

ಬೆಂಗಳೂರು: ಕೆಲಸದ ನಿಮಿಕ್ತ ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿಗೆ ಬಂದಿದ್ದ ವೃದ್ಧನ ಗಮನ ಬೇರೆಡೆ ಸೆಳೆದ ಕಳ್ಳರು, 1.70 ಲಕ್ಷ ರೂ. ನಗದು ಇದ್ದ ಬ್ಯಾಗ್‌ನ್ನು ದೋಚಿದ್ದಾರೆ.
ಬಸವನಗುಡಿ ನಿವಾಸಿ ಬಿ.ಎಸ್.ವಿಶ್ವನಾಥ್ (78) ಹಣ ಕಳೆದುಕೊಂಡವರು. ಕೆಲಸ ನಿಮಿಕ್ತ ಕೆ.ಜಿ.ರಸ್ತೆ ಕಂದಾಯ ಭವನದ ಆವರಣದಲ್ಲಿ ಇರುವ ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿಗೆ ಬಂದು ಹೋಗುತ್ತಿದ್ದರು. ಇತ್ತೀಚೆಗೆ ಮಧ್ಯಾಹ್ನ 2 ಗಂಟೆಯಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಬಂದಿದ್ದಾಗ ಅಪರಿಚಿತ ವ್ಯಕ್ತಿ ವಿಶ್ವನಾಥ್‌ಗೆ ಎದುರಾಗಿದ್ದಾನೆ.
ನೀವು ಮಾಜಿ ಸೈನಿಕರ ಖೋಟಾದಲ್ಲಿ ಜಮೀನು ಮಂಜುರಾತಿಗಾಗಿ ಅರ್ಜಿ ಸಲ್ಲಿಸಿದ್ದೀರ ಎಂದು ಕೇಳಿದ್ದಾನೆ. ಹೌದ. ಎಂದು ವಿಶ್ವನಾಥ್ ಹೇಳಿ ಜಿಲ್ಲಾಧಿಕಾರಿ ಬಂದಿರಬೇಕೆಂದು ನೋಡಲು ಆ ಕಡೆಗೆ ಹೋದಾಗ ಅವರ ಹಣವಿದ್ದ ಬ್ಯಾಗ್‌ನ್ನು ಅಪರಿಚಿತ ವ್ಯಕ್ತಿ ತೆಗೆದುಕೊಂಡು ಪರಾರಿಯಾಗಿದ್ದಾನೆ.
ಆ ಕಡೆಗೆ ಹೋಗಿ ಬರುವಷ್ಟರಲ್ಲಿ ಹಣದ ಬ್ಯಾಗ್ ಕಳವಾಗಿತ್ತು. ಎಲ್ಲೆಡೆ ಹುಡುಕಾಟ ನಡೆಸಿ ಕೊನೆಗೆ ಹಲಸೂರುಗೇಟ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಈಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.