

ಬೆಂಗಳೂರು: ಅಪಘಾತ ಸಂದರ್ಭದಲ್ಲಿ ಜೀವಹಾನಿ ತಪ್ಪಿಸುವ ಉದ್ದೇಶದಿಂದ ಮುಖ್ಯಮಂತ್ರಿ ಆಪತ್ಕಾಲಯಾನ ಯೋಜನೆ ಆರಂಭಿಸಿದ್ದು, 65 ಹೊಸ ಆಂಬ್ಯುಲೆನ್ಸ್ ಸೇವೆಗೆ ವಿಧಾನಸೌಧ ಪೂರ್ವದ್ವಾರದ ಮುಂಭಾಗ ನಡೆದ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದರು.
ರಸ್ತೆ ಅಪಾಘಾತಕ್ಕೀಡಾದವರಿಗೆ ಗೋಲ್ಡನ್ ಅವರ್ ಒಳಗಾಗಿ ಚಿಕಿತ್ಸೆ ದೊರಕಿಸಿಕೊಡುವ ನಿಟ್ಟಿನಲ್ಲಿ ಹೈಟೆಕ್ ಆಂಬ್ಯುಲೆನ್ಸ್, ತರಬೇತಿ ಹೊಂದಿದ ಸಿಬ್ಬಂದಿಯನ್ನು ಸೇವೆಗೆ ಬಳಸಿಕೊಳ್ಳಲಾಗುತ್ತಿದೆ. 65 ಆಂಬ್ಯುಲೆನ್ಸ್ ಪೈಕಿ 26 ಅಡ್ವಾನ್ಸ್ ಲೈಫ್ ಸಪೋರ್ಟ್ ತಂತ್ರಜ್ಞಾನ ಹೊಂದಿದೆ. 39 ಬೇಸಿಕ್ ಲ್ೈ ಸಪೋರ್ಟ್ ಅಂಬ್ಯುಲೆನ್ಸ್ಗಳಾಗಿವೆ.
ಹೆಚ್ಚು ರಸ್ತೆ ಅಪಘಾತ ಸಂಭವಿಸುವ ಬ್ಲಾಕ್ ಸ್ಪಾಟ್‌ಗಳನ್ನ ಗುರುತಿಸಿದ್ದು, ಅಂಥಹ ಸ್ಥಳಗಳ ಹತ್ತಿರದಲ್ಲಿರುವ ತಾಲೂಕು ಹಾಗೂ ಜಿಲ್ಲಾಸ್ಪತ್ರೆಗಳಿಗೆ ಈ ಅಂಬ್ಯುಲೆನ್ಸ್‌ಗಳನ್ನು ನೀಡಲಾಗಿದೆ. ಹಾಗೆಯೇ, ಸಾರಿಗೆ ಇಲಾಖೆ, ಗೃಹ, ಒಳಾಡಳಿತ ಇಲಾಖೆಗಳಿಂದ ಯೋಜನೆಗೆ ಸಹಕಾರ ಸಿಕ್ಕಿದ್ದು, ರಸ್ತೆ ಸುರಕ್ಷತಾ ನಿಧಿಯ ಅನುದಾನ ಬಳಸಿಕೊಂಡು ಈ ಆಂಬ್ಯುಲೆನ್ಸ್ ಖರೀದಿಸಲಾಗಿದೆ.
ರಸ್ತೆ ಸುರಕ್ಷತಾ ನಿಧಿಯಡಿ ಇನ್ನೂ ಹೆಚ್ಚಿನ ಅಂಬ್ಯುಲೆನ್ಸ್ಗಳನ್ನ ಒದಗಿಸುವ ನಿಟ್ಟಿನಲ್ಲಿ ಸಾರಿಗೆ ಇಲಾಖೆಯಿಂದ ಅಗತ್ಯ ಸಹಕಾರ ನೀಡುವುದಾಗಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಇದೇ ವೇಳೆ ಘೋಷಿಸಿದರು.
ರಸ್ತೆ ಸಂಚಾರದ ಅಪಘಾತಗಳಲ್ಲಿ ಗಾಯಾಳುಗಳು ಹಾಗೂ ಸಾವು ನೋವುಗಳನ್ನ ತಡೆಯುವ ನಿಟ್ಟಿನಲ್ಲಿ ರಸ್ತೆ ಸುರಕ್ಷತಾ ಪ್ರಾಧಿಕಾರ ರಚನೆಯಾಗಿದೆ. ಅಪಘಾತ ಪ್ರಕರಣಗಳಿಗಾಗಿಯೇ ಪ್ರತ್ಯೇಕ ಅಂಬ್ಯುಲೆನ್ಸ್‌ಗಳನ್ನು ಆರೋಗ್ಯ ಇಲಾಖೆ ಒದಗಿಸಿರುವುದು ಅತ್ಯಂತ ಉತ್ತಮ ನಿರ್ಧಾರವಾಗಿದ್ದು, ರಾಜ್ಯದಾದ್ಯಂತ ಯೋಜನೆ ವಿಸ್ತರಿಸಲು ಸಾರಿಗೆ ಇಲಾಖೆ ಸಂಪೂರ್ಣ ಸಹಕಾರ ನೀಡಲಿದೆ ಎಂದರು.
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ರಾಜ್ಯದಲ್ಲಿ ಪ್ರತಿ ವರ್ಷ 40 ಸಾವಿರ ಅಪಘಾತ ಪ್ರಕರಣಗಳು ನಡೆಯುತ್ತಿವೆ, ಸರಾಸರಿ 10 ಸಾವಿರ ಜನರು ಸಾವನ್ನಪುತ್ತಿದ್ದಾರೆ. ಹೀಗಾಗಿ ಅಪಘಾತಕ್ಕೆ ಒಳಗಾಗುವ ಜನರ ರಕ್ಷಣೆಗೆ ಪ್ರತ್ಯೇಕವಾಗಿ ಮುಖ್ಯಮಂತ್ರಗಳ ಹೆಸರಿನಲ್ಲೇ ಆಪತ್ಕಾಲಯಾನ ಅಂಬ್ಯುಲೆನ್ಸ್ಗಳ ಸೇವೆಯನ್ನ ಒದಗಿಸುತ್ತಿದ್ದೇವೆ ಎಂದರು.
ಮುಂಬರುವ ವರ್ಷದಲ್ಲಿ ರಾಜ್ಯದ ಎಲ್ಲ ತಾಲೂಕು ಆಸ್ಪತ್ರೆಗಳಿಗು ಈ ಯೋಜನೆ ವಿಸ್ತರಿಸುವ ನಿಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ
ಮುಖ್ಯಾಂಶ
1. 31 ಜಿಲ್ಲೆಗಳಿಗೂ ವೆಂಟಿಲೆಟರ್ ಇರುವ ಅಡ್ವಾನ್ಸ್ ಆಂಬ್ಯುಲೆನ್ಸ್
2. ಆರೋಗ್ಯ ಇಲಾಖೆಯ ಸ್ಟಾಫ್‌ನರ್ಸನ್ನು ಅಂಬ್ಯುಲೆನ್ಸ್‌ಗೆ ನಿಯೋಜನೆ
3. ವೆಂಟೀಲೇಟರ್ ಬಳಸಿ ಜಿಲ್ಲಾಸ್ಪತ್ರೆಗಳಿಗೆ ರೋಗಿಗಳನ್ನು ಕರೆದೊಯ್ಯುವ ವ್ಯವಸ್ಥೆ
4. 108 ಸೇವೆ ಜತೆಗೆ ಇದೂ ಕೂಡ ಕಾರ್ಯನಿರ್ವಹಣೆ
5. ಅಪಘಾತ ನಡೆಯುವ ಹಾಟ್‌ಸ್ಪಾಟ್ ಹತ್ತಿರದ ಆಸ್ಪತ್ರೆಗಳಲ್ಲಿರಲಿವೆ ಆಂಬ್ಯುಲೆನ್ಸ್