ಬಣ್ಣದಲ್ಲಿ ಮಿಂದೆದ್ದ ದೇವದುರ್ಗದ ಜನತೆ

31 DVD 03
ದೇವದುರ್ಗ ತಾಲೂಕು ಗಲಗ ಗ್ರಾಮದಲ್ಲಿ ಯುಗಾದಿ ಹೋಳಿ ಹಬ್ಬದ ನಿಮಿತ್ತ ಯುವಕರು ಬಣ್ಣದಾಟವಾಡಿ ಸಂಭ್ರಮಿಸಿದರು.
Published on

ದೇವದುರ್ಗ: ಯುಗಾದಿ ನಿಮಿತ್ತ ಪಟ್ಟಣ ಸೇರಿ ತಾಲೂಕಾದ್ಯಂತ ಹೋಳಿ ಹಬ್ಬವನ್ನು ಸೋಮವಾರ ಅದ್ದೂರಿಯಾಗಿ ಆಚರಣೆ ಮಾಡಲಾಯಿತು. ಪಟ್ಟಣದ ವಿವಿಧೆಡೆ ಯುವಕರು, ಮಕ್ಕಳು, ಮಹಿಳೆಯರು ಬಣ್ಣದಾಟದಲ್ಲಿ ಮಿಂದೆದ್ದು ಸಂಭ್ರಮಿಸಿದರು.

ಪಟ್ಟಣದ ಅಂಬೇಡ್ಕರ್ ವೃತ್ತ, ಮಹಾತ್ಮಗಾಂಧೀ ವೃತ್ತ, ಬಸವೇಶ್ವರ ವೃತ್ತ, ಸಾರ್ವಜನಿಕ ಕ್ಲಬ್ ಮೈದಾನ, ಮಿನಿವಿಧಾನಸೌಧ ಏರಿಯಾ, ಜೆಪಿ ವೃತ್ತ, ಬಸ್ ನಿಲ್ದಾಣದಲ್ಲಿ ಯುವಕರು ಸಂಭ್ರಮದಿಂದ ಪರಸ್ಪರ ಬಣ್ಣ ಎರಚಿ ಸಂಭ್ರಮಿಸಿದರು. ಕೆಲ ಯುವಕರು ಬೈಕ್‌ನಲ್ಲಿ ರ‌್ಯಾಲಿ ಮಾಡಿ, ಹಲಗೆ, ಡೊಳ್ಳು ಸದ್ದಿಗೆ ನೃತ್ಯ ಮಾಡಿದರು.

ಕೆಲ ವಾರ್ಡ್‌ಗಳಲ್ಲಿ ಮಹಿಳೆಯರು ಪರಸ್ಪರ ಬಣ್ಣ ಹಾಕಿ ಹಬ್ಬ ಆಚರಿಸಿದರು.

ಗಲಗ ಗ್ರಾಮದಲ್ಲಿ ಯುವಕರು ಸಾಮೂಹಿಕವಾಗಿ ಬಣ್ಣದಾಟ ಆಡಿ ಸಂಭ್ರಮಿಸಿದರು. ಊರಿನ ತುಂಬೆಲ್ಲ ಬೈಕ್‌ನಲ್ಲಿ ಓಡಾಡಿದ ಯುವಕರು ತಮಟೆ ಸೌಂಡ್‌ಗೆ ಸ್ಟೆಫ್ಸ್ ಹಾಕಿದರು. ಜಾಲಹಳ್ಳಿ, ಗಬ್ಬೂರು, ಮಸರಕಲ್, ಸುಂಕೇಶ್ವರಹಾಳ ಸೇರಿ ವಿವಿಧೆಡೆ ಬಣ್ಣದಾಟ ಆಡಿದರು. ನಂತರ ಕೃಷ್ಣಾನದಿಗೆ ತೆರಳಿ ಸ್ನಾನ ಮಾಡಿದರು. ಹೂವನಹೆಡಗಿ, ಜೋಳದಹೆಡಗಿ, ಕೊಪ್ಪರ, ಗೂಗಲ್, ಲಿಂಗದಹಳ್ಳಿ, ಬಾಗೂರು ಸೇರಿ ವಿವಿಧೆಡೆ ಕೃಷ್ಣಾ ನದಿಯಲ್ಲಿ ಯುವಕರು ಈಜಾಡಿದರು.

ನಾರಾಯಣಪುರ ಬಲದಂಡೆ ನಾಲೆಗೆ ನೀರು ಬಂದ್‌ಆಗಿದ್ದರಿಂದ ಅಕ್ಕಪಕ್ಕದ ಗ್ರಾಮದ ಯುವಕರು ಸ್ನಾನ ಮಾಡಲು ಸಮಸ್ಯೆ ಎದುರಿಸಿದರು. ಸಮೀಪದ ಬಾವಿ, ಕೆರೆ, ಬೋರ್‌ವೆಲ್ ನೀರಲ್ಲಿ ಮಿಂದೆದ್ದರು. ಪ್ರತಿವರ್ಷ ಯುಗಾದಿ ಮಾರನೆ ದಿನದಿಂದ ಎರಡು ದಿನ ಹೋಳಿ ಆಡುವುದು ತಾಲೂಕಿನಲ್ಲಿ ವಾಡಿಕೆಯಿದ್ದು ಮಂಗಳವಾರವೂ ಬಣ್ಣದಾಟ ಆಡಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net