ಒಳಮೀಸಲಾತಿ ಜಾರಿ ಸಮಾಜಕ್ಕೆ ಮಾರಕ: ಬಂಜಾರರ ಪ್ರತಿಭಟನೆ

banjara
ಒಳಮೀಸಲಾತಿ ವಿರೋಧಿಸಿ ಬಂಜಾರ ಸಮಾಜದಿಂದ ನಡೆದ ಪ್ರತಿಭಟನೆಯಲ್ಲಿ ಸೈನಾ ಭಗತ್ ಸ್ವಾಮೀಜಿ. ದೇನಾ ಭಗತ್ ಸ್ವಾಮೀಜಿ, ಶಾರದಾ ಪೂರ‌್ಯಾನಾಯ್ಕಾ, ಆಯನೂರು ಶಿವಾನಾಯ್ಕ, ನಾಗೇಶ್ ನಾಯ್ಕ, ಶಶಿಕುಮಾರ್ ಮತ್ತಿತರರು ಭಾಗವಹಿಸಿದ್ದರು.
Published on

ಶಿವಮೊಗ್ಗ: ಒಳಮೀಸಲಾತಿ ಜಾರಿ ವಿರೋಧಿಸಿ ಜಿಲ್ಲಾ ಬಂಜಾರ ಸಮಾಜ, ಬಂಜಾರ ಧರ್ಮಗುರುಗಳ ಮಹಾಸಭಾ ಹಾಗೂ ಬಂಜಾರ ಸಮಾಜದ ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಸೋಮವಾರ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ರಾಜ್ಯ ಸರ್ಕಾರ ಒಳ ಮೀಸಲಾತಿ ಜಾರಿಗೆ ಮುಂದಾಗಿದೆ. ಇಂದರಿಂದ ಬಂಜಾರ ಸಮುದಾಯಕ್ಕೆ ಕೊಡಲಿ ಪೆಟ್ಟು ಬೀಳಲಿದೆ. ಯಾವ ಕಾರಣಕ್ಕೂ ಒಳಮೀಸಲಾತಿ ಜಾರಿಯಾಗಬಾರದು. ಬಂಜಾರ ಸಮಾಜ ಈ ನಿಟ್ಟಿನಲ್ಲಿ ಜಾಗೃತಿ ಅಭಿಯಾನ ನಡೆಸಲಿದೆ. ಈ ಮೂಲಕ ಸರ್ಕಾರವನ್ನು ಒತ್ತಾಯಿಸಲಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು.

ಒಳಮೀಸಲಾತಿ ಜಾರಿಯಿಂದ ವಿದ್ಯಾರ್ಥಿ ವೇತನಕ್ಕೆ ಕತ್ತರಿ ಬೀಳಲಿದೆ. ಉದ್ಯೋಗ ಅವಕಾಶಗಳು ಕಡಿಮೆಯಾಗಲಿದೆ. ಸರ್ಕಾರಿ ನೌಕರರಿಗೆ ಬಡ್ತಿ ಸಿಗುವುದಿಲ್ಲ. ತಾಂಡಾ ಅಭಿವೃದ್ಧಿ ನಿಗಮವನ್ನು ಸ್ಥಗಿತಗೊಳಿಸಲಾಗುತ್ತದೆ. ಹೀಗಾಗಿ ಒಳಮೀಸಲಾತಿ ನಮ್ಮ ಸಮುದಾಯಕ್ಕೆ ಮಾರಕವಾಗಿದೆ. ಇದರ ಜಾರಿ ಹಿಂದೆ ಷಡ್ಯಂತ್ರವಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಒಳಮೀಸಲಾತಿ ಬಗ್ಗೆ ವೈಜ್ಞಾನಿಕ ಅಧ್ಯಯನ ನಡೆಸಿಲ್ಲ. ಖಾಸಗಿ ವಲಯದಲ್ಲಿ ಮೀಸಲಾತಿ ಜಾರಿಗೊಳಿಸಲು ತಂದಿರುವ ಮಸೂದೆಯನ್ನು ರಾಜ್ಯ ಸರ್ಕಾರ ಅಂಗೀಕರಿಸಬೇಕಿದೆ. ಸೂಕ್ತ ಅಧ್ಯಯನವಿಲ್ಲದೆ ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿ ಜಾರಿಗೊಳಿಸಲು ನಡೆಯುತ್ತಿರುವ ಹುನ್ನಾರಗಳನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ಬಂಜಾರ ಧರ್ಮಗುರುಗಳ ಮಹಾಸಭಾದ ಸರ್ದಾರ್ ಸೇವಾಲಾಲ್ ಸ್ವಾಮೀಜಿ, ಸೈನಾ ಭಗತ್ ಸ್ವಾಮೀಜಿ, ಶಿವಪ್ರಕಾಶ್ ಸ್ವಾಮೀಜಿ, ದೇನಾ ಭಗತ್ ಸ್ವಾಮೀಜಿ, ಶಾಸಕಿ ಶಾರದಾ ಪೂರ‌್ಯಾನಾಯ್ಕಾ, ಮುಖಂಡರಾದ ಶಶಿಕುಮಾರ್, ರೇಣುನಾಯ್ಕ, ಗಣೇಶ್ ನಾಯ್ಕ, ಹನುಮಂತ ನಾಯ್ಕ, ನಾಗೇಶ್ ನಾಯ್ಕ, ಆಯನೂರು ಶಿವಾನಾಯ್ಕ ಪ್ರತಿಭಟನೆಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net