ಗುಡುಗು, ಬಿರುಗಾಳಿ ಸಮೇತ ಸುರಿದ ಮಳೆ; ಬಿಸಿಲಿನಿಂದ ಬಸವಳಿದ ಜನತೆಗೆ ತಂಪೆರೆದ ವರುಣ

21-RNR-07
Published on

ಹಾವೇರಿ: ನಗರ ಸೇರಿ ಜಿಲ್ಲಾಧ್ಯಂತ ಭಾನುವಾರ ಸಂಜೆ ಗುಡುಗು, ಸಿಡಿಲು ಹಾಗೂ ಬಿರುಗಾಳಿ ಸಮೇತ ಮಳೆ ಸುರಿದಿದ್ದು, ಬಿಸಿಲಿನಿಂದ ಬಸವಳಿದ ಜನತೆಗೆ ವರುಣ ತಂಪೆರೆದಂತಾಗಿದೆ.
ಜಿಲ್ಲೆಯ ಹಾವೇರಿ, ಸವಣೂರ, ರಾಣೆಬೆನ್ನೂರ, ಶಿಗ್ಗಾಂವಿ ಭಾಗದಲ್ಲಿ ಬಿರುಗಾಳಿ ಸಮೇತ 15 ನಿಮಿಷ ಮಳೆ ಸುರಿದಿದೆ. ರಟ್ಟಿಹಳ್ಳಿ, ಹಾನಗಲ್ಲ, ಬ್ಯಾಡಗಿ ಭಾಗದಲ್ಲಿ ಭಾರಿ ಪ್ರಮಾಣದಲ್ಲಿ ಬಿರುಗಾಳಿ ಬೀಸಿದೆ. ಅಲ್ಲಲ್ಲಿ ಕೊಂಚ ಮಳೆ ಸುರಿದಿದೆ.
ಬಿರುಗಾಳಿಯ ರಭಸಕ್ಕೆ ಶಿಗ್ಗಾಂವಿ ತಾಲೂಕಿನ ಚಿಕ್ಕಮಲ್ಲೂರ ಗ್ರಾಮದಲ್ಲಿ ಜಗದೀಶ ದೊಡ್ಮನಿ ಎಂಬುವರ ಕೋಳಿಫಾರ್ಮ್‌ನ ಮೇಲ್ಛಾವಣಿ ತಗಡುಗಳು ಹಾರಿ ಹೋಗಿವೆ. ಆದರೆ ಫಾರ್ಮ್‌ನಲ್ಲಿ ಕೋಳಿ ಇಲ್ಲದ ಕಾರಣ ಭಾರಿ ಪ್ರಮಾಣದ ಹಾನಿ ತಪ್ಪಿದಂತಾಗಿದೆ. ಸವಣೂರ ತಾಲೂಕಿನ ಬರದೂರ ಹಾಗೂ ಚಳ್ಳಾಳ ಗ್ರಾಮದ ರಸ್ತೆಯಲ್ಲಿ ಗಿಡ ಮುರಿದು ರಸ್ತೆಗೆ ಅಡ್ಡಲಾಗಿ ಬಿದ್ದ ಪರಿಣಾಮ ಸಂಚಾರಕ್ಕೆ ತೊಂದರೆ ಉಂಟಾಯಿತು.
ರಾಣೆಬೆನ್ನೂರ ನಗರದ ಎಂ.ಜಿ. ರಸ್ತೆಯಲ್ಲಿ ಚರಂಡಿ ನೀರು ರಸ್ತೆ ಮೇಲೆ ಹರಿದು ಸಂಚಾರಕ್ಕೆ ತೀವ್ರ ತೊಂದರೆ ಉಂಟಾಯಿತು. ಇದರಿಂದಾಗಿ ಸಾರ್ವಜನಿಕರು ನಗರಸಭೆ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತ ಚರಂಡಿ ನೀರನ್ನು ದಾಟಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net