

| ಹರೀಶ್ ಬೇಲೂರು ಬೆಂಗಳೂರು
ರಾಜ್ಯದಲ್ಲಿ ಇದುವರೆಗೆ ಚಾಲ್ತಿಯಲ್ಲಿಲ್ಲದ 218 ವೈಯಕ್ತಿಕ ಠೇವಣಿ (ಪಿಡಿ) ಖಾತೆಗಳು ಸ್ಥಗಿತಗೊಂಡಿವೆ. ಜತೆಗೆ ನಿಷ್ಕ್ರಿಯವಾಗಿರುವ 76 ಪಿಡಿ ಖಾತೆಗಳನ್ನು ಮುಕ್ತಾಯಗೊಳಿಸಲು ಗುರುತಿಸಲಾಗಿದೆ. ಸರ್ಕಾರದ ಎಲ್ಲ ಇಲಾಖೆಗಳು ಪಿಡಿ ಖಾತೆಗಳನ್ನು ತೆರೆದಿದ್ದು, ಹಲವು ವರ್ಷದಿಂದ ಈ ಖಾತೆಗಳು ನಿಷ್ಕ್ರಿಯವಾಗಿದ್ದು, ಸ್ಥಗಿತಗೊಂಡಿರುವ ಖಾತೆಗಳಲ್ಲಿ ನೂರಾರು ಕೋಟಿ ರೂ. ಹಣವನ್ನು ಖಜಾನೆಗೆ ವರ್ಗಾಯಿಸಿಲ್ಲ. ಹಾಗಾಗಿ, ಸರ್ಕಾರದ ಗಮನಕ್ಕೆ ಬಾರದೆ ಹತ್ತಾರು ಸಾವಿರ ಕೋಟಿ ರೂ. ಹಣವೂ ಸಂಚಿತ ನಿಧಿಯಿಂದ ಹೊರಗೆ ಉಳಿದಿದೆ.
ಸರ್ಕಾರ ಹೇಳೋದೇನು?: ತುರ್ತು ಸಂದರ್ಭಗಳಲ್ಲಿ ಅನುದಾನ ಬಳಸುವ ಉದ್ದೇಶದಿಂದಾಗಿ ಸರ್ಕಾರದಿಂದ ವಿಶೇಷ ಅನುಮತಿ ಪಡೆದು ಇಲಾಖೆಯಲ್ಲಿ ಪಿಡಿ ಖಾತೆಗಳನ್ನು ತೆರೆಯಬಹುದು. ಈ ಪಿಡಿ ಖಾತೆ ವ್ಯವಹಾರ ಖಜಾನೆ ಮೂಲಕ ನಿರ್ವಹಿಸಲಾಗುತ್ತದೆ. ಒಂದು ವೇಳೆ ಪಿಡಿ ಖಾತೆಯಲ್ಲಿ ಗಣನೀಯ ಅವಧಿಗೆ ವಹಿವಾಟುಗಳು ನಡೆಯದಿದ್ದಲ್ಲಿ ಮತ್ತು ಠೇವಣಿ ಖಾತೆಯ ಅಗತ್ಯತೆ ಇಲ್ಲವೆಂದು ಕಂಡುಬಂದಲ್ಲಿ ಠೇವಣಿ ಖಾತೆ ತೆರೆದಿರುವ ಜತೆ ಸಮಾಲೋಚಿಸಿ ಮುಕ್ತಾಯಗೊಳಿಸಲಾಗುತ್ತದೆ. ಆರ್ಥಿಕ ವರ್ಷಾಂತ್ಯದಲ್ಲಿ ಎಲ್ಲ ಪಿಡಿ ಖಾತೆಗಳನ್ನು ಸ್ಥಗಿತಗೊಳಿಸಲಾಗುತ್ತದೆ. ನಂತರ, ಸದರಿ ಖಾತೆಗಳಲ್ಲಿ ಶಿಲ್ಕನ್ನು ಆರ್ಥಿಕ ಇಲಾಖೆಯಲ್ಲಿ ಪರಿಶೀಲಿಸಿ ಸಂಬಂಧ ಇಲಾಖೆಗಳ ಜತೆ ಸಮಾಲೋಚಿಸಿ ಅವಶ್ಯಕತೆ ಇದ್ದಲ್ಲಿ ಮಾತ್ರ ಇವುಗಳನ್ನು ಮುಂದುವರಿಸಲಾಗುತ್ತದೆ.
ಈ ಹಿಂದೆ ಸರ್ಕಾರದಿಂದ ಬರುವ ಹಣವನ್ನು ಪಿಡಿ ಖಾತೆಗಳಿಗೆ ಹಾಕಲಾಗುತ್ತಿತ್ತು. ಮೊದಲು ಕೆಲ ಇಲಾಖೆಗಳ ಸರ್ಕಾರಿ ಸಿಬ್ಬಂದಿಗೆ ಪಿಡಿ ಖಾತೆಗಳ ಮೂಲಕ ವೇತನ ನೀಡಲಾಗುತ್ತಿತ್ತು. ಈಗ ಎಚ್ಆರ್ಎಂಎಸ್ ಮತ್ತು ಖಜಾನೆ-2 ಸೇರಿ ಇನ್ನಿತರ ತಂತ್ರಜ್ಞಾನ ಅನುಷ್ಠಾನದ ಬಳಿಕ ಕಾರ್ಯಕ್ರಮ, ಯೋಜನೆಯ ಹಣ, ವೇತನ ಮತ್ತು ಆರ್ಟಿಜಿಎಸ್ ಅನ್ನು ನೇರವಾಗಿ ಪಾವತಿಸಲಾಗುತ್ತದೆ. | ಸಿ.ಎಸ್.ಷಡಾಕ್ಷರಿ ರಾಜ್ಯ ಸರ್ಕಾರಿ ನೌಕರ ಸಂಘ ಅಧ್ಯಕ್ಷ
ದುರ್ಬಳಕೆ ಹೆಚ್ಚು: ಆಯಾ ತಿಂಗಳಿನಲ್ಲಿ ಖಜಾನೆಗೆ ಬರುವ ಹಣವನ್ನು ಅದೇ ತಿಂಗಳಲ್ಲಿ ಸರ್ಕಾರದ ಕಾರ್ಯಕ್ರಮಗಳಿಗೆ ಬಳಸಿಕೊಳ್ಳಬೇಕು. ವಿನಿಯೋಗಿಸದಿದ್ದರೆ ವಾಪಸ್ ಹೋಗುತ್ತದೆ. ಹಾಗಾಗಿ, ಈ ಹಣವನ್ನು ಖಜಾನೆಯಿಂದ ಬಿಡಿಸಿಕೊಂಡು ಪಿಡಿ ಖಾತೆಗೆ ಹಾಕಿಕೊಳ್ಳುತ್ತಾರೆ. ಬಳಿಕ, ಅದೇ ತಿಂಗಳನಲ್ಲಿ ಖರ್ಚು ಮಾಡಿದ್ದೇವೆ ಎಂದು ನಕಲಿ ಬಿಲ್ ತಯಾರಿಸಿ ಲಕ್ಷಾಂತರ ರೂ.ಗಳನ್ನು ಲಪಾಟಯಿಸುತ್ತಿದ್ದಾರೆ.