ಶುಭ ಕಾರ್ಯಗಳಲ್ಲಿ ಮುಹೂರ್ತದ ಮಹತ್ವ

Marriage
Published on
Satsanga
ಹಿಂದೂ ಧರ್ಮವನ್ನು ಆಚರಿಸುವ ಎಲ್ಲರೂ ವಿಶೇಷವಾಗಿ ಯಾವುದೇ ಶುಭ ಕೆಲಸವನ್ನು ಮಾಡುವ ಮೊದಲು ಶುಭ ಮುಹೂರ್ತವನ್ನು ಮುಖ್ಯವೆಂದು ಪರಿಗಣಿಸುತ್ತಾರೆ. ಗಮನಾರ್ಹವಾಗಿ ಮದುವೆ, ನಾಮಕರಣ, ಕರ್ಣವೇದ, ಮುಂಡನ, ಪೂಜೆ, ಯಜ್ಞ, ಗೃಹ ಪ್ರವೇಶ, ಅಷ್ಟೇ ಏಕೆ ಮಗು ಶಾಲೆಗೆ ಹೋಗುವ ಮೊದಲ ದಿನಕ್ಕೂ ಶುಭಾಶುಭ ಮುಹೂರ್ತಗಳ ವಿಮರ್ಶೆ ಅಗತ್ಯ. ಏಕೆಂದರೆ ಶುಭ ಮುಹೂರ್ತದಲ್ಲಿ ಮಾಡುವ ಕೆಲಸಗಳಲ್ಲಿ ಶುಭ ಗ್ರಹ ಮತ್ತು ಶುಭ ನಕ್ಷತ್ರಗಳು ಸಕಾರಾತ್ಮಕ ಪರಿಣಾಮ ಬೀರುತ್ತವೆ.

ಗರ್ಭಸಂಸ್ಕಾರದಿಂದ ಹಿಡಿದು ಜನಿಸಿದ ಶಿಶುವಿನ ಮೊದಲ ನಾಮಕರಣವೆಂಬ ಮುಹೂರ್ತಕ್ಕೂ ಪಂಚಾಗ ನೋಡುವಿಕೆ ಅನಿವಾರ್ಯ. ಗ್ರಹಗಳು, ನಕ್ಷತ್ರಗಳು ಮತ್ತು ಇತರ ಆಕಾಶಕಾಯಗಳ ಸ್ಥಾನವನ್ನು ಆಧರಿಸಿ ಪಂಚಾಂಗವನ್ನು ರೂಪಿಸಲಾಗಿದೆ. ಸಂಸ್ಕೃತದ ಪದವಾದ ಪಂಚಾಂಗ- ‘ಪಂಚ’ ಅಂದರೆ ‘ಐದು’ ಮತ್ತು ’ಅಂಗ’ ಅಂದರೆ ‘ಕೈಕಾಲುಗಳು’. ಅವುಗಳೇ ತಿಥಿ, ವಾರ, ನಕ್ಷತ್ರ, ಯೋಗ ಮತ್ತು ಕರಣ. ಜನ್ಮದ ವಿವರಣೆ ನೀಡುವ ಜಾತಕದಲ್ಲಿ ಬರುವ ಈ ಎಲ್ಲ ವಿಷಯಗಳನ್ನನುಸರಿಸಿ ಶುಭ ಮುಹೂರ್ತವನ್ನು ಸೂಚಿಸುವರು.

ಒಂದು ದಿನದಲ್ಲಿ ಒಟ್ಟು 30 ಮುಹೂರ್ತಗಳು (ಸಮಯಗಳು) ಇವೆ. ಶುಭ ಮುಹೂರ್ತಗಳು ಮತ್ತು ಅಶುಭ ಮುಹೂರ್ತಗಳೂ ಇವೆ. ಅವುಗಳು ರುದ್ರ, ಅಹಿ, ಮಿತ್ರ, ಪಿತಾಳ, ವಸು, ವರಾಹ, ವಿಶ್ವದೇವ, ವಿಧಿ, ಸಪ್ತಮುಖಿ, ಪುರುಹೂತ, ವಾಹಿನಿ, ನಕ್ತಂಕರ, ವರುಣ, ಆರ್ಯಮ, ಭಗ, ಗಿರೀಶ, ಅಜಪದ, ಅಹಿರ್, ಬುಧ್ನಾ್ಯ, ಪುಷ್ಯ, ಅಶ್ವಿನಿ, ಯಮ, ಅಗ್ನಿ, ವಿಧಾತ, ಕಂದ, ಅದಿತಿ, ಜೀವ/ಅಮೃತ, ವಿಷ್ಣು, ಯುಮಿಗದ್ಯುತಿ, ಬ್ರಹ್ಮ ಮತ್ತು ಸಮುದ್ರಂ ಎಂಬುದಾಗಿ.

ಶುಭ ಮುಹೂರ್ತದ ಬಗ್ಗೆ ವಿಭಿನ್ನ ನಂಬಿಕೆಗಳ ಜನರಲ್ಲಿ ಸಾಕಷ್ಟು ಚರ್ಚೆಗಳು ಮತ್ತು ವಿಭಿನ್ನ ಅಭಿಪ್ರಾಯಗಳಿವೆ. ವ್ಯಕ್ತಿಯ ಜೀವನದಲ್ಲಿ ಈ ಶುಭ ಮುಹೂರ್ತದ ಮಹತ್ವವು ಅವನ ಆಲೋಚನೆ ಮತ್ತು ನಂಬಿಕೆಯನ್ನು ಅವಲಂಬಿಸಿರುತ್ತದೆ. ಶುಭ ಮುಹೂರ್ತವನ್ನು ನಂಬುವವರಿಗೆ ಅದು ಗ್ರಹಗಳು ಮತ್ತು ನಕ್ಷತ್ರಪುಂಜಗಳ ಪ್ರಭಾವದಿಂದ ನಾವು ಸಕಾರಾತ್ಮಕ ಶಕ್ತಿಯನ್ನು ಪಡೆಯುವ ಮಂಗಳಕರ ಸಮಯ ಎಂದು ತಿಳಿದಿದೆ. ಹೀಗಾಗಿ ಕೆಲವೊಮ್ಮೆ ಶುಭ ಕಾರ್ಯದ ಶುಭ ಮುಹೂರ್ತಕ್ಕಾಗಿ ತಿಂಗಳುಗಟ್ಟಲೆ ಕಾಯುತ್ತಾರೆ.

ಶುಭ ಸಮಯದ ಆಧಾರದ ಮೇಲೆ ಜೀವನದಲ್ಲಿ ಶುಭ ಕಾರ್ಯಗಳನ್ನು ಪ್ರಾರಂಭಿಸಲು ದಿನಾಂಕ ಮತ್ತು ಸಮಯವನ್ನು ನಿಗದಿಪಡಿಸಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಪ್ರತಿಯೊಂದು ರೀತಿಯ ಶುಭ ಕಾರ್ಯಗಳನ್ನು ಪ್ರಾರಂಭಿಸಲು ನಿಗದಿತ ಸಮಯವಿದೆ. ಗ್ರಹಗಳು ಮತ್ತು ನಕ್ಷತ್ರಪುಂಜಗಳ ಚಲನೆಗಳು ಕಾಲಕಾಲಕ್ಕೆ ಬದಲಾಗುತ್ತಿರುತ್ತವೆ, ಇದರಲ್ಲಿ ಧನಾತ್ಮಕ ಮತ್ತು ಋಣಾತ್ಮಕ ಚಲನೆಗಳು ಸೇರಿರುತ್ತವೆೆ. ಶುಭ ಕಾರ್ಯವನ್ನು ಆರಂಭಿಸುವ ಮುನ್ನ ಶುಭ ಮುಹೂರ್ತವನ್ನು ನೋಡುವುದು ಸಹಜ.

ಮುಹೂರ್ತದ ಕಾರ್ಯ: ಈ ಮುಹೂರ್ತಗಳಲ್ಲಿ ಯಾವುದೇ ದೋಷ ಕಂಡುಬಂದರೆ, ಹಲವು ಬಾರಿ ವ್ಯತಿರಿಕ್ತ ಫಲಿತಾಂಶವನ್ನು ಎದುರಿಸಬೇಕಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನಾವು ಇಂದು ಶುಭ ಮುಹೂರ್ತವನ್ನು ಕಂಡುಕೊಳ್ಳುತ್ತಿರುವಾಗ, ಜ್ಞಾನವುಳ್ಳವರಿಂದ ಅಥವಾ ಜ್ಯೋತಿಷಿಯಿಂದ ಮಾತ್ರ ಅದನ್ನು ಹೇಳಿಸಿಕೊಳ್ಳುವುದು ಮುಖ್ಯವಾಗುತ್ತದೆ. ನಮ್ಮ ಜೀವನದಲ್ಲಿ ಬರುವ ಹಲವು ಸಮಸ್ಯೆಗಳಿಗೆ ಕಂಡುಕೊಳ್ಳುವ ಪರಿಹಾರದ ಅನುಕೂಲ ಮತ್ತು ಪ್ರತಿಕೂಲ ಸಮಯವನ್ನು ತಿಳಿಸಿ, ಬಾಳುವ ಉತ್ತಮ ಸ್ಥಿತಿಯನ್ನು ಈ ಮುಹೂರ್ತವು ತಿಳಿಸುವುದು. ಈ ಶುಭ ಮುಹೂರ್ತದಲ್ಲಿ ಆಚರಿಸುವ ಕಾರ್ಯಗಳಿಂದ ಯಶಸ್ಸು ಪಡೆಯುವ ನಂಬಿಕೆಯಿದೆ. ಕಾರಣ ಅದೃಷ್ಟ ಮತ್ತು ಧನಾತ್ಮಕತೆಯನ್ನು ತರುವ ಸಂದರ್ಭಗಳು ಇವಾಗಿವೆ. ಶುಭಮುಹೂರ್ತದಲ್ಲಿ ಮಾಡಲಾಗುವ ಕಾರ್ಯಗಳು ಜೀವನದಲ್ಲಿ ಮಾನಸಿಕ ಸಂತಸವನ್ನೂ ಒದಗಿಸುತ್ತವೆ. ಮುಂದೆ ಎಲ್ಲ ಒಳ್ಳೆಯದೆ ನಡೆಯುತ್ತದೆ ಎಂಬ ವಿಶ್ವಾಸಕ್ಕೂ ಕಾರಣವಾಗುತ್ತದೆ.

ಪ್ರಾಮುಖ್ಯ: ಅನೇಕರು ಪ್ರಮುಖವಾದ ಹೊಸ ಕೆಲಸವನ್ನು ಪ್ರಾರಂಭಿಸಲು ಶುಭ ಮುಹೂರ್ತವನ್ನು ನೋಡಲು ಸಲಹೆ ನೀಡುತ್ತಾರೆ. ಏಕೆಂದರೆ ಹಾಗೆ ಮಾಡಿದಾಗ ಅದು ನಮ್ಮ ಜೀವನದಲ್ಲಿ ಯಶಸ್ಸು ಮತ್ತು ಸಮೃದ್ಧಿ, ಸಂತೋಷವನ್ನು ತರುತ್ತದೆ ಎಂದು ನಂಬುತ್ತಾರೆ. ಇಂದು ಮಾನವ ಆಧುನಿಕತೆಯತ್ತ ಸಾಕಷ್ಟು ವಾಲಿದ್ದರೂ ತನ್ನ ಮೂಲ ಬೇರಾದ ಪ್ರಾಚೀನ ಸಂಸ್ಕೃತಿಯನ್ನು ಮರೆಯಬೇಕೆಂದೇನೂ ನಿಯಮವಿಲ್ಲ. ಶುಭ-ಅಶುಭ ಮುಹೂರ್ತಗಳನ್ನು ನಂಬುವದು ಮೂಢನಂಬಿಕೆ ಎಂದು ತಿಳಿಯುವವರು ಹಲವರು. ಆದರೆ ಈ ಹಿಂದೆ ಶುಭ ಮುಹೂರ್ತದಲ್ಲಿ ಆಚರಿಸಿದ ಅನೇಕ ಪ್ರಸಿದ್ಧ ಕಾರ್ಯಗಳು ಯಶಸ್ಸು ಪಡೆದಿರುವುದು ಕೂಡ ಗಮನಾರ್ಹ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net