ರಾಜ್ಯದಲ್ಲಿ ಪಶು ಚಿಕಿತ್ಸೆಗೂ ಇನ್ಮುಂದೆ ಶುಲ್ಕ ಬರೆ?; ಖಾಸಗೀಕರಣದ ಹುನ್ನಾರ? ಇಲಾಖೆಯಿಂದ ಅಭಿಪ್ರಾಯ ಸಂಗ್ರಹ

Pashu
Published on

| ಕೆ.ಎನ್. ರಾಘವೇಂದ್ರ ಮಂಡ್ಯ

ಅತಿವೃಷ್ಟಿ, ಅನಾವೃಷ್ಟಿಯಿಂದ ಬೆಳೆ ನಷ್ಟ ಅನುಭವಿಸಿ ಕಂಗಾಲಾಗಿರುವ ಕೋಟ್ಯಂತರ ರೈತರಿಗೆ ಹೈನುಗಾರಿಕೆ ಜೀವನಾಧಾರವಾಗಿ ಅನ್ನಕ್ಕೆ ದಾರಿ ಮಾಡಿಕೊಟ್ಟಿದೆ. ಆದರೆ ಇದಕ್ಕೂ ಕುತ್ತು ತರುವ ಕೆಲಸಕ್ಕೆ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಮುಂದಾದಂತಿದೆ. ಮೂಕಪ್ರಾಣಿಗಳಿಗೆ ನೀಡುವ ಚಿಕಿತ್ಸೆಗೆ ಸೇವೆ ಹೆಸರಿನಲ್ಲಿ ಶುಲ್ಕ ನಿಗದಿಪಡಿಸುವ ಚಿಂತನೆ ನಡೆದಿರುವುದು ಇಂಥದ್ದೊಂದು ಆತಂಕ ಮೂಡಿಸಿದೆ. ರಾಜ್ಯದಲ್ಲಿ ಎಷ್ಟೋ ಕುಟುಂಬಗಳು ಹೈನುಗಾರಿಕೆ, ಮೇಕೆ, ಕುರಿ, ಕೋಳಿ ಸಾಕಣೆ ಮಾಡಿಕೊಂಡು ಬದುಕು ಕಟ್ಟಿಕೊಂಡಿವೆ. ಜಾನುವಾರುಗಳಿಗೆ ಈಗ ಉಚಿತವಾಗಿ ಚಿಕಿತ್ಸೆ ಕೊಡಲಾಗುತ್ತಿದೆ. ಆದರೀಗ ಶುಲ್ಕ ನಿಗದಿಪಡಿಸುವ ಬಗ್ಗೆ ಜಿಲ್ಲಾವಾರು ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ.

ಖಾಸಗೀಕರಣ ಹುನ್ನಾರ?: ಕರೊನಾದಿಂದಾಗಿ ಒಂದೂವರೆ ವರ್ಷದಿಂದ ಎಲ್ಲ ವರ್ಗದವರಂತೆ ರೈತರೂ ನಷ್ಟ ಅನುಭವಿಸಿದ್ದಾರೆ. ಈ ನಡುವೆಯೂ ಹೈನುಗಾರಿಕೆ ಅಲ್ಪಮಟ್ಟಿಗೆ ಅನುಕೂಲ ಮಾಡಿದೆ. ರಾಜ್ಯದಲ್ಲಿ ಸುಮಾರು 50 ಲಕ್ಷಕ್ಕೂ ಹೆಚ್ಚು ಜಾನುವಾರು, ಸಾಕುಪ್ರಾಣಿಗಳಿವೆ. ಸದ್ಯದ ಪರಿಸ್ಥಿತಿಯಲ್ಲಿ ಉಚಿತವಾಗಿ ನೀಡುತ್ತಿರುವ ಚಿಕಿತ್ಸೆಯೂ ಸರಿಯಾಗಿ ಸಿಗುತ್ತಿಲ್ಲ. ಕೆಲವೆಡೆ ಸಿಬ್ಬಂದಿಯಿಲ್ಲದೆ ಸಮಸ್ಯೆಯಾಗುತ್ತಿದ್ದರೆ, ಹಲವೆಡೆ ಸಕಾಲಕ್ಕೆ ಔಷಧ ಪೂರೈಕೆಯಾಗುತ್ತಿಲ್ಲ. ಪ್ರತಿ ಜಿಲ್ಲೆಗೆ ಪಶುಪಾಲನಾ ಇಲಾಖೆಗೆ ವರ್ಷಕ್ಕೆ ಅಂದಾಜು ಎರಡೂವರೆ ಕೋಟಿ ರೂ. ಅನುದಾನದ ಅವಶ್ಯಕತೆ ಇರುತ್ತದೆ. ಇದರಲ್ಲಿ ಅರ್ಧದಷ್ಟೂ ಸಿಗುತ್ತಿಲ್ಲ. ಜಾನುವಾರುಗಳನ್ನು ಸಾಕಿಕೊಂಡು ಹೇಗೋ ಜೀವನ ಮಾಡುತ್ತಿದ್ದೇವೆ. ಹೀಗಿರುವಾಗ ಸೇವೆಗೆ ಶುಲ್ಕ ನಿಗದಿ ಸರಿಯಲ್ಲ ಎನ್ನುವುದು ರೈತರ ವಾದ. ಇನ್ನು ಇದಕ್ಕೆ ಇಲಾಖೆಯಲ್ಲಿಯೇ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಇಲಾಖೆಯ ಖಾಸಗೀಕರಣಕ್ಕೆ ಹುನ್ನಾರ ನಡೆಸಿದ್ದು, ಇದು ಅದರ ಮೊದಲ ಹೆಜ್ಜೆ ಇರಬಹುದು ಎನ್ನುವ ಶಂಕೆ ಕೂಡ ವ್ಯಕ್ತವಾಗುತ್ತಿದೆ.

ಎರಡು ಬಾರಿ ಪ್ರಸ್ತಾವನೆ ತಿರಸ್ಕೃತ: ಪಶು ಚಿಕಿತ್ಸೆಗೆ ದರ ನಿಗದಿ ಮಾಡಬೇಕೆಂಬ ಸಲಹೆ ಇದೇ ಮೊದಲೇನಲ್ಲ. ಈ ಹಿಂದೆ 2 ಬಾರಿ ಪ್ರಸ್ತಾವನೆ ಸಲ್ಲಿಸಲಾಗಿತ್ತಾದರೂ ತೀವ್ರ ವಿರೋಧದ ಕಾರಣಕ್ಕೆ ಹಿಂಪಡೆಯಲಾಗಿತ್ತು. ಇದೀಗ ಮತ್ತೆ ಆ ಕಾರ್ಯಕ್ಕೆ ಕೈ ಹಾಕ ಲಾಗಿದೆ. ಇಲಾಖೆ ಕಾರ್ಯದರ್ಶಿ ಪಿ.ಮಣಿವಣ್ಣನ್ ನೇತೃತ್ವದಲ್ಲಿ ಇತ್ತೀಚೆಗೆ ಪಶುವೈದ್ಯಕೀಯ ಸಂಘದ ಪದಾಧಿಕಾರಿಗಳೊಂದಿಗೆ ಆಯೋಜಿಸಿದ್ದ ಸಭೆಯಲ್ಲಿ ಈ ಕುರಿತು ಚರ್ಚೆ ನಡೆದಿದೆ. ಪಶು ವೈದ್ಯಕೀಯ ಸಂಸ್ಥೆಗಳಿಗೆ ಚಿಕಿತ್ಸೆಗೆ ಬರುವ ಪ್ರಾಣಿಗಳಿಗೆ ಕನಿಷ್ಠ ಚಿಕಿತ್ಸಾ ಶುಲ್ಕ ನಿಗದಿಪಡಿಸಬಹುದು. ಇದರಿಂದ ಸರ್ಕಾರಕ್ಕೆ ಆದಾಯ ನಿರೀಕ್ಷಿಸಬಹುದಾಗಿದೆ ಎಂದು ರ್ಚಚಿಸಲಾಗಿದೆ. ಅಂತೆಯೇ ವಿವಿಧ ಸೇವೆಗಳಿಗೆ ದರ ನಿಗದಿಪಡಿಸಿ ಮತ್ತು ತಮ್ಮ ಅಭಿಪ್ರಾಯದ ವರದಿಯನ್ನು ತಕ್ಷಣ ನೀಡಬೇಕೆಂದು ರಾಜ್ಯದ 30 ಜಿಲ್ಲೆಗಳ ಉಪ ನಿರ್ದೇಶಕರಿಗೆ ಆ.19ರಂದು ಸೂಚನೆ ನೀಡಲಾಗಿದೆ.

ಪಶುಭಾಗ್ಯ ಯೋಜನೆ ಸ್ಥಗಿತ: ರೈತರಿಗೆ ವರದಾನವಾಗಿದ್ದ ಪಶುಭಾಗ್ಯ ಯೋಜನೆ ಕೆಲ ವರ್ಷಗಳಿಂದ ಸ್ಥಗಿತಗೊಂಡಿದೆ. ಈ ಯೋಜನೆಯಡಿ ಪ್ರತಿವರ್ಷ ಸಣ್ಣ, ಅತಿಸಣ್ಣ ರೈತರಿಗೆ ಲಾಟರಿ ಮೂಲಕ ಫಲಾನುಭವಿಗಳ ಆಯ್ಕೆ ಮಾಡಲಾಗುತ್ತಿತ್ತು. ಇಂತಹ ಯೋಜನೆಯನ್ನು ಮರುಜಾರಿ ಗೊಳಿಸಲು ಸರ್ಕಾರ ಗಮನಹರಿಸಬೇಕಿದೆ. ಮತ್ತೊಂದೆಡೆ ಆಕಸ್ಮಿಕವಾಗಿ ಹಸು (-ಠಿ;10 ಸಾವಿರ), ಕುರಿ (ಸಾವಿರ ರೂ.) ಮೃತಪಟ್ಟರೆ, ಅದರ ಮಾಲೀಕರಿಗೆ ಪರಿಹಾರ ನೀಡಲಾಗುತ್ತಿತ್ತು. ಇದನ್ನೂ ಹಲವು ವರ್ಷಗಳಿಂದ ನಿಲ್ಲಿಸಲಾಗಿದೆ.

ಶುಲ್ಕ ನಿಗದಿ ಬಗ್ಗೆ ಅಭಿಪ್ರಾಯ ಕಳುಹಿಸುವಂತೆ ಸೂಚನೆ ಬಂದಿದೆ. ಈ ಸಂಬಂಧ ಇಲಾಖೆಯ ವಿವಿಧ ವಿಭಾಗಗಳ ಹಿರಿಯ ಅಧಿಕಾರಿಗಳಿಂದ ಮಾಹಿತಿ ಪಡೆದು ಕಳುಹಿಸಲಾಗುವುದು.

| ಡಾ.ಮಂಜುನಾಥ್ ಉಪ ನಿರ್ದೇಶಕ, ಪಶುಪಾಲನಾ ಇಲಾಖೆ ಮಂಡ್ಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net