ಜ್ಞಾನದ ಮಹತ್ವ

Knowledge
Published on

ಬದುಕಿನಲ್ಲಿ ಜ್ಞಾನವನ್ನು ಸಂಪಾದಿಸದಿದ್ದರೆ -ಅದು ಲೌಕಿಕವೇ ಆಗಿರಲಿ ಪಾರಮಾರ್ಥಿಕವೇ ಆಗಿರಲಿ- ಮನುಷ್ಯ ಪಶುವಿಗೆ ಸಮಾನನಾಗಿರುತ್ತಾನೆ. ಲೌಕಿಕ ಜ್ಞಾನ ಎಷ್ಟು ಅವಶ್ಯವೋ ಆಧ್ಯಾತ್ಮಿಕ ಜ್ಞಾನವೂ ಅಗತ್ಯ. ಆ ಜ್ಞಾನಕ್ಕಾಗಿ ಸದ್ಗುರುವಿಗೆ ಶರಣಾಗಿ ಶಾಸ್ತ್ರಾಧ್ಯಯನ ಮಾಡಬೇಕು, ವೈದ್ಯಶಾಸ್ತ್ರ, ಸಂಗೀತಶಾಸ್ತ್ರ, ನೃತ್ಯಶಾಸ್ತ್ರ, ಪಾಕಶಾಸ್ತ್ರ ಯೋಗಶಾಸ್ತ್ರ, ದರ್ಶನ ಶಾಸ್ತ್ರ- ಇನ್ನೂ ಅನೇಕ ಶಾಸ್ತ್ರಗಳಿದ್ದು ಅಧ್ಯಯನಕ್ಕೆ ಒಂದು ಜನ್ಮ ಸಾಲುವದಿಲ್ಲ, ಅಂದಾಗ ಯಾವ ಶಾಸ್ತ್ರ ಜ್ಞಾನ ಪಡೆಯಬೇಕು? ಗುರುಗಳ ಮಾರ್ಗದರ್ಶನದಲ್ಲಿ ಎಲ್ಲ ಶಾಸ್ತ್ರಗಳ ಸಾರಾಂಶ ಗ್ರಹಿಸಬೇಕು. ಗುರು ಮುಖಾಂತರ ಬಂದ ವಿದ್ಯೆ ಭವಬಂಧನವನ್ನು ಕಳಚುವದು. ಆದ್ದರಿಂದ ಜ್ಞಾನದ ಮಹತ್ವ ಕುರಿತು ಶ್ರೀ ನಿಜಗುಣರು ತಮ್ಮ ಗ್ರಂಥದಲ್ಲಿ ಹೀಗೆ ಹೇಳುತ್ತಾರೆ.

'ದುರಿತಕಾನನವ' ಅಂದರೆ -ಪಾಪವೆಂಬ ಅರಣ್ಯವನ್ನು ಸುಟ್ಟು ಹಾಕುವ ಅಗ್ನಿಯಾಗಿಯೂ, ಪರಿಭವ ಘನಚಂಡ ಮಾರುತ- ಹುಟ್ಟುಸಾವುಗಳೆಂಬ ಮೋಡವನ್ನು ಚದುರಿಸುವ ಬಿರುಗಾಳಿ ಯಾಗಿಯು, ಅಜ್ಞಾನತಿಮಿರ ತರಣಿ- ಅಜ್ಞಾನವೆಂಬ ಕತ್ತಲೆಗೆ ಸೂರ್ಯ ನಂತೆಯೂ, ಮಾನಸಕುಲಗಿರಿ ವಜ್ರ- ಮನಸ್ಸಿನಲ್ಲಿರುವ ಅನೇಕ ಟೆನ್ಸಿನ್ ಪರ್ವತಕ್ಕೆ ವಜ್ರಾಯುಧವಾಗಿಯೂ, ಅನುಪಾತ-ಪರಿತಾಪ ಸರಸಿಜ ಹಿಮ-ದುಃಖವೆಂಬ ಕಮಲವನ್ನು ಕೊರೆಯುವ ಹಿಮದಂತೆಯೂ, ಪುಣ್ಯಕ್ಕೆ ಆಧಾರ ಸ್ಥಂಭವಾಗಿಯೂ, ಮುಕ್ತಿಯ ಜನ್ಮಭೂಮಿ- ಮೋಕ್ಷದ ಉತ್ಪತ್ತಿ ಸ್ಥಾನ (ಜ್ಞಾನದೇವತುಕೈವಲ್ಯಂ) ವಾಗಿಯೂ ಚಾರುಸಿದ್ಧಿಗಳ ಮಂದಾರ- ಅಷ್ಟಸಿದ್ಧಿಗಳಿಗೆ (ಅಣಿಮಾ, ಮಹಿಮಾ, ಲಘಿಮಾ, ಗರಿಮಾ, ಪ್ರಾಪ್ತಿ, ಪ್ರಾಕಾಮ್ಯ, ಈಶತ್ವ, ಮತ್ತು ವಶತ್ವ) ಕಲ್ಪವೃಕ್ಷ

ವಾಗಿಯೂ ಎಲ್ಲ ಕಾರಣಗಳಿಗೆ ವಾಸಸ್ಥಾನವಾಗಿಯೂ ಇರುವುದು ಜ್ಞಾನ’ ಎಂದಿದ್ದಾರೆ. ‘ಸುರ ನರರು ಜಾಣುಮೆಗಾಣದ- ಜಗದಾಗು ಹೋಹಿನೊಳಗದಿಹ ಶಂಭುಲಿಂಗದ ಅಘಣಿತವಿದೆಂಬ’ ಸೃಷ್ಟಿ ಸ್ಥಿತಿ ಲಯಗಳಿಗೆ ಕಾರಣನಾಗಿಯೂ ಅವುಗಳಿಗೆ ಒಳಗಾಗದ ಪರಮಾತ್ಮನ ಸ್ವರೂಪವೇ ತಾನೆಂದು ಹೇಳಿಸಿಕೊಳ್ಳುವ ಅಗಣಿತ ಜ್ಞಾನವು ಪರಮಾತ್ಮನ ಸ್ವರೂಪವೇ ಆಗಿದೆ. ಇಂತಹ ಜ್ಞಾನದ ಮಹತ್ವ ತಿಳಿದುಕೊಂಡರೆ ಮನುಷ್ಯನು ಭವಬಂಧನದಿಂದ ಮುಕ್ತನಾಗುತ್ತಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net