2024ರಿಂದ ಯುವನಿಧಿ ಯೋಜನೆ ಜಾರಿ

udyoga mela innuguration
ಶಿವಮೊಗ್ಗದ ಸೈನ್ಸ್ ಮೈದಾನದಲ್ಲಿ ಉದ್ಯೋಗ ಮೇಳವನ್ನು ಶಿಕ್ಷಣ ಸಚಿವ ಮಧು ಬಂಗಾರಪ್ಪ ಉದ್ಘಾಟಿಸಿದರು. ಎಚ್.ಸಿ.ಯೋಗೀಶ್, ಎಸ್.ಎನ್.ಚನ್ನಬಸಪ್ಪ, ಡಿ.ಎಸ್.ಅರುಣ್, ಡಾ ಆರ್.ಸೆಲ್ವಮಣಿ, ಡಾ. ನಾಗೇಂದ್ರ ಎಫ್ ಹೊನ್ನಳ್ಳಿ, ಜಿ.ಕೆ.ಮಿಥುನ್‌ಕುಮಾರ್, ಸುರೇಶ್ ಇದ್ದರು.
Published on

ಶಿವಮೊಗ್ಗ: ರಾಜ್ಯ ಸರ್ಕಾರದ ಐದು ಗ್ಯಾರಂಟಿಗಳಲ್ಲಿ ಒಂದಾದ ಯುವನಿಧಿ ಯೋಜನೆ 2024ರ ಜನವರಿಯಿಂದ ಜಾರಿಗೆ ಬರಲಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.

ನಗರದ ಸರ್ಕಾರಿ ಸೈನ್ಸ್ ಮೈದಾನದಲ್ಲಿ ಬುಧವಾರ ಬೃಹತ್ ಉದ್ಯೋಗ ಮೇಳ ಉದ್ಘಾಟಿಸಿ ಮಾತನಾಡಿದ ಅವರು, ಓದು ಮುಗಿಸಿ, ತಕ್ಷಣ ಕೆಲಸ ಸಿಗದೆ ಮನೆಯಲ್ಲಿರುವ ವಿದ್ಯಾರ್ಥಿಗಳು ತಂದೆ-ತಾಯಿಗಳಿಗೆ ಹೊರೆಯಾಗದಿರಲೆಂದು ಹಾಗೂ ತಮ್ಮ ಸಣ್ಣ ಪುಟ್ಟ ಖರ್ಚುಗಳು, ಉದ್ಯೋಗ ಹುಡುಕಲು ಅನುಕೂಲವಾಗಲೆಂಬ ಉದ್ದೇಶದಿಂದ ರಾಜ್ಯ ಸರ್ಕಾರ ಯುವನಿಧಿ ಯೋಜನೆ ರೂಪಿಸಿದ್ದು ಡಿಪ್ಲೊಮಾ ಮುಗಿಸಿದವರಿಗೆ ಮಾಸಿಕ 1,500 ರೂ. ಹಾಗೂ ಪದವಿ ಮುಗಿಸಿದವರಿಗೆ ಮಾಸಿಕ 3 ಸಾವಿರ ರೂ. ಅನ್ನು ನೇರವಾಗಿ ವಿದ್ಯಾರ್ಥಿಗಳ ಖಾತೆಗೆ ಜಮೆ ಮಾಡಲಾಗುವುದು ಎಂದರು.
ಯುವಜನತೆಗೆ ಅವಕಾಶಗಳನ್ನು ನೀಡಿದರೆ ಉತ್ತಮ ಸಾಧನೆ ಮಾಡುತ್ತಾರೆ. ಸರ್ಕಾರ ಉದ್ಯೋಗ ಮತ್ತು ಅವಕಾಶ ಸೃಷ್ಟಿಗೆ ಮಹತ್ವ ನೀಡುತ್ತಿದ್ದು ಕೆಲಸ ಪಡೆದು ಆರ್ಥಿಕವಾಗಿ ಸದೃಢರಾಗಬೇಕು. ವಿದ್ಯಾರ್ಥಿಗಳು ಕಷ್ಟಪಟ್ಟು ಓದುತ್ತಾರೆ. ಆದರೆ ಓದು ಮುಗಿದ ಮೇಲೆ ಏನು ಕೆಲಸ ಮಾಡಬೇಕೆಂದು ತಿಳಿಯದೆ ತೊಂದರೆ ಅನುಭವಿಸುತ್ತಾರೆ. ಅದರಲ್ಲೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅವಕಾಶಗಳು ಸಿಗದೆ ಕಷ್ಟಪಡುತ್ತಾರೆ. ಆದ್ದರಿಂದ ಒಂದೇ ವೇದಿಕೆಯಲ್ಲಿ ಸಾಕಷ್ಟು ಅವಕಾಶಗಳನ್ನು ನೀಡುವಂತಹ ಬೃಹತ್ ಉದ್ಯೋಗ ಮೇಳಗಳು ಯುವಜನತೆ ಕೆಲಸ ಪಡೆಯಲು ಸಹಕಾರಿಯಾಗಿವೆ ಎಂದು ಹೇಳಿದರು.
ಶಾಸಕ ಎಸ್.ಎನ್.ಚನ್ನಬಸಪ್ಪ, ವಿಧಾನ ಪರಿಷತ್ ಶಾಸಕ ಡಿ.ಎಸ್.ಅರುಣ್ ಮಾತನಾಡಿದರು. ಪಾಲಿಕೆ ಸದಸ್ಯ ಎಚ್.ಸಿ.ಯೋಗೀಶ್, ಡಿಸಿ ಡಾ. ಆರ್.ಸೆಲ್ವಮಣಿ, ಎಸ್ಪಿ ಜಿ.ಕೆ.ಮಿಥುನ್‌ಕುಮಾರ್, ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಆಯುಕ್ತಾಲಯದ ನಿರ್ದೇಶಕ ಡಾ. ನಾಗೇಂದ್ರ ಎಫ್. ಹೊನ್ನಳ್ಳಿ, ಕೌಶಲಾಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಸುರೇಶ್, ಸಹಾಯಕ ನಿರ್ದೇಶಕ ಟೀಕ್ಯಾನಾಯ್ಕ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net