

ಶ್ರೀನಗರ: ಮಹತ್ವದ ಅಟಲ್ ಸುರಂಗ ಮಾರ್ಗವನ್ನು ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಲೋಕಾರ್ಪಣೆ ಮಾಡಿದ ಬೆನ್ನಲ್ಲೇ, ಶ್ರೀನಗರ ಕಣಿವೆಯಿಂದ ಲೇಹ್ಗೆ ಸಂಪರ್ಕ ಕಲ್ಪಿಸುವ ಸರ್ವಋತು ಸುರಂಗ ಮಾರ್ಗ ನಿರ್ಮಾಣಕ್ಕೆ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಗುರುವಾರ ಚಾಲನೆ ನೀಡಿದರು. ಏಷ್ಯಾದ ಅತ್ಯಂತ ಉದ್ದದ ಸುರಂಗಗಳಲ್ಲಿ ಇದೂ ಒಂದಾಗಿದೆ. 14.15 ಕಿ.ಮೀ ಉದ್ದದ ಸುರಂಗ ನಿರ್ಮಾಣಕ್ಕಾಗಿ ಬೃಹತ್ ಬಂಡೆ ಸ್ಫೋಟಿಸುವ ಕಾರ್ಯಕ್ಕೂ ಗಡ್ಕರಿ ಚಾಲನೆ ನೀಡಿದರು.
ಭದ್ರತಾ ದೃಷ್ಟಿಯಲ್ಲಿ ಮಹತ್ವದು:ಶ್ರೀನಗರ-ಕಾರ್ಗಿಲ್-ಲೇಹ್ ರಾಷ್ಟ್ರೀಯ ಹೆದ್ದಾರಿಯಲ್ಲಿ 11,578 ಅಡಿ ಎತ್ತರದಲ್ಲಿ ಜೋಜಿಲಾ ಪಾಸ್ ಇದೆ. ಹೀಗಾಗಿ ಇದು ವ್ಯೂಹಾತ್ಮಕ ಮಹತ್ವ ಪಡೆದುಕೊಂಡಿದೆ. ಭಾರಿ ಹಿಮಪಾತದಿಂದ ಚಳಿಗಾಲದಲ್ಲಿ ಈ ಮಾರ್ಗ ಮುಚ್ಚಿರುತ್ತದೆ. ಇದು ಜಗತ್ತಿನ ಅತ್ಯಂತ ಅಪಾಯಕಾರಿ ಸಂಚಾರ ಪ್ರದೇಶಗಳಲ್ಲಿ ಒಂದಾಗಿದೆ. ಈ ಕಡಿದಾದ ಮಾರ್ಗದಲ್ಲಿ ವಾಹನ ಚಲಾಯಿಸುವುದೇ ಸಾಹಸದ ಕೆಲಸವಾಗಿದೆ. ಹೀಗಾಗಿ, ಈ ಯೋಜನೆ ಭೌಗೋಳಿಕ-ವ್ಯೂಹಾತ್ಮಕವಾಗಿಯೂ ಮಹತ್ವ ಪಡೆದುಕೊಂಡಿದೆ. ಸುರಂಗ ಪೂರ್ಣಗೊಂಡಾಗ ಆಧುನಿಕ ಭಾರತದ ಇತಿಹಾಸದಲ್ಲಿ ದೊಡ್ಡ ಸಾಧನೆಯಾಗಲಿದೆ. ಲಡಾಖ್, ಗಿಲ್ಗಿಟ್ ಮತ್ತು ಬಾಲ್ಟಿಸ್ತಾನ್ ಗಡಿಗಳಲ್ಲಿ ಭಾರಿ ಪ್ರಮಾಣದಲ್ಲಿ ಮಿಲಿಟರಿ ಚಟುವಟಿಕೆಗಳು ನಡೆಯುತ್ತಿರುವುದರಿಂದ ದೇಶದ ರಕ್ಷಣೆಯಲ್ಲೂ ಇದು ಮಹತ್ವದ ಪಾತ್ರ ವಹಿಸಲಿದೆ ಎಂದು ಸರ್ಕಾರ ಹೇಳಿದೆ. ಎಂಐಇಎಲ್ ಕಂಪನಿ ಕಾಮಗಾರಿ ನಡೆಸುತ್ತಿದೆ.
3000 ಅಡಿ ಕೆಳಗೆ: ಜೋಜಿಲಾ ಪಾಸ್ನ 3000 ಅಡಿ ಕೆಳಗಡೆ 14.15 ಕಿ.ಮೀ. ಉದ್ದದ ಸುರಂಗ ನಿರ್ಮಾಣ ಈ ಯೋಜನೆಯಲ್ಲಿ ಒಳಗೊಂಡಿದೆ. ಸದ್ಯ ದ್ರಾಸ್ ಮತ್ತು ಕಾರ್ಗಿಲ್ ಮೂಲಕ ವರ್ಷದ ಆರು ತಿಂಗಳಲ್ಲಿ ಮಾತ್ರ ಈ ಮಾರ್ಗದಲ್ಲಿ ವಾಹನ ಸಂಚಾರ ಸಾಧ್ಯವಿದೆ.
ಅಭಿವೃದ್ಧಿಗೆ ವೇಗ: ಎನ್ಎಚ್-1ರಲ್ಲಿ ಶ್ರೀನಗರ ಕಣಿವೆ ಮತ್ತು ಲೇಹ್ (ಲಡಾಖ್ ಪ್ರಸ್ಥಭೂಮಿ) ನಡುವೆ ಸರ್ವಋತು ಸಂಪರ್ಕ ಕಲ್ಪಿಸಲಿರುವ ಜೋಜಿಲಾ ಸುರಂಗ, ಜಮ್ಮು - ಕಾಶ್ಮೀರದ ಸರ್ವಾಂಗೀಣ ಆರ್ಥಿಕ ಅಭಿವೃದ್ಧಿ ಹಾಗೂ ಸಾಮಾಜಿಕ-ಸಾಂಸ್ಕೃತಿಕ ಏಕೀಕರಣಕ್ಕೂ ನೆರವಾಗಲಿದೆ.
ಸಮಯ ಉಳಿತಾಯ: ಸುರಂಗ ಮಾರ್ಗ ಪೂರ್ಣಗೊಂಡು ಸಂಚಾರಕ್ಕೆ ತೆರವಾದಾಗ ಈ ಮಾರ್ಗದಲ್ಲಿ ಸಂಚಾರದ ಅವಧಿ ಮೂರು ಗಂಟೆಯಿಂದ ಕೇವಲ 15 ನಿಮಿಷಕ್ಕೆ ಇಳಿಯಲಿದೆ.
ಆಧುನಿಕ ವಿಸ್ಮಯ ಎಂದ ಪ್ರಧಾನಿ: 6,800 ಕೋಟಿ ರೂಪಾಯಿ ವೆಚ್ಚದ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ 2018 ಮೇನಲ್ಲಿ ಶಿಲಾನ್ಯಾಸ ನೆರವೇರಿಸಿದ್ದರು. ‘ಜೋಜಿಲಾ ಯೋಜನೆ ಒಂದು ಸುರಂಗ ಮಾತ್ರವಲ್ಲ, ಆಧುನಿಕ ಕಾಲದ ಅದ್ಭುತವಾಗಲಿದೆ’ ಎಂದಿದ್ದರು.
ಯೋಜನೆ ಮರುವಿನ್ಯಾಸ: ಯೋಜನೆ ಮರುವಿನ್ಯಾಸದಿಂದ ಬೊಕ್ಕಸಕ್ಕೆ 4000 ಕೋಟಿ ರೂಪಾಯಿ ಉಳಿತಾಯವಾಗಲಿದೆ. ಭದ್ರತೆ, ಸುರಕ್ಷತೆ, ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಂಡಿಲ್ಲ ಎಂದು ಗಡ್ಕರಿ ತಿಳಿಸಿದ್ದಾರೆ.