

ಬೆಂಗಳೂರು: ಕರ್ನಾಟಕ-ಗೋವಾ ವಿಭಾಗದ ಆದಾಯ ತೆರಿಗೆ ಇಲಾಖೆ (ಐಟಿ) ಅಧಿಕಾರಿಗಳು ರಾಜ್ಯಾದ್ಯಂತ ಗುತ್ತಿಗೆದಾರರು, ಉದ್ಯಮಿಗಳು, ಚಾರ್ಟೆಡ್ ಅಕೌಂಟೆಂಟ್ಗಳ ಮನೆ, ಕಚೇರಿ ಮೇಲೆ ನಡೆಸಿರುವ ದಾಳಿ ಎರಡನೇ ದಿನವಾದ ಶುಕ್ರವಾರವೂ ಮುಂದುವರಿಯಿತು. ಪ್ರಭಾವಿ ರಾಜಕಾರಣಿ ಆಪ್ತರ ನಿವಾಸ ಸೇರಿ ಕೆಲ ಕಡೆಗಳಲ್ಲಿ ದಾಳಿ ಅಂತ್ಯಗೊಳಿಸಲಾಗಿದೆ. ಪ್ರಭಾವಿ ರಾಜಕಾರಣಿ ಆಪ್ತ ಉಮೇಶ್ ಅವರ ಭಾಷ್ಯಂ ಸರ್ಕಲ್ನಲ್ಲಿರುವ ಮನೆಯಲ್ಲಿ ದಾಳಿ ಅಂತ್ಯಗೊಳಿಸಿರುವ ಐಟಿ ಅಧಿಕಾರಿಗಳು ದಾಖಲೆಗಳೊಂದಿಗೆ ತೆರಳಿದ್ದಾರೆ. ಮನೆಯ ಇಂಚಿಚೂ ಪರಿಶೀಲನೆ ನಡೆಸಲಾಗಿದ್ದು, ಆಸ್ತಿಪತ್ರ, ಸೀಲ್ಡ್ ಕವರ್ಗಳು, ಟೆಂಡರ್ಗೆ ಸಂಬಂಧಿಸಿದ ದಾಖಲೆಗಳು, ಚಿನ್ನಾಭರಣ ಜಪ್ತಿ ಮಾಡಿದ್ದಾರೆ. ದಾಖಲೆ ಪರಿಶೀಲಿಸಿದ ಬಳಿಕ ನೋಟಿಸ್ ನೀಡಿ ವಿಚಾರಣೆಗೆ ಕರೆಸುವ ಸಾಧ್ಯತೆಗಳಿವೆ.
ಎಚ್ಡಿಕೆ ಆಪ್ತನಿಗೂ ಐಟಿ ಶಾಕ್: ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹಾಗೂ ಬಿಜೆಪಿ ಪ್ರಭಾವಿ ರಾಜಕಾರಣಿಗಳಿಗೆ ಆಪ್ತರಾಗಿದ್ದ ಅರಕಲಗೂಡು ಮೂಲದ ಕ್ಲಾಸ್ 1 ಕಾಂಟ್ರಾಕ್ಟರ್ ಸೋಮಶೇಖರ್ಗೆ ಸೇರಿದ ಬಸವೇಶ್ವರನಗರದಲ್ಲಿರುವ ಮನೆಯ ಮೇಲೆ ಐಟಿ ದಾಳಿ ನಡೆಸಿದೆ. ಕೋಟ್ಯಂತರ ರೂ. ಮೌಲ್ಯದ ಆಸ್ತಿಗೆ ಸಂಬಂಧಿಸಿದ ದಾಖಲೆಗಳು ಪತ್ತೆಯಾಗುತ್ತಿದ್ದಂತೆ ಇನ್ನಷ್ಟು ದಾಖಲೆಗಳಿಗಾಗಿ ಶುಕ್ರವಾರ ಶೋಧ ಮುಂದುವರೆಸಲಾಗಿದೆ. ರೇಡ್ ವೇಳೆ ಇವರ ಕಾರಿನಲ್ಲಿ ಕಂತೆ-ಕಂತೆ ನೋಟುಗಳು ಪತ್ತೆಯಾಗಿದ್ದು, ಇದನ್ನು ಸೀಜ್ ಮಾಡಲಾಗಿದೆ. ಉಮೇಶ್ ಜತೆ ವ್ಯವಹಾರ ನಡೆಸಿರುವುದಕ್ಕೆ ಕೆಲ ದಾಖಲೆಗಳು, ಜಲಸಂಪನ್ಮೂಲ ಇಲಾಖೆಯ ಟೆಂಡರ್ಗೆ ಸಂಬಂಧಿಸಿದ ಕಡತಗಳು ಇವರ ಮನೆಯಲ್ಲಿ ಪತ್ತೆಯಾಗಿವೆ. ಉಮೇಶ್ ಮನೆ ಮೇಲೆ ದಾಳಿ ನಡೆಸಿದಾಗ ಸೋಮಶೇಖರ್ ಸುಳಿವು ಸಿಕ್ಕಿತ್ತು ಎನ್ನಲಾಗಿದೆ.
ರಾಹುಲ್ ಎಂಟರ್ಪ್ರೖೆಸಸ್: ಪ್ರಭಾವಿ ರಾಜಕಾರಣಿ ಆಪ್ತ ಅರವಿಂದ್ ಒಡೆತನದ ಕೊಡಿಗೇಹಳ್ಳಿ ಸಹಕಾರ ನಗರದಲ್ಲಿರುವ ರಾಹುಲ್ ಎಂಟರ್ಪ್ರೖೆಸ್ ಹಲವು ಕ್ಲಾಸ್-1 ಕಂಟ್ರಾಕ್ಟರ್ಗಳಿಗೆ ಕಾಮಗಾರಿಗೆ ಬೇಕಾಗುವ ಕಬ್ಬಿಣ ಸೇರಿ ಕೋಟ್ಯಾಂತರ ರೂ. ಮೌಲ್ಯದ ಸಲಕರಣೆಗಳನ್ನು ಪೂರೈಕೆ ಮಾಡಿದೆ. ಈ ಕಂಪನಿ ಗುತ್ತಿಗೆದಾರರೊಂದಿಗೆ ವ್ಯವಹಾರ ನಡೆಸಿರುವ ಮೂಟೆ ಮೂಟೆ ದಾಖಲೆಗಳನ್ನು ಐಟಿ ಕಚೇರಿಗೆ ಕೊಂಡೊಯ್ಯಲಾಗಿದೆ. ಈ ಕಂಪನಿ ನೀರಾವರಿ ಯೋಜನೆಗಳಿಗೆ ಸಂಬಂಧಿಸಿದ ಕಾಮಗಾರಿಗೆ ಹೆಚ್ಚು ಸಲಕರಣೆ ಪೂರೈಕೆ ಮಾಡಿದೆ. ಡಿವೈ ಉಪ್ಪಾರ್ ಜತೆ ಈ ಕಂಪನಿಯು ಕೋಟ್ಯಂತರ ರೂ. ವ್ಯವಹಾರ ನಡೆಸಿರುವುದು ಗೊತ್ತಾಗಿದೆ. ಉಪ್ಪಾರ್ 500 ಕೋಟಿ ರೂ.ಗೂ ಅಧಿಕ ಮೊತ್ತದ ಕಾಮಗಾರಿ ಗುತ್ತಿಗೆಗೆ ಈ ಕಂಪನಿ ನೆರವು ಪಡೆದಿದ್ದರು ಎನ್ನಲಾಗಿದೆ.
ಸಿಎಂ ಕಚೇರಿಯಿಂದ ಔಟ್: ಐಟಿ ದಾಳಿ ಹಿನ್ನೆಲೆಯಲ್ಲಿ ಸಿಎಂ ಸಚಿವಾಲಯ ದಲ್ಲಿ ಅನ್ಯಸೇವೆ ಕೆಲಸ ಮಾಡುತ್ತಿದ್ದ ಉಮೇಶ್ ಅವರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿ ಮಾತೃ ಇಲಾಖೆಯಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳುವಂತೆ ಆದೇಶ ಹೊರ ಬಿದಿದ್ದಿದೆ. ದಾಳಿ ನಡೆದ ದಿನ ಮಧ್ಯಾಹ್ನವೇ ಸಿಎಂ ಅಧೀನ ಕಾರ್ಯದರ್ಶಿ ಈ ಜ್ಞಾಪನ ಹೊರಡಿಸಿದರು. ಉಮೇಶ್ ಬಿಎಂಟಿಸಿ ಯಲಹಂಕ ಪುಟ್ಟೇನಹಳ್ಳಿಯ 11ನೇ ಘಟಕದ ಚಾಲಕ ಕಂ ನಿರ್ವಾಹಕರಾಗಿದ್ದಾರೆ.
ಅದೃಷ್ಟವೆಂದು ಬಾಡಿಗೆ ಮನೆ ವಾಸ: ಅದೃಷ್ಟ ಖುಲಾಯಿಸುತ್ತದೆ ಎಂಬ ನಂಬಿಕೆಯಿಂದಾಗಿ ಉಮೇಶ್ ಸ್ವಂತ ಮನೆ ಹೊಂದಿದ್ದರೂ ಭಾಷ್ಯಂ ಸರ್ಕಲ್ನ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು ಎಂಬ ಮಾತು ಕೇಳಿ ಬರುತ್ತಿದೆ. ಈ ಹಿಂದೆ ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ಮತ್ತು ಅವರ ಸಹೋದರ ಪ್ರಭಾಕರ್ ಶೆಟ್ಟಿ ಇದೇ ಮನೆಯಲ್ಲಿ ವಾಸವಿದ್ದರು. ಮನೆಯ ಈಶಾನ್ಯ ಭಾಗದಲ್ಲಿ ಸ್ಟೇರ್ ಕೇಸ್ ಹೊಂದಿರುವುದು ಅದೃಷ್ಟ ತರುತ್ತದೆ ಎಂಬ ನಂಬಿಕೆ ಇವರಲ್ಲಿತ್ತು ಎನ್ನಲಾಗಿದೆ.
ದೆಹಲಿ ಅಧಿಕಾರಿಗಳಿಂದ ದಾಳಿಯ ನಿರ್ವಹಣೆ: ದೆಹಲಿಯಲ್ಲಿರುವ ಆದಾಯ ತೆರಿಗೆ ಮುಖ್ಯ ಕಚೇರಿಯ ಅಧಿಕಾರಿಗಳ ಸೂಚನೆ ಮೇರೆಗೆ ರಾಜ್ಯದಲ್ಲಿ ಕ್ಲಾಸ್-1 ಗುತ್ತಿಗೆದಾರರ ಮೇಲೆ ದೊಡ್ಡ ಮಟ್ಟದ ದಾಳಿ ನಡೆದಿದೆ. ದಾಳಿಯ ಸಂಪೂರ್ಣ ವಿವರಗಳು ದೆಹಲಿ ಐಟಿಗೆ ರವಾನೆಯಾಗುತ್ತಿದೆ. ಕೇಂದ್ರದ ಮಿನಿಸ್ಟರಿ ಆಫ್ ಫೈನಾನ್ಸ್ಗೂ ಐಟಿ ಅಧಿಕಾರಿಗಳು ದಾಳಿಯ ಮಾಹಿತಿ ನೀಡಿದ್ದಾರೆ.
ಟೆಂಡರ್ನಲ್ಲಿ ಭಾರಿ ಗೋಲ್ಮಾಲ್: ಜಲಸಂಪನ್ಮೂಲ ಇಲಾಖೆಯ ಹಲವು ಯೋಜನೆಗಳಲ್ಲಿ ಟೆಂಡರ್ ಪಡೆದಿರುವ ಗುತ್ತಿಗೆದಾರರು ನಡೆಸಿರುವ ಕಾಮಗಾರಿಗೂ ಸರ್ಕಾರದಿಂದ ಬಿಡುಗಡೆಯಾದ ಅನುದಾನಕ್ಕೂ ವ್ಯತ್ಯಾಸವಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಸರ್ಕಾರದಿಂದ ಬಿಡುಗಡೆಯಾದ ಅನುದಾನದಲ್ಲಿ ಕೋಟ್ಯಂತರ ರೂಪಾಯಿಯನ್ನು ಅಕ್ರಮವಾಗಿ ವಿವಿಧ ಉದ್ಯಮಗಳಲ್ಲಿ ಹೂಡಿಕೆ ಮಾಡಿದ್ದಾರೆ. ಕಾಮಗಾರಿಗೆ ಕಡಿಮೆ ಪ್ರಮಾಣದಲ್ಲಿ ಹಣ ವಿನಿಯೋಗಿಸಿರುವುದು ಕೂಡ ತಿಳಿದುಬಂದಿದೆ. ಆದರೆ, ಈ ಬಗ್ಗೆ ಪತ್ತೆಯಾದ ದಾಖಲೆಗಳನ್ನು ಐಟಿ ಅಧಿಕಾರಿಗಳು ಕೂಲಂಕಷವಾಗಿ ಪರಿಶೀಲಿಸುತ್ತಿದ್ದಾರೆ.
ಶಿವಮೊಗ್ಗ: ಅಧಿಕಾರಿಗಳು ಅವರ ಕೆಲಸವನ್ನು ಮಾಡುತ್ತಾರೆ. ಅವರನ್ನು ತಡೆಯಲು ನಾವು ಯಾರು? ನಮ್ಮ ಕುಟುಂಬದವರಿಗೂ ಐಟಿ ದಾಳಿಗೂ ಯಾವುದೇ ಸಂಬಂಧವಿಲ್ಲ. ನಾವು ಯಾವುದೇ ತಪ್ಪು ಮಾಡಿಲ್ಲ. ಹೀಗಾಗಿ ಯಾವುದೇ ಗೊಂದಲವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು. ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಈಗ ನಡೆದಿರುವ ಐಟಿ ದಾಳಿ ವಿಧಾನಸಭೆ ಉಪಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ನಮ್ಮ ಕುಟುಂಬದ ಮೇಲೆ ಇದು ವ್ಯತಿರಿಕ್ತ ಪರಿಣಾಮ ಉಂಟುಮಾಡುತ್ತದೆ ಎಂಬ ಆತಂಕವೂ ಇಲ್ಲ ಎಂದರು.
ಸದ್ಯದಲ್ಲೇ ಇಡಿ ಎಂಟ್ರಿ?: ದಾಳಿ ವೇಳೆ ಗುತ್ತಿಗೆದಾರರು ನೂರಾರು ಕೋಟಿ ರೂ. ಅಕ್ರಮವಾಗಿ ವರ್ಗಾವಣೆ ಮಾಡಿರುವ ಬಗ್ಗೆ ಐಟಿಗೆ ಸುಳಿವು ಸಿಕ್ಕಿದೆ. ಹೀಗಾಗಿ ಈ ಬಗ್ಗೆ ಜಾರಿ ನಿರ್ದೇಶನಾಲಯ(ಇಡಿ)ಕ್ಕೆ ಮಾಹಿತಿ ನೀಡುವ ಸಾಧ್ಯತೆಗಳಿವೆ. ಇಡಿ ಎಂಟ್ರಿಯಾದರೆ ಗುತ್ತಿಗೆದಾರರಿಗೆ ಬಂಧನದ ಭೀತಿ ಎದುರಾಗಲಿದೆ. ಇಡಿ ಅಧಿಕಾರಿಗಳೂ ಗೌಪ್ಯವಾಗಿ ಗುತ್ತಿಗೆದಾರರ ಟೆಂಡರ್ ಅಕ್ರಮದ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.