ಪಾಲಕರನ್ನು ಹೊರಗಿಟ್ಟು ಗ್ಯಾಂಗ್​ರೇಪ್​ ಸಂತ್ರಸ್ತೆಯ ಅಂತ್ಯಕ್ರಿಯೆ: ಯುಪಿ ಪೊಲೀಸರ ನಡೆಗೆ ತೀವ್ರ ಆಕ್ರೋಶ!

UP Police
Published on

ಲಖನೌ: ಸಾಮೂಹಿಕ ಅತ್ಯಾಚಾರವೆಸಗಿದಲ್ಲದೆ, ದುಷ್ಕರ್ಮಿಗಳು ನೀಡಿದ ಕಿರುಕುಳಕ್ಕೆ ಚಿಕಿತ್ಸೆ ಫಲಿಸದೇ ಗ್ಯಾಂಗ್​ರೇಪ್​ ನಡೆದ ಎರಡು ವಾರಗಳ ಬಳಿಕ ಮೃತಪಟ್ಟ ಉತ್ತರ ಪ್ರದೇಶದ ಹತ್ರಾಸ್​​ನ ಸಂತ್ರಸ್ತೆಯ ಅಂತ್ಯಕ್ರಿಯೆಯನ್ನು ಪೊಲೀಸರೇ ಆತುರವಾಗಿ ಪಾಲಕರು ವಿರೋಧದ ನಡುವೆಯೂ ನಡುರಾತ್ರಿ ನಡೆಸಿರುವುದು ಸಾಕಷ್ಟು ಅನುಮಾನಕ್ಕೆ ಎಡೆಮಾಡಿ ಕೊಟ್ಟಿದೆ.

ಮಂಗಳವಾರ ತಡರಾತ್ರಿ 2.30ರ ಸುಮಾರಿಗೆ ಸಂತ್ರಸ್ತೆಯ ಅಂತ್ಯಕ್ರಿಯೆಯನ್ನು ಪೊಲೀಸರೇ ನೆರವೇರಿಸಿದ್ದಾರೆ. ಈ ವೇಳೆ ಸಂತ್ರಸ್ತೆಯ ಕುಟುಂಬಸ್ಥರನ್ನು ಮನೆಯಲ್ಲಿ ಕೂಡಿಹಾಕಿದ್ದರು ಎಂಬ ಆರೋಪವೂ ಕೇಳಿಬಂದಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಪೊಲೀಸರೊಂದಿಗೆ ಸಂತ್ರಸ್ತೆಯ ಕುಟುಂಬಸ್ಥರು ವಾಗ್ವಾದಕ್ಕೆ ಇಳಿದಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ಕೊನೆಯಬಾರಿಗೆ ಮೃತದೇಹವನ್ನು ಮನೆಗೆ ತೆಗೆದುಕೊಂಡು ಹೋಗುತ್ತೇವೆ ಎಂದು ಮನವಿ ಮಾಡಿಕೊಂಡರು ಬಲವಂತವಾಗಿ ಮೃತದೇಹವನ್ನು ಕೊಂಡೊಯ್ದು ಪೊಲೀಸರೇ ಅಂತ್ಯಕ್ರಿಯೆ ನೆರವೇರಿಸಿದ್ದಾರೆಂದು ಆಪಾದಿಸಿದ್ದಾರೆ.

2012ರಲ್ಲಿ ದೆಹಲಿಯಲ್ಲಿ ನಡೆದ ನಿರ್ಭಯ ಗ್ಯಾಂಗ್​ರೇಪ್​ ಮಾದರಿಯಲ್ಲೇ ಉತ್ತರ ಪ್ರದೇಶದ ಹತ್ರಾಸ್​ನಲ್ಲಿ ನಡೆದಿದ್ದು, ಸೆ. 14ರಂದು ಯುವತಿಯು ತಮ್ಮ ಜಮೀನಿನಲ್ಲಿ ತಾಯಿಯೊಂದಿಗೆ ಮೇವು ತರಲು ಹೋಗಿದ್ದಾಗ ನಾಲ್ವರು ಕಾಮುಕರು ಎಳೆದೊಯ್ದು ಅತ್ಯಾಚಾರವೆಸಗಿದ್ದಾರೆ. ಅಲ್ಲದೆ, ಆಕೆಯ ನಾಲಿಗೆಯನ್ನು ಕತ್ತರಿಸಿದ್ದಾರೆ. ಆಕೆಯ ಬೆನ್ನುಮೂಳೆ ಮತ್ತು ಕುತ್ತಿಗೆಗೆ ಹಾನಿ ಮಾಡಿದ್ದಾರೆ. ಗಂಭೀರ ಗಾಯಗಳಿಂದ ದೆಹಲಿಯ ಸಫ್ದಾರ್​ ಜಂಗ್​ ಆಸ್ಪತ್ರೆಗೆ ದಾಖಲಾಗಿದ್ದ ಸಂತ್ರಸ್ತೆ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ಮೃತಪಟ್ಟಿದ್ದಾರೆ.

ಅಮಾಯಕ ಯುವತಿಯ ಸಾವು ಇದೀಗ ದೇಶದೆಲ್ಲಡೆ ಆಕ್ರೋಶದ ಕಿಚ್ಚು ಹಬ್ಬಿಸಿದೆ. ಆರೋಪಿಗಳನ್ನು ನೇಣಿಗೇರಿಸಿ, ಯುವತಿ ಸಾವಿಗೆ ನ್ಯಾಯ ದೊರಕಿಸಿಕೊಡಿ ಎಂದು ಅನೇಕರು ಒತ್ತಾಯಿಸಿದ್ದಾರೆ. ಇತ್ತ ಆಸ್ಪತ್ರೆಯಲ್ಲಿ ಸಂತ್ರಸ್ತೆ ಮೃತಪಟ್ಟ ಬೆನ್ನಲ್ಲೇ ಕುಟುಂಬದವರಿಗೆ ಗೊತ್ತಾಗದೇ ಮೃತದೇಹವನ್ನು ತೆಗೆದುಕೊಂಡು ಹೋಗಿದ್ದಾರೆಂದು ಸಂತ್ರಸ್ತೆಯ ಸಹೋದರು ಆರೋಪಿಸಿದ್ದಾರೆ. ನಾನು ಮತ್ತು ನನ್ನ ತಂದೆ ಪ್ರತಿಭಟನೆಗೆ ಕುಳಿತಿದ್ದೆವು. ಯುಪಿ ನೋಂದಣಿಯ ಕಪ್ಪು ಬಣ್ಣದ ಸ್ಕಾರ್ಪಿಯೋ ಕಾರಿನಲ್ಲಿ ಮೃತದೇಹವನ್ನು ನಮಗೆ ಗೊತ್ತಿಲ್ಲದೆ ತೆಗೆದುಕೊಂಡು ಹೋದರೆಂದು ಸಹೋದರು ದೂರಿದ್ದಾರೆ.

ದೆಹಲಿಯಿಂದ ಸುಮಾರು 200 ಕಿ.ಮೀ. ದೂರವಿರುವ ಹತ್ರಾಸ್​ ಗ್ರಾಮಕ್ಕೆ ಮಧ್ಯರಾತ್ರಿ ಸಂತ್ರಸ್ತೆಯ ಶವವನ್ನು ಕೊಂಡೊಯ್ದು ಪೊಲೀಸರೇ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಇನ್ನು ಮಧ್ಯರಾತ್ರಿ ಅಂತ್ಯಕ್ರಿಯೆ ಮಾಡಿರುವುದು ನಮ್ಮ ಸಂಪ್ರದಾಯಕ್ಕೆ ವಿರುದ್ಧವಾದದ್ದು ಎಂದು ಗ್ರಾಮಸ್ಥರು ಮತ್ತು ಕುಟುಂಬಸ್ಥರು ಕಿಡಿಕಾರಿದ್ದು, ಮೃತದೇಹ ಹಸ್ತಾಂತರಿಸಿ ಬೆಳಗ್ಗೆ ಶವಸಂಸ್ಕಾರ ಮಾಡಿಕೊಳ್ಳುತ್ತೇವೆಂದು ಮನವಿ ಮಾಡಿದರು ಪೊಲೀಸರು ಒಪ್ಪಲಿಲ್ಲ ಎಂದು ಸಂತ್ರಸ್ತೆಯ ತಂದೆ ಅಸಮಾಧಾನ ಹೊರಹಾಕಿದ್ದಾರೆ.

ವರದಿಗಾರರನ್ನು ದೂರವಿರಿಸಲು ಶವಸಂಸ್ಕಾರದ ಜಾಗದಲ್ಲಿ ಪೊಲೀಸರೇ ಮಾನವ ಸರಪಳಿಯನ್ನು ನಿರ್ಮಿಸಿಕೊಂಡಿದ್ದರು ಎಂದು ಸ್ಥಳೀಯರು ದೂರಿದ್ದು, ಕೇವಲ ಪೊಲೀಸರು ಮಾತ್ರ ಸ್ಥಳದಲ್ಲಿದ್ದರು. ಸಂತ್ರಸ್ತೆಯ ಕುಟುಂಬವೂ ಸಹ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲು ಬಿಡಲಿಲ್ಲ. ಮೃತದೇಹವನ್ನು ಮನೆಗೆ ತರಬೇಕೆಂದು ಜಿಲ್ಲಾಧಿಕಾರಿಗೂ ಸಹ ಮನವಿ ಮಾಡಲಾಗಿತ್ತು. ಆದರೆ, ಇದ್ಯಾವುದಕ್ಕೂ ಪೊಲೀಸರು ಮಣೆ ಹಾಕದೇ ಶವಸಂಸ್ಕಾರ ನಡೆಸಿದ್ದಾರೆಂದರು.

ಇನ್ನು 20 ವರ್ಷದ ಯುವತಿ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಎಸಗಿದವರು ಮೇಲ್ಜಾತಿಗೆ ಸೇರಿದವರಾಗಿದ್ದು, ಸಂತ್ರಸ್ತೆ ಪರಿಶಿಷ್ಟ ಜಾತಿಗೆ ಸೇರಿದವಳಾಗಿದ್ದಳು. ಸದ್ಯ ನಾಲ್ವರು ಆರೋಪಿಗಳು ಜೈಲಿನಲ್ಲಿದ್ದು, ಅತ್ಯಾಚಾರದ ಜತೆಯಲ್ಲಿ ಕೊಲೆ ಪ್ರಕರಣವನ್ನು ದಾಖಲಿಸಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net