ಹಂಚುತ್ತಿದ್ದಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ನೀಡಿರುವ ಹೇಳಿಕೆಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಇವರ ಅಕ್ಕಿ ಎಂದರೆ ದೊಡ್ಡ ಆಲದಹಳ್ಳಿಯ ಅವರ ತೋಟದಲ್ಲಿ ಬೆಳೆದಿರುವುದಾ? ಎಂದು ಟಾಂಗ್ ಕೊಟ್ಟರು.

ಜೆ.ಪಿ. ಭವನದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ರಾಜಕೀಯ ಮಾಡುತ್ತಿರುವುದು ಅವರು. ಇವರು ಅಕ್ಕಿಯನ್ನು ತಮ್ಮ ಸ್ವಗ್ರಾಮ ದೊಡ್ಡ ಆಲದಹಳ್ಳಿಯಲ್ಲಿ ಬೆಳೆದು ಕಳಿಸಿ ಕೊಟ್ಟಿದ್ದಾರೆಯೇ? ಎಂದು ವಾಗ್ದಾಳಿ ನಡೆಸಿದರು.

ರಾಮ ಮಂದಿರಕ್ಕೆ ನಮಗೆ ಆಹ್ವಾನ ನೀಡಿಲ್ಲ ಎಂದು ದೂರಿರುವ ಡಿಕೆಶಿ ಆರೋಪದ ಬಗ್ಗೆ ಪ್ರತ್ಯುತ್ತರ ನೀಡಿದ ಅವರು, ರಾಮ ಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ಕರೆಯಬೇಕಾ ಅವರನ್ನು? ಪ್ರಧಾನಿಗಳು ಈಗಾಗಲೇ ಹೇಳಿದ್ದಾರೆ. ಉದ್ಘಾಟನೆ ದಿನ ಗೊಂದಲ ಆಗುವುದು ಬೇಡ. ಮುಂದೆ ದೇವಾಲಯವನ್ನು ಸಾರ್ವಜನಿಕರ ಪ್ರವೇಶಕ್ಕೆ ಮುಕ್ತಗೊಳಿಸಿದಾಗ ಎಲ್ಲರೂ ಶ್ರೀರಾಮ ದೇವರ ದರ್ಶನ ಪಡೆಯಬಹುದು. ಆಗ ಯಾರು ಬೇಕಾದರೂ ಹೋಗಬಹುದು. ಅದಕ್ಕೇನು ಪರ್ಮಿಷನ್ ಬೇಕಾ? ಎಂದು ಕುಮಾರಸ್ವಾಮಿ ಚಾಟಿ ಬೀಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net