ಮೃತ್ಯುಕೂಪ ಅಮೆರಿಕ: ಕರೊನಾ ನಿಯಂತ್ರಣಕ್ಕೆ ಟ್ರಂಪ್ ಆಡಳಿತ ಹರಸಾಹಸ

America
Published on

ವಾಷಿಂಗ್ಟನ್: ಮಹಾಮಾರಿ ಕರೊನಾಗೆ ಅಮೆರಿಕದಲ್ಲಿ ಮೃತರ ಸಂಖ್ಯೆ 21 ಸಾವಿರ ದಾಟಿದ್ದು, 5.35 ಲಕ್ಷಕ್ಕೂ ಅಧಿಕ ಜನರು ಸೋಂಕಿಗೆ ತುತ್ತಾಗಿದ್ದಾರೆ. ಗುಣಮುಖರಾಗಿರುವ ಸಂಖ್ಯೆ 30,502 ಆಗಿದ್ದು, ರೋಗ ಸಕ್ರಿಯವಾಗಿರುವವ ಸಂಖ್ಯೆ 4.83 ಲಕ್ಷ ತಲುಪಿದೆ. ಅಮೆರಿಕದಲ್ಲಿ ದಿನಕ್ಕೆ ಸರಾಸರಿ ಎರಡು ಸಾವಿರ ಮಂದಿ ಪ್ರಾಣ ಬಿಡುತ್ತಿದ್ದಾರೆ.

ನ್ಯೂಯಾರ್ಕ್ ಮರಣದ ಕೂಪವಾಗಿ ಪರಿಣಮಿಸಿದ್ದು, ದೇಶದ ಒಟ್ಟಾರೆ ಸಾವಿನ ಸಂಖ್ಯೆಯಲ್ಲಿ ಅರ್ಧದಷ್ಟು ಪ್ರಕರಣ ಈ ನಗರದಲ್ಲೇ ವರದಿಯಾಗಿದೆ. ಅಮೆರಿಕದಲ್ಲಿರುವ ಭಾರತ ಮೂಲದವರಲ್ಲಿ 40ಕ್ಕೂ ಹೆಚ್ಚು ಜನರು ಮರಣ ಹೊಂದಿದ್ದು, 1,500ಕ್ಕೂ ಹೆಚ್ಚು ಮಂದಿಯಲ್ಲಿ ಪಾಸಿಟಿವ್ ಕಾಣಿಸಿಕೊಂಡಿದೆ. ಚೀನಾದಲ್ಲಿ ಸಾವು ಸಂಭವಿಸಿದ ಮೂರು ತಿಂಗಳ ನಂತರ ಅಮೆರಿಕದಲ್ಲಿ ಮೊದಲ ಸಾವಿನ ಪ್ರಕರಣ ವರದಿಯಾಗಿತ್ತು. ಆದರೆ ಅಮೆರಿಕ ಅಂತಾರಾಷ್ಟ್ರೀಯ ವಿಮಾನಯಾನಕ್ಕೆ ತಡೆ, ದೇಶದಲ್ಲಿ ದಿಗ್ಬಂಧನ (ಲಾಕ್​ಡೌನ್) ವಿಧಿಸುವುದನ್ನು ವಿಳಂಬ ಮಾಡಿತು. ಇದರ ಪರಿಣಾಮ ವಿಶ್ವದಲ್ಲೇ ಅತ್ಯಧಿಕ ಸಾವಿನ ದೇಶ ಎಂಬ ಕುಖ್ಯಾತಿಗೆ ವಿಶ್ವದ ದೊಡ್ಡಣ್ಣ ಒಳಗಾಗಿದೆ. ಕರೊನಾದ ಕೇಂದ್ರ ಬಿಂದು ಜನವರಿಯಲ್ಲಿ ಏಷ್ಯಾ ಆಗಿದ್ದರೆ, ಮಾರ್ಚ್​ನಲ್ಲಿ ಯುರೋಪ್ ಆಗಿತ್ತು. ಈಗ ಅಮೆರಿಕ ಖಂಡ ಕರೊನಾ ಅಗ್ನಿಕುಂಡವಾಗಿದೆ.

ಸೇನೆಯಲ್ಲಿ ಸಾವಿರಕ್ಕೂ ಹೆಚ್ಚು ಸೋಂಕಿತರು

ಅಮೆರಿಕದ ಯೋಧರಿಗೂ ಸೋಂಕು ತಗುಲಿದ್ದು, ಒಂದು ಸಾವಿರಕ್ಕೂ ಹೆಚ್ಚು ಮಂದಿಯಲ್ಲಿ ಪಾಸಿಟಿವ್ ವರದಿಯಾಗಿದೆ. ನೌಕಾದಳದಲ್ಲಿ ಅತಿಹೆಚ್ಚು ಅಂದರೆ 480 ಮಂದಿಗೆ ಸೋಂಕು ತಗುಲಿದ್ದರೆ, ಭೂಸೇನೆ ಮತ್ತು ವಾಯುಸೇನೆಯಲ್ಲಿ 550 ಮಂದಿಗೆ ಪಾಸಿಟಿವ್ ಇದೆ.

ಅರ್ಧ ಭೂಮಂಡಲ ಸ್ತಬ್ಧ

ಕರೊನಾಗೆ ಜಾಗತಿಕವಾಗಿ 1.1 ಲಕ್ಷ ಮಂದಿ ಅಸುನೀಗಿದರೆ, ಸೋಂಕಿತ ಪ್ರಕರಣಗಳು 18,05.762ಕ್ಕೆ ಏರಿಕೆ ಆಗಿದೆ. ಈ ಕಾರಣಕ್ಕೆ ಭೂಮಂಡಲದ ಅರ್ಧ ಭಾಗ ಸ್ತಬ್ಧವಾಗಿದೆ. ಆದರೂ ಕರೊನಾ ಸೋಂಕಿತ ಪ್ರಕರಣಗಳು ಗಣನೀಯವಾಗಿ ಏರಿಕೆ ಆಗುತ್ತಿದೆ.

2, 3ನೇ ಸ್ಥಾನದಲ್ಲಿ ಇಟಲಿ, ಸ್ಪೇನ್

ಇಟಲಿಯಲ್ಲಿ 19,500 ಸಾವಿರ ಮಂದಿ ಅಸುನೀಗಿದ್ದು, ಸಾವಿನ ಪ್ರಕರಣದಲ್ಲಿ 2ನೇ ಸ್ಥಾನದಲ್ಲಿದೆ. ಇಲ್ಲಿ್ಲ ಸೋಂಕಿತರ ಸಂಖ್ಯೆ 1.52 ಲಕ್ಷಕ್ಕೆ ಏರಿದೆ. ಮಾರ್ಚ್ 23ರಿಂದ ಏಪ್ರಿಲ್ ಮೊದಲ ವಾರದವರೆಗೂ ಸರಾಸರಿ ಒಂದು ಸಾವಿರ ಮಂದಿ ಸಾವನ್ನಪು್ಪತ್ತಿದ್ದ ಸ್ಪೇನ್​ನಲ್ಲಿ ಪರಿಸ್ಥಿತಿ ತುಸು ಸುಧಾರಿಸಿದೆ. ಆದರೂ ಸಾವಿನ ಪ್ರಕರಣದಲ್ಲಿ ಸ್ಪೇನ್ 3ನೇ ಸ್ಥಾನದಲ್ಲಿದ್ದು, 16,900 ಜನರು ಮರಣ ಹೊಂದಿದ್ದಾರೆ. ಸೋಂಕಿತರ ಸಂಖ್ಯೆ 1. 66 ಲಕ್ಷ ಮುಟ್ಟಿದೆ. ಆದರೆ, ಈ ಎರಡು ರಾಷ್ಟ್ರಗಳಲ್ಲಿ ಲಾಕ್​ಡೌನ್ ಸಿಡಿಲಗೊಳಿಸುವ ಮಾತುಗಳು ಕೇಳಿಬರುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಫ್ರಾನ್ಸ್​ನಲ್ಲಿ 13,832 ಮಂದಿ ಮರಣಿಸಿದ್ದು, ಸೋಂಕಿತರ ಸಂಖ್ಯೆ 1,29,654ಕ್ಕೆ ಏರಿದೆ. ಬ್ರಿಟನ್​ನಲ್ಲಿ 10,500 ಮಂದಿ ಮೃತರಾಗಿದ್ದು, ಸೋಂಕಿತ ಪ್ರಕರಣಗಳು 84,300ಕ್ಕೆ ಮುಟ್ಟಿದೆ. ಬ್ರಿಟನ್ ಯುವರಾಜ ಪ್ರಿನ್ಸ್ ಚಾರ್ಲ್ಸ್ ಗುಣಮುಖರಾಗಿದ್ದು, ಪ್ರಧಾನಿ ಬೋರಿಸ್ ಜಾನ್ಸನ್ ಐಸಿಯುನಿಂದ ಹೊರಬಂದಿದ್ದಾರೆ. ಜಾಗತಿಕ ಮರಣ ಪ್ರಕರಣದಲ್ಲಿ ಫ್ರಾನ್ಸ್ ಮತ್ತು ಬ್ರಿಟನ್ 4 ಮತ್ತು 5ನೇ ಸ್ಥಾನದಲ್ಲಿವೆ. ಒಟ್ಟಾರೆ ಯುರೋಪ್ ಖಂಡದಲ್ಲಿ ಸತ್ತವರ ಸಂಖ್ಯೆ 75 ಸಾವಿರ ದಾಟಿದೆ. ಚೀನಾದಲ್ಲಿ ಈಗ ಲಾಕ್​ಡೌನ್ ತೆರವುಗೊಂಡಿದ್ದು, ಹೊಸದಾಗಿ ಸಾವಿನ ಪ್ರಕರಣ ವರದಿಯಾಗಿಲ್ಲ. ಮೃತರ ಸಂಖ್ಯೆ 3,339 ಆಗಿದ್ದು, 82 ಸಾವಿರ ಸೋಂಕಿತರಲ್ಲಿ 77,575 ಮಂದಿ ಗುಣಮುಖರಾಗಿದ್ದಾರೆ. ಈಗ ಚೀನಾದಲ್ಲಿ ವಿದೇಶದಿಂದ ಬಂದವರಲ್ಲಿ ಸೋಂಕು ಕಾಣಿಸುತ್ತಿದ್ದು, ಭಾನುವಾರ 99 ಹೊಸ ಪ್ರಕರಣಗಳು ವರದಿಯಾಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net