

ಬೆಂಗಳೂರು: ಆನೇಕಲ್‌ನ ಇಂಡ್ಲವಾಡಿ ಗ್ರಾಮದಲ್ಲಿ ಸೂರ್ಯನಗರ 4ನೇ ಹಂತದ ಬಡಾವಣೆ ಸಮಗ್ರ ಅಭಿವೃದ್ಧಿ ಯೋಜನೆಯಡಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ಮತ್ತು ಕ್ರೀಡಾಂಗಣ ಸಂಕೀರ್ಣ ನಿರ್ಮಾಣ ಮಾಡಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.
ಕರ್ನಾಟಕ ಗೃಹ ಮಂಡಳಿಯಿಂದ ಇಂಡ್ಲವಾಡಿ ಗ್ರಾಮದಲ್ಲಿ 75 ಎಕರೆ ಜಮೀನಿನಲ್ಲಿ 2,350 ಕೋಟಿ ರೂ. ಅಂದಾಜು ಮೊತ್ತದಲ್ಲಿ ಸ್ಟೇಡಿಯಂ ಮತ್ತು ಕ್ರೀಡಾ ಸಂಕೀರ್ಣ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಇದಕ್ಕೆ ತಾತ್ವಿಕ ಅನುಮೋದನೆ ನೀಡಿರುವ ಸಚಿವ ಸಂಪುಟ ಸಭೆ ವಿಸ್ತೃತವಾದ ಯೋಜನಾ ವರದಿ ಸಲ್ಲಿಸುವಂತೆ ಸೂಚಿಸಿದೆ. ನಂತರ ಮತ್ತೊಮ್ಮೆ ಸಚಿವ ಸಂಪುಟ ಸಭೆ ಮುಂದೆ ಮಂಡಿಸಲು ತೀರ್ಮಾನಕ್ಕೆ ಬದಲಾಗಿದೆ ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ್ ತಿಳಿಸಿದ್ದಾರೆ.
ಚಿನ್ನಸ್ವಾಮಿ ಕ್ರೀಡಾಂಗಣ ಹಳೆಯದಾಗಿದ್ದು, ಕೇವಲ 38 ಸಾವಿರ ಆಸನಗಳನ್ನು ಹೊಂದಿದೆ. ಬೆಂಗಳೂರಿಗಿಂತ ಚಿಕ್ಕದಾಗಿರುವ ನಗರಗಳಲ್ಲಿ ದೊಡ್ದ ಕ್ರೀಡಾಂಗಣಗಳನ್ನು ಹೊಂದಿವೆ. ಹೀಗಾಗಿ ಎಲ್ಲ ಆಧುನಿಕ ಸೌಲಭ್ಯಗಳನ್ನು ಹೊಂದಿರುವ ಮತ್ತು ಇಂದಿನ ಕ್ರೀಡಾ ಅಗತ್ಯಗಳನ್ನು ಪೂರೈಸುವ ಕ್ರೀಡಾಂಗಣವು ಬೆಂಗಳೂರಿಗೆ ಅಗತ್ಯವಿದೆ ಎಂದು ಗೃಹ ಮಂಡಳಿ ತಿಳಿಸಿತ್ತು. ಹೊಸ ಸ್ಟೇಡಿಯಂನಲ್ಲಿ 80 ಸಾವಿರ ಜನರಿಗೆ ಆಸನ ವ್ಯವಸ್ಥೆ ಇರಲಿದ್ದು, ಸಂಗೀತ ಕಚೇರಿಗಳು, ಸಾರ್ವಜನಿಕ ಕೂಟಗಳಂತಹ ಕ್ರೀಡೆ ಹೊರತಾದ ಕಾರ್ಯಕ್ರಮಗಳಿಗೂ ಬಳಸಿಕೊಳ್ಳಲು ಅನುಕೂಲವಾಗುವಂತೆ ಹಲ್ಲುಹಾಸು ರಕ್ಷಣೆಗೆ ಸೌಲಭ್ಯ ಕಲ್ಪಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ಸಾರ್ವಜನಿಕ ಪ್ರವೇಶ, ನಿರ್ಗಮನ ನಿರ್ವಹಣೆ ತುತು ಸ್ಥಳಾಂತರಿಸುವ ಕ್ರಮಗಳು, ಸಂಚಾರ ನಿಯಂತ್ರಣ ಮತ್ತು ಪ್ರಮುಖ ಕಾರ್ಯಕ್ರಮಗಳ ಸಮಯದಲ್ಲಿ ಸಾರ್ವಜನಿಕರ ಸುರಕ್ಷತೆಯನ್ನು ಮತ್ತು ಸಮಗ್ರ ಜನಸಂದಣೆ ನಿಯಂತ್ರಣ ವ್ಯವಸ್ಥೆ ಯೋಜನೆಯಲ್ಲಿದೆ ಎಂದು ಕೆಎಚ್‌ಬಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು.