

ಕಚೇರಿಗೆ ಹೋಗುವುದನ್ನು ಹೊರತುಪಡಿಸಿ, ನಗರದಲ್ಲಿ ಎಲ್ಲೇ ಓಡಾಡುವುದಿದ್ದರೂ 2 ಕಿ.ಮೀ. ವ್ಯಾಪ್ತಿಯಲ್ಲೇ ಓಡಾಡುವುದು ಕಡ್ಡಾಯವಾಗಿದೆ. ಅಗತ್ಯ ಕೆಲಸಕಾರ್ಯಗಳಿಗೆ ಹೊರತುಪಡಿಸಿ ಅನಗತ್ಯವಾಗಿ ತಿರುಗಾಡುವುದು ಕಂಡುಬಂದರೆ ಕಾನೂನು ಪ್ರಕಾರ ಶಿಕ್ಷಿಸಲಾಗುತ್ತದೆ. ಹೊರಗೆ ತಿರುಗುವಾಗ ಮಾಸ್ಕ್ ಧರಿಸಿರುವುದು ಕಡ್ಡಾಯವಾಗಿದೆ.
ಕೋವಿಡ್-19 ರಾಜಧಾನಿ ಎನಿಸಿಕೊಂಡಿರುವ ಭಾರತದ ವಾಣಿಜ್ಯ ನಗರಿ ಮುಂಬೈನಲ್ಲಿ ಜಾರಿಗೆ ಬಂದಿರುವ ಹೊಸ ನಿಯಮಗಳು. ಏನೇ ಓಡಾಡುವುದಿದ್ದರೂ, ಅಗತ್ಯವಸ್ತುಗಳನ್ನು ಕೊಳ್ಳುವುದಿದ್ದರೂ, ಸಲೂನ್, ಹೇರ್ಕಟ್ಟಿಂಗ್ ಶಾಪ್ಗೆ ಹೋಗುವುದಿದ್ದರೂ ತಮ್ಮ ಮನೆಯ ಎರಡು ಕಿ.ಮೀ. ವ್ಯಾಪ್ತಿಯಲ್ಲೇ ಸಂಚರಿಸುವುದು ಕಡ್ಡಾಯವಾಗಿದೆ. ಆದರೆ ಕಚೇರಿಗೆ ಹೋಗುವವರಿಗೆ ಮತ್ತು ತುರ್ತು ವೈದ್ಯಕೀಯ ನಿಗಾದ ಅಗತ್ಯ ಇರುವವರಿಗೆ ಈ ನಿಯಮ ಅನ್ವಯಿಸುವುದಿಲ್ಲ.
ಅಂದಾಜು ಮೂರು ತಿಂಗಳ ಬಳಿಕ ಮುಂಬೈನಲ್ಲಿ ಅಂಗಡಿಮುಂಗಟ್ಟುಗಳು, ಸಲೂನ್, ಹೇರ್ಕಟ್ಟಿಂಗ್ ಶಾಪ್ಗಳು ಸೇರಿ ವಿವಿಧ ವಾಣಿಜ್ಯಾತ್ಮಕ ಚಟುವಟಿಕೆಗಳಿಗೆ ಮಹಾರಾಷ್ಟ್ರ ಸರ್ಕಾರ ಅನುಮತಿ ನೀಡಿದೆ. ಈ ಹಿನ್ನೆಲೆಯಲ್ಲಿ ಅದು ಹತ್ತು ನಿಯಮಗಳನ್ನು ಪಾಲಿಸುವ ಷರತ್ತನ್ನು ವಿಧಿಸಿದೆ.
ಅನಗತ್ಯವಾಗಿ ವಾಹನಗಳಲ್ಲಿ ಸಂಚರಿಸುವುದು ಕಂಡುಬಂದರೆ, ವಾಹನಗಳನ್ನು ಜಫ್ತಿ ಮಾಡಲಾಗುವುದು. ರಾತ್ರಿ 9ರಿಂದ ಬೆಳಗ್ಗೆ 5 ಗಂಟೆಯವರೆಗೆ ರಾತ್ರಿ ಕರ್ಫ್ಯೂವನ್ನು ಕಡ್ಡಾಯವಾಗಿ ಪಾಲಿಸಬೇಕು. ದೈಹಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು ಕಡ್ಡಾಯಗೊಳಿಸಲಾಗಿದೆ. ಈ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಲಾಗಿದೆ.