ಅಮೆರಿಕ ಮೂಲದ ಪಾಕ್​ ನಟನನ್ನು ಮದುವೆಯಾದ ಇಮ್ರಾನ್​ ಖಾನ್​ ಮಾಜಿ ಪತ್ನಿ: ಇಬ್ಬರಿಗೂ ಇದು 3ನೇ ವಿವಾಹ!

Reaham Khan
Published on

ಇಸ್ಲಮಾಬಾದ್​: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್​ ಖಾನ್​ ಅವರ ಮಾಜಿ ಪತ್ನಿ ರೆಹಾಮ್​ ಖಾನ್​ ಅಮೆರಿಕ ಮೂಲದ ಪಾಕ್​ ನಟ ಹಾಗೂ ವಿಡಂಬನಕಾರ ಮಿರ್ಜಾ ಬಿಲಾಲ್​ ಎಂಬುವರನ್ನು ವರಿಸಿದ್ದಾರೆ.

2014 ಮತ್ತು 15ರ ನಡುವೆ ಇಮ್ರಾನ್​ ಖಾನ್​ ಅವರನ್ನು ಮದುವೆ ಆಗಿದ್ದ 49 ವರ್ಷದ ಬ್ರಿಟಿಷ್​-ಪಾಕ್​ ಪತ್ರಕರ್ತೆ ರೆಹಾಮ್​ ಖಾನ್​, ಅಮೆರಿಕದ ಸಿಯಾಟಲ್​ನಲ್ಲಿ ನಡೆದ ಸರಳ ನಿಖಾ ಸಮಾರಂಭದಲ್ಲಿ ಬಿಲಾಲ್​ ಅವರನ್ನು ಮದುವೆ ಆಗಿರುವುದಾಗಿ ಟ್ವಿಟರ್​ನಲ್ಲಿ ಘೋಷಣೆ ಮಾಡಿದ್ದಾರೆ.

ಬಿಲಾಲ್​ ಜೊತೆಗಿನ ನಿಖಾ ಸಮಾರಂಭದ ಫೋಟೋವನ್ನು ಸಹ ರೆಹಾಮ್​ ಶೇರ್​ ಮಾಡಿಕೊಂಡಿದ್ದಾರೆ. ಮೊದಲ ಫೋಟೋದಲ್ಲಿ ಇಬ್ಬರು ಪರಸ್ಪರ ಕೈಹಿಡಿದಿದ್ದು, ಫೋಟೋ ಮೇಲೆ ಜಸ್ಟ್​ ಮ್ಯಾರೀಡ್​ ಎಂದು ಬರೆಯಲಾಗಿದೆ. ಅಲ್ಲದೆ, ಇಬ್ಬರು ಜೊತೆಯಾಗಿ ಮದುವೆ ಧಿರಿಸಿನಲ್ಲಿ ಕ್ಯಾಮೆರಾಗೆ ಪೋಸ್​ ನೀಡಿರುವ ಅನೇಕ ಫೋಟೋಗಳನ್ನು ಟ್ವಿಟರ್​ನಲ್ಲಿ ಪೋಸ್ಟ್​ ಮಾಡಿದ್ದಾರೆ.

ಬಿಲಾಲ್​ ಮತ್ತು ರೆಹಮಾ ಇಬ್ಬರಿಗೂ ಇರುವ ಮೂರನೇ ಮದುವೆಯಾಗಿದೆ. ಬಿಲಾಲ್ ಓರವ ಕಾರ್ಪೊರೇಟ್ ವೃತ್ತಿಪರ. ಅವರು ಮಾಜಿ ಮಾಡೆಲ್ ಕೂಡ ಹೌದು. "ದಿ 4 ಮೆನ್ ಶೋ", "ದಿಲ್ ಪೇ ಮಟ್ ಲೇ ಯಾರ್" ಮತ್ತು "ನ್ಯಾಷನಲ್ ಏಲಿಯನ್ ಬ್ರಾಡ್‌ಕಾಸ್ಟ್" ನ ಭಾಗವಾಗಿದ್ದಾರೆ.

ಇನ್ನು ರೆಹಮಾ, ಮನೋವೈದ್ಯ ಇಜಾಜ್ ರೆಹಮಾನ್​ ಎಂಬುವರನ್ನು ಮೊದಲು ಮದುವೆಯಾಗಿದ್ದರು. 1993ರಲ್ಲಿ ಮದುವೆಯಾಗಿ 2005ರಲ್ಲಿ ವಿಚ್ಛೇದನ ಪಡೆದುಕೊಂಡಿದ್ದಾರೆ. ಇಮ್ರಾನ್​ ಖಾನ್​ ಜೊತೆ 2014ರಲ್ಲಿ ಮದುವೆಯಾಗಿ 2015ರಲ್ಲೇ ವಿಚ್ಛೇದನ ಪಡೆದುಕೊಂಡಿದ್ದಾರೆ. ಕೇವಲ 10 ತಿಂಗಳು ಮಾತ್ರ ಸಂಸಾರ ಮಾಡಿದರು.

ರೆಹಾಮ್ "ರೆಹಮ್ ಖಾನ್" ಎಂಬ ಶೀರ್ಷಿಕೆಯಲ್ಲಿ ತನ್ನ ಆತ್ಮಚರಿತ್ರೆಯನ್ನು 2018 ರಲ್ಲಿ ಪ್ರಕಟಿಸಿದರು. ಇದರಲ್ಲಿ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ನಾಯಕ ಇಮ್ರಾನ್​ ಖಾನ್​ ಜೊತೆಗಿನ ತನ್ನ ಮದುವೆ ಮತ್ತು ಆತನ ಮಾದಕ ದ್ರವ್ಯ ಮತ್ತು ದೌರ್ಜನ್ಯದ ಬಗ್ಗೆ ಬರೆದಿದ್ದಾರೆ ಎಂದು ವರದಿಗಳು ತಿಳಿಸಿವೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net