

ನವದೆಹಲಿ: ಗಲ್ವಾನ್ ಕಣಿವೆಯಿಂದ ಚೀನಾ ಹಿಂದಡಿ ಇಟ್ಟಿರುವ ಹೊರತಾಗಿಯೂ ಡ್ರ್ಯಾಗನ್ ದೇಶದ ವಿರುದ್ಧ ಪ್ರತೀಕಾರದ ಸಮರ ಮುಂದುವರಿಸಿರುವ ಕೇಂದ್ರ ಸರ್ಕಾರ, ಚೀನಾ ವಸ್ತುಗಳ ಆಮದು ದ್ವಾರವನ್ನು ಬಂದ್ ಮಾಡುವ ನಿಟ್ಟಿನಲ್ಲಿ ವಾಣಿಜ್ಯ ಸಚಿವಾಲಯದಿಂದ ಸಲಹೆ ಕೋರಿರುವುದಾಗಿ ತಿಳಿದು ಬಂದಿದೆ.
ಗಲ್ವಾನ್ ಕಣಿವೆಯಲ್ಲಿ 20 ಯೋಧರನ್ನು ಕೊಂದ ಘಟನೆಗೆ ಪ್ರತೀಕಾರವಾಗಿ ಚೀನಾ ವಸ್ತುಗಳ ಆಮದು ತಡೆಯುವ ಜತೆಯಲ್ಲೇ ಇತರ ರಾಷ್ಟ್ರಗಳೊಂದಿಗಿನ ಮುಕ್ತ ವ್ಯಾಪಾರ ಒಪ್ಪಂದ (ಎಫ್ಟಿಎ)ವನ್ನು ಮರುಪರಿಶೀಲಿಸುವ ಪ್ರಸ್ತಾವನೆ ಕೂಡ ಕೇಂದ್ರ ಸರ್ಕಾರದ ಬತ್ತಳಿಕೆಯಲ್ಲಿದೆ ಎಂದು ಪ್ರಧಾನಮಂತ್ರಿ ಕಾರ್ಯಾಲಯದ ಮೂಲಗಳು ತಿಳಿಸಿವೆ. ಎಫ್ಟಿಎ ನೆಪವಾಗಿಸಿಕೊಂಡು ವಿಶ್ವದ ಹಲವು ರಾಷ್ಟ್ರಗಳಿಂದ ಕಳಪೆ ದರ್ಜೆಯ ವಸ್ತುಗಳು ಭಾರತಕ್ಕೆ ಬರುತ್ತಿವೆ. ಹೀಗಾಗಿ ಇಂತಹ ವಸ್ತುಗಳನ್ನು ಕಠಿಣ ನಿಯಮಗಳ ಮೂಲಕ ನಿರ್ಬಂಧಿಸುವ ಹಾಗೂ ಸ್ವದೇಶಿ ವಸ್ತುಗಳ ಉತ್ಪಾದನೆಗಾಗಿ ಆತ್ಮ ನಿರ್ಭರ ಭಾರತ ಸಂಕಲ್ಪ ಜಾರಿಗೆ ತರಲು ಪಣ ತೊಟ್ಟಿದೆ.
ಆಸಿಯಾನ್ ಮೇಲೂ ಕಣ್ಣು: ಆಸಿಯಾನ್ ರಾಷ್ಟ್ರಗಳೊಂದಿಗಿನ(ದಕ್ಷಿಣ ಕೊರಿಯಾ, ಮಲೇಷ್ಯಾ, ಸಿಂಗಾಪುರ) ಆಮದು ಒಪ್ಪಂದದ ಮರು ಪರಿಶೀಲನೆಗೂ ನಿರ್ಧರಿಸಿರುವ ಕೇಂದ್ರ ಈ ರಾಷ್ಟ್ರಗಳಿಂದ ಬರುವ ಕಳಪೆ ವಸ್ತುಗಳ ಪಟ್ಟಿಯನ್ನು ಸಿದ್ಧಪಡಿಸಿ ಮಾಹಿತಿ ನೀಡುವಂತೆ ವಾಣಿಜ್ಯ ಸಚಿವಾಲಯವನ್ನು ಕೋರಿದೆ. ಚೀನಾದ ಕಂಪನಿಗಳು ಸೇರಿದಂತೆ ಹೊಸ ಸ್ಕ್ರೀನಿಂಗ್ ಪಾಲಿಸಿ ಅಡಿ 50ಕ್ಕೂ ಹೆಚ್ಚು ಹೂಡಿಕೆದಾರರ ಜತೆಗಿನ ಒಪ್ಪಂದವನ್ನೂ ಕೇಂದ್ರ ಸರ್ಕಾರ ಪುನರ್ ಪರಿಶೀಲಿಸಲು ಮುಂದಾಗಿರುವುದಾಗಿ ರಾಯಿಟರ್ಸ್ ವರದಿ ಮಾಡಿದೆ. ಏಪ್ರಿಲ್ನಲ್ಲಿ ಘೋಷಣೆಯಾದ ಹೊಸ ನಿಯಮಗಳ ಪ್ರಕಾರ ನೆರೆಯ ಯಾವುದೇ ರಾಷ್ಟ್ರಗಳು ಭಾರತದಲ್ಲಿ ಹೂಡಿಕೆ ಮಾಡಬೇಕಾದಲ್ಲಿ ಸರ್ಕಾರದ ಅನುಮತಿ ಪಡೆಯುವುದು ಕಡ್ಡಾಯ.