ವಿಜಯವಾಣಿ ಸಂಪಾದಕೀಯ: ಗುಣಮಟ್ಟ ಹೆಚ್ಚಲಿ

Student
Published on

ಸರ್ಕಾರಿ ಶಾಲೆಗಳು ಎಂದಾಕ್ಷಣ ಬರೀ ಕೊರತೆ, ಸಮಸ್ಯೆಗಳ ಬಗ್ಗೆಯೇ ಹೆಚ್ಚು ಚರ್ಚೆಯಾಗುತ್ತಿತ್ತು. ಅಲ್ಲದೆ, ಪಾಲಕರು ಕೂಡ ಖಾಸಗಿ ಶಾಲೆಗಳತ್ತಲೇ ಒಲವು ಹೊಂದಿದ್ದರು. ಅದೆಷ್ಟೋ ಜನರು ಹತ್ತಿರದಲ್ಲೇ ಸರ್ಕಾರಿ ಶಾಲೆ ಇದ್ದರೂ ಸಾಲ ಮಾಡಿ ಮಕ್ಕಳನ್ನು ದೂರದ ಖಾಸಗಿ ಶಾಲೆಗೆ ಸೇರಿಸುತ್ತಿದ್ದರು. ಕರೊನಾ ಹಲವು ಕ್ಷೇತ್ರಗಳ ಮೇಲೆ ಪರಿಣಾಮ ಬೀರಿರುವಂತೆ, ಶೈಕ್ಷಣಿಕ ರಂಗವನ್ನೂ ಅಲುಗಾಡಿಸಿದೆ. ಪರಿಸ್ಥಿತಿ ತುಂಬ ಬದಲಾಗಿದೆ. ಕಳೆದ ಹದಿನೈದು ತಿಂಗಳಲ್ಲಿ ಅನೇಕ ಖಾಸಗಿ ಶಾಲೆಗಳು ಬಾಗಿಲು ಹಾಕುವ ಸ್ಥಿತಿಗೆ ಬಂದಿರುವುದು ಶೋಚನೀಯವೇ. ಲಾಕ್​ಡೌನ್​ ಮತ್ತು ನಂತರದ ಅವಧಿಯಲ್ಲಿ ನಿರ್ವಹಣೆ ಸಾಧ್ಯವಾಗದೆ ಶಾಲೆಗಳನ್ನು ಮುಚ್ಚಲು ಮುಂದಾಗಿರುವ ನಿದರ್ಶನಗಳು ಬಹುತೇಕ ಎಲ್ಲ ಜಿಲ್ಲೆಗಳಲ್ಲೂ ಕಾಣುತ್ತಿವೆ. ಮತ್ತೊಂದೆಡೆ, ಭೌತಿಕ ತರಗತಿಗಳು ನಡೆಯದಿದ್ದರೂ ಖಾಸಗಿ ಶಾಲೆಗಳು ಶುಲ್ಕ ಕಡಿಮೆ ಮಾಡಲು ಒಪು$್ಪತ್ತಿಲ್ಲ. ಇದು ಪಾಲಕರ ಸಂಕಷ್ಟವನ್ನು ಹೆಚ್ಚಿಸಿದೆ.

ಉದ್ಯೋಗನಷ್ಟ, ಸಂಬಳಕಡಿತದಂಥ ಕ್ರಮದಿಂದ ಪಾಲಕರು ದುಬಾರಿ ಶುಲ್ಕ ಭರಿಸುವಂಥ ಸ್ಥಿತಿಯಲ್ಲಿಲ್ಲ. ಹೀಗಾಗಿ ಸರ್ಕಾರಿ ಶಾಲೆಗಳಿಗೆ ಮತ್ತೆ ಬೇಡಿಕೆ ಬಂದಿದ್ದು, ಪ್ರವೇಶ ಪಡೆಯುವವರ ಸಂಖ್ಯೆ ಹೆಚ್ಚುತ್ತಿದೆ. ಈ ಸಾಲಿನ ಶಾಲಾ ದಾಖಲಾತಿ ಆರಂಭವಾದ ಹದಿನೈದು ದಿನಗಳಲ್ಲೇ ಬರೋಬ್ಬರಿ 16,52,613 ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳಿಗೆ ಪ್ರವೇಶ ಪಡೆದಿದ್ದು, ಇವರಲ್ಲಿ ಬಹುತೇಕ ಮಕ್ಕಳು ಖಾಸಗಿ ಶಾಲೆಗಳಿಂದ ವಲಸೆ ಬಂದವರಾಗಿದ್ದಾರೆ. ಸರ್ಕಾರಿ ಶಾಲೆಗಳ ಬೋಧನಾ ಗುಣಮಟ್ಟವನ್ನು ಉತ್ತಮ ಪಡಿಸಿ, ಇದೇ ಬೇಡಿಕೆ ಅಥವಾ ಸುವ್ಯವಸ್ಥೆ ಕಾಯ್ದುಕೊಳ್ಳಲು ಸರ್ಕಾರಕ್ಕೆ ಇದು ಒಳ್ಳೆಯ ಅವಕಾಶವೂ ಹೌದು.

ರಾಜ್ಯದ ಪ್ರತಿ ಅನುದಾನಿತ ಹಾಗೂ ಖಾಸಗಿ ಶಾಲೆಗಳಿಗೆ ಸರಾಸರಿ 20 ವಿದ್ಯಾರ್ಥಿಗಳು ದಾಖಲಾಗಿದ್ದರೆ, ಸರ್ಕಾರಿ ಶಾಲೆಗಳಿಗೆ ಸರಾಸರಿ 34.4 ಮಕ್ಕಳು ದಾಖಲಾಗಿರುವುದು ಗಮನಾರ್ಹ. ಕರ್ನಾಟಕದಲ್ಲಿ ಸರ್ಕಾರಿ ಶಾಲೆಗಳ ಪರಿಸ್ಥಿತಿ ಬದಲಾಗಿರುವುದೂ ವಾಸ್ತವ. ಸರ್ಕಾರದ ಸುಧಾರಣಾ ಕ್ರಮಗಳು ಒಂದಿಷ್ಟು ಲ ನೀಡಿವೆ. ಮೂಲಸೌಕರ್ಯಗಳ ವಿಸ್ತರಣೆ ಆಗಿದೆ. ಅಲ್ಲದೆ, ಸರ್ಕಾರಿ ಶಾಲೆಗಳನ್ನು ಚಿತ್ರನಟರು, ಕಲಾವಿದರು, ರಾಜಕಾರಣಿಗಳು, ಕ್ರೀಡಾಪಟುಗಳು ಸೇರಿ ವಿವಿಧ ರಂಗದ ಗಣ್ಯರು ದತ್ತು ಪಡೆದುಕೊಂಡಿರುವುದು ಮಹತ್ವದ ಬೆಳವಣಿಗೆ. ಹಲವು ವಿಶ್ವವಿದ್ಯಾಲಯಗಳು ಕೂಡ ಶಾಲೆಗಳನ್ನು ದತ್ತು ಪಡೆದುಕೊಂಡಿದ್ದು, ಅಲ್ಲಿನ ಚಿತ್ರಣ ಬದಲಿಸುವಲ್ಲಿ ಯಶಸ್ವಿಯಾಗಿವೆ. ಹಲವು ಬಹುರಾಷ್ಟ್ರೀಯ ಕಂಪನಿಗಳು, ಸ್ವಯಂಸೇವಾ ಸಂಸ್ಥೆಗಳು ಕೂಡ ಶಾಲೆಗಳ ಜೀಣೋರ್ದ್ಧಾರ ಮಾಡುವ ಜತೆಗೆ ಹೊಸ ಬಗೆಯ ಬೋಧನೆ, ಡಿಜಿಟಲ್​ ತರಗತಿಗಳಿಗೆ ಅವಕಾಶ ಮಾಡಿಕೊಟ್ಟಿದ್ದು, ಮಕ್ಕಳನ್ನು, ಪಾಲಕರನ್ನು ಸೆಳೆಯುತ್ತಿದೆ. ರಾಜಧಾನಿ ಬೆಂಗಳೂರು ಮತ್ತು ದಣ ಕನ್ನಡದ ಕೆಲ ಸರ್ಕಾರಿ ಶಾಲೆಗಳಂತೂ ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವಂತಿವೆ. ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಮಾರಗೌಡನಹಳ್ಳಿ ಸರ್ಕಾರಿ ಪ್ರೌಢಶಾಲೆಗೆ 10 ದಿನದಲ್ಲಿ 172 ಮಕ್ಕಳ ಸೇರ್ಪಡೆ ಆಗಿರುವುದು ಬದಲಾವಣೆಗೆ ಸ್ಪಷ್ಟ ನಿದರ್ಶನ. ಇದೊಂದು ಉತ್ತಮ ಬೆಳವಣಿಗೆಯೂ ಹೌದು. ಆದರೆ, ಬೋಧನೆ ಸೇರಿ ಒಟ್ಟಾರೆ ಶೈಕ್ಷಣಿಕ ವಾತಾವರಣ ಮೇಲ್ದರ್ಜೆಗೇರಿಸುವುದು ಅಷ್ಟೇ ಅಗತ್ಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net