

ಅಹಮದಾಬಾದ್: ಅತಿಹೆಚ್ಚು ಕರೊನಾ ಸೋಂಕಿತರನ್ನು ಹೊಂದಿರುವ ರಾಜ್ಯಗಳ ಪೈಕಿ ಗುಜರಾತ್ ದೇಶದಲ್ಲೇ 2ನೇ ಸ್ಥಾನದಲ್ಲಿದೆ. ಈ ರಾಜ್ಯದಲ್ಲಿ ಸೋಂಕು ತಡೆಗಟ್ಟಲು ರಾಜ್ಯ ಸರ್ಕಾರ ಅಲ್ಲದೆ ಕೇಂದ್ರ ಸರ್ಕಾರ ಹಲವು ಕ್ರಮಗಳನ್ನು ಕೈಗೊಳ್ಳುತ್ತಿವೆ. ದೇಶಾದ್ಯಂತ ಜಾರಿಯಲ್ಲಿರುವಂತೆ ಮೇ 3ರವರೆಗೆ ಈ ರಾಜ್ಯದಲ್ಲೂ ಲಾಕ್ಡೌನ್ ಜಾರಿಗೊಳಿಸಲಾಗಿದ್ದರೂ, ಜನರು ಮಾತ್ರ ಬಿಡುಬೀಸಾಗಿ ಓಡಾಡಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಕಾನೂನು ಕ್ರಮ ಕೈಗೊಳ್ಳಲಾರಂಭಿಸಿದ್ದಾರೆ.
ಭಾನುವಾರದಂದು ಲಾಕ್ಡೌನ್ ನಿಯಮ ಉಲ್ಲಂಘಿಸಿ, ಅನಗತ್ಯವಾಗಿ ಸಂಚರಿಸುತ್ತಿದ್ದ 10,488 ವಾಹನಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಅಲ್ಲದೆ, ಲಾಕ್ಡೌನ್ ನಿಯಮ ಮೀರಿದ ಆರೋಪದಲ್ಲಿ 2,715 ಜನರ ವಿರುದ್ಧ ಎಫ್ಐಆರ್ ಹಾಕಿದ್ದಾರೆ.ಕ್ವಾರಂಟೈನ್ ನಿಯಮ ಉಲ್ಲಂಘಿಸಿದ್ದಕ್ಕಾಗಿ 962 ಮಂದಿ ವಿರುದ್ಧ ಹಾಗೂ ಲಾಕ್ಡೌನ್ನ ಇತರ ನಿಯಮಗಳ ಉಲ್ಲಂಘನೆಗೆ 506 ಜನರ ವಿರುದ್ಧ ಎಫ್ಐಆರ್ಗಳನ್ನು ದಾಖಲಿಸಲಾಗಿದೆ.
ಲಾಕ್ಡೌನ್ ನಿಯಮ ಉಲ್ಲಂಘಿಸಿದ್ದಕ್ಕಾಗಿ ಇದುವರೆಗೆ 5,390 ಜನರನ್ನು ಬಂಧಿಸಿರುವುದಾಗಿ ಗುಜರಾತ್ ಪೊಲೀಸ್ ಡಿಜಿಪಿ ಶಿವಾನಂದ ಝಾ ಮಾಹಿತಿ ನೀಡಿದ್ಧಾರೆ.