ವೇದಗಳ ಪ್ರಯೋಜನ

ವಿಜಯವಾಣಿ
Published on

ಪೂರ್ವಜರು ಗಳಿಸಿಟ್ಟ ಸಂಪತ್ತನ್ನು ನೋಡುತ್ತಾ ವಿಜೃಂಭಿಸುವುದರಲ್ಲಿ ಯಾವ ಪ್ರಯೋಜನವೂ ಇಲ್ಲ. ‘ಹೊಟ್ಟೆಯ ಮೇಲೆ ಕಟ್ಟೋರಗದ ಬುತ್ತಿ ಕಟ್ಟಿದಡೇನು ಹಸಿವು ಹೀಂಗುವದೇ? ಹೊಟ್ಟೆಯ ಮೇಲೆ ರೊಟ್ಟಿಬುತ್ತಿ ಕಟ್ಟಿಕೊಂಡಡೇನು ಹಸಿವು ಹೋಗುವದೆ?’ ಇಲ್ಲ. ಆ ಬುತ್ತಿಯನ್ನು ಬಿಚ್ಚಿ ಉಂಡಾಗಲೇ ಹಸಿವು ನೀಗುವದು. ಹಾಗೇ-ಪೂರ್ವಜರು ಗಳಿಸಿಟ್ಟ ಜ್ಞಾನ ಸಂಪತ್ತನ್ನು ಅರಿತು ಅನುಭವಿಸಿದಾಗ ಶಾಂತಿ ಸಮಾಧಾನ. ‘ಜ್ಞಾನಂ ಲಬ್ಧಾ್ವ ಪರಾಂ ಶಾಂತಿ’ ಎಂಬ ಗೀತೋಕ್ತಿಯಂತೆ, ಜ್ಞಾನದಿಂದಲೇ ಪರಮಶಾಂತಿ.

6000 ವರ್ಷಗಳ ಹಿಂದೆ ಜ್ಞಾನದ ಕಣಜವನ್ನೊಡೆದು, ಸಾರ-ಅಸಾರವನ್ನು ವಿಂಗಡಿಸಿ, ಸತ್ಯ-ಮಿಥ್ಯಗಳ, ಸಂಶೋಧಿಸಿ, ನಿತ್ಯ-ಅನಿತ್ಯಗಳನ್ನರಿದು, ಭಿನ್ನ- ಅಭಿನ್ನಗಳ ಅಂತರವನ್ನರಿತು, ಸಾವಯವ- ನಿರವಯವಗಳ ಸೂಕ್ಷ್ಮತೆ ತಿಳಿದು ಪರಿಪೂರ್ಣತೆಯ ನಿಲುವನ್ನು ಮುಟ್ಟಿ ಎತ್ತರಕ್ಕೇರಿದ ಮಹಾನ ತಪಸ್ವಿ ‘ಶ್ರೀ ವೇದವ್ಯಾಸರು’. ಅವರು ವೇದಗಳ ಅಂತರಾಳವನ್ನು ಜಾಲಾಡಿಸಿ ಒಳಪೊಕ್ಕು ನಿಜಾರ್ಥವೆಂಬ ರತ್ನಗಳನ್ನು ಹೊರತೆಗೆದು ನಾಲ್ಕು ವೇದಗಳ ಮುಖಾಂತರ ನಾಡಿಗೆ ಜ್ಞಾನಗಂಗೆಯನ್ನು ಹರಿಸಿದರು.

ಜ್ಞಾನಯಜ್ಞದ ಮಹಿಮೆಯನ್ನು ಭೂಲೋಕಕ್ಕೆ ತಿಳಿಸಿಕೊಟ್ಟವರು. ಅವಿನಾಶಿಯಾದ ಆತ್ಮತತ್ವದ ದರ್ಶನಕ್ಕಾಗಿ ಮರ್ತ್ಯಲೋಕದ ಮನುಜರನ್ನು ಊರ್ಧ್ವಮುಖ ಮಾಡಿಸಿದರು. ವೇದ ಸಾಹಿತ್ಯವು ಒಂದು ಸಂಸ್ಕೃತಿಯ, ಸಂಪ್ರದಾಯದ, ಪರಂಪರೆಯ ಪ್ರಾರಂಭದ ದಿಕ್ಕನ್ನು ತೋರಿಸದೆ, ಪರಿಣತಾವಸ್ಥೆಯನ್ನು ತೋರಿಸಿದೆ. ಮುಂದೆ ಹೆಮ್ಮರವಾಗಿ ಬಹುಶಾಖೆಯಿಂದ ಬೆಳೆಯಿತು. ಋಷಿಗಳು ತಮ್ಮ ಮಹತ್ಸಾಧನೆಯ ದಿವ್ಯಶಕ್ತಿಯಿಂದ ಸಂಪೂರ್ಣ ಸಮನ್ವತೆಯ ಮಟ್ಟಕ್ಕೇರಿಸಿದರು. ‘ವೇದವ್ಯಾಸ ಭಗವಾನ’ರು ಜನಿಸಿರದಿದ್ದರೆ ವೇದಗಳ ರಾಶಿ ಅರ್ಥಪೂರ್ಣತೆ ಪಡೆಯುತ್ತಿರಲಿಲ್ಲ.

‘ಮಂಗನಿಗೆ ಮಾಣಿಕ್ಯದ ಬೆಲೆ, ಹಂದಿಗೆ ಚಂದ್ರಾಯುಧದ ಬೆಲೆ, ಕತ್ತೆಗೆ ಕಸ್ತೂರಿಯ ಮಹತ್ವ, ಎತ್ತ ಪರಿಚಯವಾಗ ಬಹುದು?’ ಎಂಬಂತೆ ವೇದಗಳರಾಶಿ ಕಣ್ಮುಂದೆ ಇದ್ದರೂ ಪ್ರಯೋಜನವಿಲ್ಲ,ಯಾಕೆ? ವೇದ ಸ್ವರೂಪಿಯಾದ ಗುರುವಿನ ಉಪದೇಶ ಬೇಕಲ್ಲವೆ? ವೇದಗಳೇ ತಾವಾದ ವೇದವ್ಯಾಸರು ಲೋಕದ ದೃಷ್ಟಿಯಲ್ಲಿ ಪರಾಶರ ಋಷಿ-ಸತ್ಯವತಿಯರ ಪುತ್ರರಾಗಿ, ವೇದಭಗವತಿಯ ವರಪುತ್ರರಾಗಿ, ‘ವ್ಯಾಸಪೂರ್ಣಿಮಾ’ ಎಂಬ ವಿಶೇಷತೆಗೆ ಪಾತ್ರರಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net