ಸೆಪ್ಟೆಂಬರ್‌ನಲ್ಲಿ ಒಪಿಎಸ್ ವರದಿ ಸಲ್ಲಿಕೆ

Snd Employees
ಸಿಂಧನೂರಿನಲ್ಲಿ ಭಾನುವಾರ ರಾಜ್ಯ ಸರ್ಕಾರಿ ನೌಕರರ ಸಂಘ ಆಯೋಜಿಸಿದ್ದ ಕೊಪ್ಪಳ, ವಿಜಯನಗರ, ಬಳ್ಳಾರಿ ಹಾಗೂ ರಾಯಚೂರು ಜಿಲ್ಲೆಗಳ ನೌಕರರ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಭಾನುವಾರ ಪದ್ಮಶ್ರೀ ಪುರಸ್ಕೃತೆ ಕೊಪ್ಪಳದ ಭೀಮವ್ವ ದೊಡ್ಡ ಬಾಳಪ್ಪ ಶಿಳ್ಳೇಕ್ಯಾತ ಅವರು ಉದ್ಘಾಟಿಸಿದರು. ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ, ಗೌರವಾಧ್ಯಕ್ಷ ಎಸ್.ಬಸವರಾಜ, ಸಂಘದ ರಾಯಚೂರು ಜಿಲ್ಲಾಧ್ಯಕ್ಷ ಕೃಷ್ಣ, ಸಂಘದ ಕೊಪ್ಪಳ ಜಿಲ್ಲಾಧ್ಯಕ್ಷ ನಾಗರಾಜ ಆರ್.ಜುಮ್ಮನ್ನವರ ಇದ್ದರು.
Published on

ಸಿಂಧನೂರು: ಹಳೇ ಪಿಂಚಣಿ ಯೋಜನೆ ಜಾರಿಗೊಳಿಸಬೇಕು ಎಂಬ ಬೇಡಿಕೆ ಇದೆ. ಈ ಕುರಿತು ಅಧ್ಯಯನಕ್ಕೆ ರಚಿಸಿರುವ ಸಮಿತಿ ಮುಂದಿನ ತಿಂಗಳು ಸರ್ಕಾರಕ್ಕೆ ವರದಿ ಸಲ್ಲಿಸಲಿದೆ. ಸರ್ಕಾರ ಕೂಡ ಸ್ಪಂದಿಸಿ ಬೇಡಿಕೆ ಈಡೇರಿಸುವ ಭರವಸೆ ಇದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಹೇಳಿದರು.

ನಗರದ ಸತ್ಯಗಾರ್ಡನ್‌ನಲ್ಲಿ ಭಾನುವಾರ ರಾಜ್ಯ ಸರ್ಕಾರಿ ನೌಕರರ ಸಂಘ ಆಯೋಜಿಸಿದ್ದ ಕೊಪ್ಪಳ, ವಿಜಯನಗರ, ಬಳ್ಳಾರಿ ಹಾಗೂ ರಾಯಚೂರು ಜಿಲ್ಲೆಗಳ ರಾಜ್ಯ ಸರ್ಕಾರಿ ನೌಕರರ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನಮ್ಮ ಸಂಘಟನೆಯಲ್ಲಿ ಬದ್ಧತೆ ಇದೆ. ನೌಕರರ ಆಶೋತ್ತರಗಳನ್ನು ಈಡೇರಿಸಲು ಬದ್ಧವಾಗಿದೆ. ಈ ಹಿಂದೆ 50 ವರ್ಷ ವಯಸ್ಸಾದವರು ಮಾತ್ರ ಸಂಘದ ರಾಜ್ಯಾಧ್ಯಕ್ಷರಾಗುತ್ತಾರೆಂಬ ನಂಬಿಕೆ ಇತ್ತು. ಅದನ್ನು ನಾವು 2019 ರಲ್ಲಿ ಬದಲಿಸಿ, ಯೋಗ್ಯತೆ, ಬದ್ಧತೆ, ಮಾಡುವ ಕೆಲಸದಲ್ಲಿ ನಿಷ್ಠೆ ಇದ್ದರೆ ಹುದ್ದೆ ಹುಡುಕಿಕೊಂಡು ಬರುತ್ತವೆ ಎನ್ನುವುದಕ್ಕೆ ನಾನೇ ಸಾಕ್ಷಿ. ಅದಕ್ಕೆ ಐದು ಬಾರಿ ಅಧ್ಯಕ್ಷನಾಗಿರುವೆ ಎಂದ ಅವರು, ವಿದ್ಯಾರ್ಥಿಗಳ ಪ್ರತಿಭೆ ಗುರುತಿಸಿ, ಅವರನ್ನು ಗೌರವಿಸುವ ಸಂಪ್ರದಾಯ ಹಾಕಿದ ಕೀರ್ತಿ ಸಂಘಟನೆಯದ್ದಾಗಿದೆ. 2019 ರವರೆಗೆ ಇಂಥ ಮಹತ್ವ ಕಾರ್ಯಕ್ರಮ ಇರಲಿಲ್ಲ. ಈವರೆಗೆ ಬರೋಬ್ಬರಿ 60 ಸಾವಿರ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗಿದೆ ಎಂದು ತಿಳಿಸಿದರು.

ಮಾನವ ಮನಸ್ಥಿತಿ ತರಬೇತುದಾರ ಮಹೇಶ ಮಸಾಲ್ ಮಾತನಾಡಿ, ಮಕ್ಕಳಿಗೆ ಯಾವುದನ್ನು ಒತ್ತಿ ಹೇಳುತ್ತೆಯೋ ಅದನ್ನೇ ಬದುಕಿನಲ್ಲಿ ರೂಢಿಸಿಕೊಳ್ಳುತ್ತಾರೆ. ಅವರಲ್ಲಿ ಒಳ್ಳೆಯ ಗುಣ, ಕಲಿಕೆಯನ್ನು ಗುರುತಿಸುವ ಕೆಲಸ ನಡೆಯಬೇಕಿದೆ ಎಂದರು.

ಸಂಘದ ರಾಜ್ಯ ಗೌರವಾಧ್ಯಕ್ಷ ಎಸ್.ಬಸವರಾಜ ಮಾತನಾಡಿ, 2019 ರಲ್ಲಿ ಸಂಘದ ಅಧ್ಯಕ್ಷರಾದ ಸಿ.ಎಸ್.ಷಡಾಕ್ಷರಿ ಅವರು ಕ್ರಿಯಾಶೀಲರಾಗಿ ಅತ್ಯುತ್ತಮ ಕಾರ್ಯಗಳನ್ನು ಮಾಡಿದ್ದಾರೆ. ಅದರಲ್ಲಿ ಪ್ರತಿಭಾ ಪುರಸ್ಕಾರವೂ ಒಂದಾಗಿದೆ. ನೌಕರರ ಶ್ರೇಯೋಭಿವೃದ್ಧಿಗೂ ಶ್ರಮಿಸಿದ್ದಾರೆ. ಅವರ ಕೆಲಸ ಎಲ್ಲರಿಗೂ ಸ್ಫೂರ್ತಿಯಾಗಿದೆ ಎಂದರು.

ಪದ್ಮಶ್ರೀ ಪುರಸ್ಕೃತೆ ಕೊಪ್ಪಳದ ಭೀಮವ್ವ ದೊಡ್ಡ ಬಾಳಪ್ಪ ಶಿಳ್ಳೇಕ್ಯಾತ ಕಾರ್ಯಕ್ರಮ ಉದ್ಘಾಟಿಸಿದರು. ಸಂಘದ ಕೊಪ್ಪಳ ಜಿಲ್ಲಾಧ್ಯಕ್ಷ ನಾಗರಾಜ ಆರ್.ಜುಮ್ಮನ್ನವರ, ಬಳ್ಳಾರಿ ಜಿಲ್ಲಾಧ್ಯಕ್ಷ ಎಂ.ಎ.ಆಸೀಫ್, ವಿಜಯನಗರ ಜಿಲ್ಲಾಧ್ಯಕ್ಷ ಜಿ.ಮಲ್ಲಿಕಾರ್ಜುನಗೌಡ, ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಗಿರಿಗೌಡ ಎಚ್., ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಬಿ.ಬಳ್ಳಾರಿ, ಉಪಾಧ್ಯಕ್ಷರಾದ ಎನ್.ನರಸಿಂಹರಾಜು, ಆರ್.ಮೋಹನ್‌ಕುಮಾರ, ಡಾ.ಶಂಕರಗೌಡ, ರುದ್ರಪ್ಪ, ಸದಾನಂದ ಇದ್ದರು. ನಾಲ್ಕು ಜಿಲ್ಲೆಗಳ ನೌಕರರ 500 ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net