ಮಧ್ಯರಾತ್ರಿ ರೈತರ ಮನೆಗಳಿಗೆ ನುಗ್ಗಿ ಮನಬಂದಂತೆ ಥಳಿಸಿದ ಪೊಲೀಸರು: ಸವಿನಿದ್ದೆಯಲ್ಲಿದ್ದವರ ಮೇಲೆ ದೌರ್ಜನ್ಯ

Bihar Police
Published on

ಪಟನಾ: ಬ್ರಿಟಿಷ್​ ಈಸ್ಟ್​ ಇಂಡಿಯಾ ಕಂಪನಿ ನಡೆಸುತ್ತಿದ್ದ ದೌರ್ಜನ್ಯವನ್ನು ನೆನಪಿಸುವಂತಹ ಘಟನೆಯೊಂದು ಬಿಹಾರದ ಬುಕ್ಸಾರ್​ ಜಿಲ್ಲೆಯಲ್ಲಿ ಬುಧವಾರ (ಜ.11) ನಡೆದಿದೆ. ಮಧ್ಯರಾತ್ರಿ ರೈತರ ಮನೆಗಳಿಗೆ ನುಗ್ಗಿದ ಡಜನ್​ ಪೊಲೀಸರು ಸವಿ ನಿದ್ದೆಯಲ್ಲಿದ್ದ ರೈತರ ಮೇಲೆ ಮನಬಂದಂತೆ ಥಳಿಸಿದ್ದಾರೆ.

ಜಿಲ್ಲೆಯ ಚೌಸಾ ಬ್ಲಾಕ್‌ನಲ್ಲಿ ಸರ್ಕಾರಿ ಸ್ವಾಮ್ಯದ ಜಲವಿದ್ಯುತ್ ಕಂಪನಿ ಸ್ವಾಧೀನಪಡಿಸಿಕೊಂಡಿರುವ ತಮ್ಮ ಭೂಮಿಗೆ ಉತ್ತಮ ದರ ನೀಡುವಂತೆ ಒತ್ತಾಯಿಸಿ ಕಳೆದ ಎರಡು ತಿಂಗಳಿಂದ ಪ್ರತಿಭಟನೆ ನಡೆಸುತ್ತಿದ್ದ ರೈತರ ಗುಂಪಿನ ಮೇಲೆ ಪೊಲೀಸರು ದಬ್ಬಾಳಿಕೆ ನಡೆಸಿದ್ದಾರೆ. ಹೀಗಂತ ಬನಾರ್‌ಪುರ ಗ್ರಾಮದ ನಿವಾಸಿಗಳು ಗಂಭೀರ ಆರೋಪ ಮಾಡಿದ್ದಾರೆ.

ರೈತರೇ ನಮ್ಮ ಮೇಲೆ ಮೊದಲು ಹಲ್ಲೆ ನಡೆಸಿದರು ಎಂದು ಪೊಲೀಸರು ಹೇಳಿಕೆ ನೀಡಿದ್ದಾರೆ. ಆದರೆ, ಅದನ್ನು ರೈತರು ತಿರಸ್ಕರಿಸಿದ್ದಾರೆ. ರೈತರು ಬಿಡುಗಡೆ ಮಾಡಿರುವ ಸಿಸಿಟಿವಿ ದೃಶ್ಯಾವಳಿಗಳಲ್ಲಿ ರೈತರ ಮೇಲೆ ದಾಳಿ ಮಾಡುವ ಮುನ್ನ ಪೊಲೀಸರ ಗುಂಪು ಮನೆಯೊಂದರ ಹೊರಗೆ ಓಡಾಡುತ್ತಿರುವ ದೃಶ್ಯ ಕಂಡುಬಂದಿದೆ.

ಮನೆಯೊಂದರ ಒಳಗೆ ದಾಳಿಗೆ ಒಳಗಾದವರು ಮೊಬೈಲ್​ನಲ್ಲಿ ರೆಕಾರ್ಡ್ ಮಾಡಿರುವ ವಿಡಿಯೋದಲ್ಲಿ ಪೊಲೀಸರು ಮಹಿಳೆಯರು ಸೇರಿದಂತೆ ಜನರನ್ನು ನಿರ್ದಯವಾಗಿ ಥಳಿಸುವುದನ್ನು ಮತ್ತು ಬಾಗಿಲುಗಳನ್ನು ಒಡೆಯುವುದನ್ನು ಕಾಣಬಹುದಾಗಿದೆ. ಎಸ್‌ಜೆವಿಎನ್ ವಿದ್ಯುತ್ ಸ್ಥಾವರ ಸಂಸ್ಥೆ ನೀಡಿದ ದೂರಿನ ಮೇರೆಗೆ ಮುಫಾಸಿಲ್ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿ ಅಮಿತ್ ಕುಮಾರ್ ನೇತೃತ್ವದಲ್ಲಿ ದಾಳಿ ನಡೆದಿದೆ ಎಂದು ರೈತರು ಆರೋಪ ಮಾಡಿದ್ದಾರೆ.

ರೈತರು ಮನೆಗೆ ಪೊಲೀಸರು ಮಧ್ಯರಾತ್ರಿ ಏಕೆ ಹೋದರು ಎಂಬ ಪ್ರಶ್ನೆಗೆ ಪೊಲೀಸರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಕಂಪನಿಯ ವಿರುದ್ಧ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದೇವೆ. ಆದರೆ, ನಮ್ಮ ಮೇಲೆ ದಾಳಿ ಮಾಡಿ ದೌರ್ಜನ್ಯ ಮೆರೆದಿದ್ದಾರೆ ಎಂದು ರೈತರು ದೂರಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net