

ಬೆಂಗಳೂರು: ಗ್ರಾಮ ಪಂಚಾಯಿತಿಗಳ ಆಡಳಿತವನ್ನು ಡಿಜಿಟಲೀಕರಣ(Implementation of e-office in Gram Panchayats; Break in physical file and letter submission)ಗೊಳಿಸುವ ನಿಟ್ಟಿನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ.
ಎಲ್ಲ ಗ್ರಾಪಂಗಳಲ್ಲಿ ಇ-ಆಫೀಸ್ ಅನುಷ್ಠಾನಗೊಳಿಸಿ ಕಡ್ಡಾಯವಾಗಿ ಬಳಕೆ ಮಾಡುವ ಸಂಬಂಧ ಸುತ್ತೋಲೆ ಹೊರಡಿಸಿದೆ.
ಗ್ರಾಮ ಪಂಚಾಯಿತಿಗಳು ಸಂಬಂಧಪಟ್ಟ ತಾಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಎಲ್ಲ ಕಡತ ಮತ್ತು ಪತ್ರಗಳನ್ನು ಭೌತಿಕ ರೂಪದಲ್ಲಿ ಸಲ್ಲಿಸುವ ಬದಲಾಗಿ ಇ-ಆಫೀಸ್ ಮೂಲಕವೇ ಸಲ್ಲಿಸಲು ನಿರ್ದೇಶನ ನೀಡಲಾಗಿದೆ. ಮೇ 26 ರಿಂದ ಕಡ್ಡಾಯವಾಗಿ ಇ-ಆಫೀಸ್ ಜಾರಿಗೆ ಕ್ರಮ ವಹಿಸುವಂತೆ ಸಿಇಒಗಳಿಗೆ ಸೂಚಿಸಲಾಗಿದೆ.
ಈ ಸಂಬಂಧ ಬಾಗಲಕೋಟೆ, ಬೆಂಗಳೂರು ನಗರ, ಬೆಳಗಾವಿ, ಬಳ್ಳಾರಿ, ಚಿಕ್ಕಮಗಳೂರು, ಚಿತ್ರದುರ್ಗ, ಧಾರವಾಡ, ಕಲಬುರಗಿ, ಹಾಸನ, ಹಾವೇರಿ, ಕೊಡಗು, ಕೊಪ್ಪಳ, ವಿಜಯನಗರ, ಮತ್ತು ಯಾದಗಿರಿ ಜಿಲ್ಲೆಗಳ ಜಿಲ್ಲಾ ಪಂಚಾಯಿತಿಗಳಿಗೆ ಸ್ಪಷ್ಟ ಸೂಚನೆ ನೀಡಲಾಗಿದೆ.
ಗ್ರಾಮ ಪಂಚಾಯಿತಿಗಳಲ್ಲಿ ತೆರಿಗೆ ವಸೂಲಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಡಿಜಿಟಲ್ ಪಾವತಿ ಉತ್ತೇಜಿಸುವ ಸಲುವಾಗಿ 2000 ಗ್ರಾಮ ಪಂಚಾಯಿತಿಗಳಿಗೆ ಅಂಡ್ರಾಯ್ಡಾ ಪಿಒಎಸ್ ಮಿಷಿನ್ಗಳನ್ನು ಸರ್ಕಾರ ಒದಗಿಸಲಿದೆ.
ಈಗಾಗಲೇ ರಾಜ್ಯದ ಎಲ್ಲ ಗ್ರಾಪಂಗಳಿಗೆ ತಲಾ ಒಂದು ಅಂಡ್ರಾಯ್ಡಾ ಪಿಒಎಸ್ ಮಿಷಿನ್ ಒದಗಿಸಿದ್ದು, ಹೆಚ್ಚುವರಿಯಾಗಿ ಈ ಮಿಷಿನ್ಗಳನ್ನು ನೀಡಲಾಗುತ್ತದೆ.
2025ರ ಅಂತ್ಯಕ್ಕೆ ಅತಿ ಹೆಚ್ಚು ಡಿಜಿಟಲ್ ಪಾವತಿಗಳ ಮೂಲಕ ತೆರಿಗೆ ವಸೂಲಿ ಮಾಡಿದ 2000 ಗ್ರಾಮ ಪಂಚಾಯಿತಿಗಳಿಗೆ ಈ ಪಿಒಎಸ್ ಮಿಷಿನ್ ನೀಡಲಾಗುತ್ತದೆ.
ಮೇ 13 ರಂದು ನಿರ್ದೇಶಕರು, ಇ-ಆಡಳಿತ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಕಚೇರಿಯಲ್ಲಿ ಪಿಒಎಸ್ ಮಿಷಿನ್ಗಳನ್ನು ವಿತರಿಸಲಾಗುತ್ತದೆ. ಹಾಸನ 162, ತುಮಕೂರು 123, ರಾಮನಗರ 121, ಮೈಸೂರು 107 ಹಾಗೂ ಮಂಡ್ಯ 101 ಹೆಚ್ಚು ಪಿಒಎಸ್ ಮಷಿನ್ ಪಡೆವ ಮೊದಲ ಐದು ಜಿಲ್ಲೆಗಳಾಗಿವೆ.