ಇಂದಿನ ಸ್ಥಿತಿಯಲ್ಲಿ ಮಧ್ಯಮ ಮಾರ್ಗವೇ ಲೇಸು: ನಾಗಾಭರಣ ಅನಿಸಿಕೆ

k sangha
ಶಿವಮೊಗ್ಗ ಕರ್ನಾಟಕ ಸಂಘದ ವಾರ್ಷಿಕೋತ್ಸವದಲ್ಲಿ ಟಿ.ಎಸ್.ನಾಗಾಭರಣ ಮಾತನಾಡಿದರು. ಪ್ರೊ.ಎಚ್.ಆರ್.ಶಂಕರನಾರಾಯಣ ಶಾಸ್ತ್ರಿ, ವಿನಯ್ ಇದ್ದರು.
Published on

ಶಿವಮೊಗ್ಗ: ಇಂದು ಎಡ ಹಾಗೂ ಬಲದ ನಡುವಿನ ತಿಕ್ಕಾಟದಲ್ಲಿ ನಮಗೆ ಮಧ್ಯಮ ಮಾರ್ಗವೇ ಲೇಸು . ಎಲ್ಲರನ್ನೂ ನಮ್ಮವರು ಎಂದುಕೊಳ್ಳುವುದು ನಮ್ಮ ಸಂಸ್ಕೃತಿಯ ಮೂಲ ಸೆಲೆ. ಈ ನಮ್ಮ ಸಂಸ್ಕೃತಿಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಪಂಪನಿಂದ ಆರಂಭವಾಗಿ ಕುವೆಂಪುವರೆಗೆ ಎಲ್ಲರೂ ಹೇಳಿದ್ದು ಮನುಕುಲ ಒಂದೇ ಎಂಬುದನ್ನು. ಮಾನವತೆಯ ಮೂಲ ಸತ್ವ ನಮ್ಮ ಪರಂಪರೆಯಲ್ಲಿ ಹಿಂದಿನಿಂದಲೂ ಬಂದಿದೆ. ಎಂದು ಟಿ.ಎಸ್.ನಾಗಾಭರಣ ಬೇಸರ ವ್ಯಕ್ತಪಡಿಸಿದರು.

ಕರ್ನಾಟಕ ಸಂಘದಲ್ಲಿ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಮಾತನಾಡಿದ ಅವರು, ನಮ್ಮ ಭಾಷೆಯ ಇತಿಹಾಸವನ್ನು ನೆನೆದು ಸಂತೋಷಪಡುವುದಕ್ಕಿಂತಲೂ ವರ್ತಮಾನದ ಸಮಸ್ಯೆಗಳು ಹಾಗೂ ಕನ್ನಡದ ಅಸ್ಮಿತೆ ಉಳಿಸಿಕೊಳ್ಳುವ ಬಗ್ಗೆ ಇಂದು ಚರ್ಚೆಗಳಾಗಬೇಕು ಎಂದು ತಿಳಿಸಿದರು.

ಮಾತೃ ಭಾಷೆಗಳಿಗಿರುವ ಅವಕಾಶಗಳನ್ನು ಮೊಟಕುಗೊಳಿಸಲಾಗುತ್ತಿದೆ. ನಾನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷನಾಗಿದ್ದ ಸಂದರ್ಭದಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಕನ್ನಡ ಕಲಿಕೆ ಕಡ್ಡಾಯ ಎಂದು ಆದೇಶ ಮಾಡಿದ್ದೆ. ಅವರಿಗೆ ಭೋದನೆ ಮಾಡಲು ಪಠ್ಯವನ್ನೂ ರಚನೆ ಮಾಡಲಾಗಿತ್ತು. ಕೆಲವು ಕಾಲೇಜುಗಳು ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದವು ಎಂದರು.

ಭಾಷೆಗೆ ಸಂಬಂಧಿಸಿದಂತೆ ಯಾವುದೇ ತೀರ್ಮಾನ ತೆಗೆದುಕೊಳ್ಳುವ ಹಕ್ಕು ರಾಜ್ಯ ಸರ್ಕಾರಗಳಿಗಿಲ್ಲ. ಅದನ್ನು ಕೇಂದ್ರವೇ ಮಾಡಬೇಕೆಂದು ಹೈಕೋರ್ಟ್ ಆದೇಶ ನೀಡಿತು. ಹೀಗಾಗಿ ಭಾಷೆಯ ಬೆಳವಣಿಗೆಗೆ ಇಂದು ಕಾನೂನಾತ್ಮಕ ಪ್ರತಿಕ್ರಿಯೆಗಳು ಅಗತ್ಯ ಎಂದು ನಾಗಾಭರಣ ಅಭಿಪ್ರಾಯಪಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net