

ಕೋಲಾರ: ಕಂದಾಯ ಇಲಾಖೆಯಿಂದ ಜನರ ಸಮಸ್ಯೆಗಳಿಗೆ ಸಕಾಲದಲ್ಲಿ ಸ್ಪಂದನೆ ಸಿಗುವಂತಾಗಲು ಹಾಗೂ ಆಡಳಿತದಲ್ಲಿ ಪಾರದರ್ಶಕತೆ ತರಲು ಇ&ಆಫೀಸ್ ಜಾರಿ ಮಾಡಲಾಗಿದೆ. ಇದನ್ನು ಅಧಿಕಾರಿಗಳು ಕಡ್ಡಾಯವಾಗಿ ಪಾಲನೆ ಮಾಡಲು ಸೂಚಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಹೇಳಿದರು.
ನಗರದ ಜಿಲ್ಲಾಡಳಿತ ಭವನದಲ್ಲಿ ಬುಧವಾರ ಆಯೋಜಿಸಿದ್ದ ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಕಾಗದ ವ್ಯವಹಾರ ಬಿಟ್ಟು ಇ&ಆಫೀಸ್ ಮೂಲಕವೇ ಕಡತ ವಿಲೇವಾರಿ ಆಗಬೇಕು, ಇದನ್ನು ಕಂದಾಯ ಇಲಾಖೆಯ ಎಲ್ಲ ವಿಭಾಗದ ಅಧಿಕಾರಿಗಳು ಅಳವಡಿಸಿಕೊಳ್ಳಲು ತಿಳಿಸಲಾಗಿದೆ ಎಂದರು.
ಹಳೇ ಕಾಲದ ಪತ್ರ ವ್ಯವಹಾರ ಕೈಬಿಟ್ಟು ತಂತ್ರಜ್ಞಾನಕ್ಕೆ ಒಗ್ಗಿಕೊಳ್ಳುವ ಹಾಗೂ ಕಡತಗಳ ಶೀಘ್ರ ವಿಲೇವಾರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಆ.15ರಿಂದ ಇ -ಆಫೀಸ್ ಅನುಷ್ಠಾನಗೊಳಿಸಲಾಗಿದೆ. ಎಲ್ಲ ಜಿಲ್ಲಾಧಿಕಾರಿಗಳೂ ಈಗಾಗಲೇ ಇ-&ಆಫೀಸ್ ಮೂಲಕವೇ ಕಡತ ವಿಲೇವಾರಿ ಮಾಡುತ್ತಿದ್ದು, ತಹಸೀಲ್ದಾರ್ ಹಾಗೂ ವಿಭಾಗಾಧಿಕಾರಿಗಳು ಬಳಸಲು ಸೂಚಿಸಲಾಗಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ನಮ್ಮ ಸರ್ಕಾರದ ಅಧಿಕಾರಕ್ಕೆ ಬಂದ ಕೂಡಲೇ ಕಂದಾಯ ನ್ಯಾಯಾಲಯದಲ್ಲಿ ಬಾಕಿಯಿದ್ದ ಪ್ರಕರಣಗಳನ್ನು ವಿಲೇ ಮಾಡಲು ಕ್ರಮಕೈಗೊಳ್ಳಲಾಯಿತು. ಆರಂಭದಲ್ಲಿ ರಾಜ್ಯದ್ಯಂತ 59,355 ಇದ್ದ ಪ್ರಕರಣ ಈಗ 35,245ಕ್ಕೆ ಇಳಿಸಲಾಗಿದೆ. ಇದರಲ್ಲಿ ಒಂದು ವರ್ಷಕ್ಕೂ ಹೆಚ್ಚು ಬಾಕಿಯಿದ್ದ ಪ್ರಕರಣಗಳು ಇತ್ಯರ್ಥಗೊಂಡಿವೆ ಎಂದರು.
ಎಸಿ ಕೋರ್ಟ್ನಲ್ಲಿ 6 ತಿಂಗಳಲ್ಲಿ ಹಾಗೂ ತಾಲೂಕು ನ್ಯಾಯಾಲಯದಲ್ಲಿ 90 ದಿನದಲ್ಲಿ ಪೂರ್ಣಗೊಳಿಸಬೇಕು, ಹಳೇ ಸಚಿವರು ಬಿಟ್ಟು ಹೋಗಿದ್ದನ್ನು ನಾನು ಮುಗಿಸುವ ಕೆಲಸ ಮಾಡುತ್ತಿದ್ದೇನೆ. ಜಿಲ್ಲೆಯಲ್ಲಿ ಎಸಿ ನ್ಯಾಯಲಯದಲ್ಲಿ ಬಾಕಿಯಿದ್ದ 5,995 ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ. ಇದೀಗ ಬಾಕಿಯಿರುವ 3,170 ಪ್ರಕರಣಗಳನ್ನು ಹಂಚಿಕೆ ಮಾಡಿ ಎರಡು ವಿಶೇಷ ಎಸಿಗಳನ್ನು ನೇಮಕ ಮಾಡಿ ನಾಲ್ಕು ತಿಂಗಳ ಗಡುವು ನೀಡಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಪಿ-ನಂಬರ್ ದುರಸ್ತಿ ಆಗದೆ ಇರುವ ಬಗ್ಗೆ ರೈತರು, ಜನಪ್ರತಿನಿಧಿಗಳು ಗಮನಕ್ಕೆ ತಂದಿದ್ದಾರೆ. ಇದನ್ನು ಅಭಿಯಾನ ಮಾಡಲು ಕೈಗೆತ್ತಿಕೊಂಡಿದ್ದು 87,475 ಮಂದಿಗೆ ಮಂಜೂರಾಗಿರುವ ಜಾಗ ದುರಸ್ತಿಯಾಗಿಲ್ಲ ಎಂಬುದು ಕಂಡು ಬಂದಿದೆ. 8,842 ಸರ್ವೇ ನಂಬರ್ ಇದ್ದು, 1,400 ಪ್ರಕರಣಕ್ಕೆ ಕಡತ ತಯಾರಿ ಕೆಲಸ ಚಾಲ್ತಿಯಲ್ಲಿದ್ದು, ನವೆಂಬರ್ ಗಡುವು ನೀಡಲಾಗಿದೆ ಎಂದರು.
ದರಖಾಸ್ತು ಪೋಡಿ, ಪೌತಿಖಾತೆ ಮಾಡುವುದು, ಜಂಟಿ ಪಹಣಿ ಇತ್ಯರ್ಥ ಮಾಡುವುದನ್ನು ಆದ್ಯತೆ ಮೇರೆಗೆ ತೆಗೆದುಕೊಳ್ಳಲಾಗಿದೆ. ಬಗರ್ ಹುಕುಂನಲ್ಲಿ ಬಾಕಿ ಇರುವ ಅರ್ಜಿ ವಿಲೇವಾರಿ ಮಾಡಲು ಸೂಚಿಸಲಾಗಿದೆ. ಸರ್ಕಾರಿ ಜಮೀನುಗಳ ಒತ್ತುವರಿ ಗುರುತಿಸಿದ್ದು, ತೆರವೊಳಿಸಲು ಸರಿಯಾದ ಕ್ರಮ ಆಗಿಲ್ಲ. ಇದಕ್ಕೂ ಅಧಿಕಾರಿಗಳು ಕಾರ್ಯಪ್ರವೃತ್ತರಾಗಲು ಸೂಚಿಸಲಾಗಿದೆ ಎಂದರು.
ಸಭೆಯಲ್ಲಿ ಶಾಸಕರಾದ ಕೊತ್ತೂರು.ಜಿ.ಮಂಜುನಾಥ್, ಕೆ.ವೈ.ನಂಜೇಗೌಡ, ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್, ಕಂದಾಯ ಇಲಾಖೆ ಆಯುಕ್ತ ಸುನೀಲ್ಕುಮಾರ್, ಜಿಲ್ಲಾಧಿಕಾರಿ ಅಕ್ರಂಪಾಷಾ ಇದ್ದರು.
ವೇಮಗಲ್ಗೆ ಹೆಚ್ಚುವರಿ ನಾಡಕಚೇರಿ
ವೇಮಗಲ್ ದಿನೇದಿನೆ ಬೆಳೆಯುತ್ತಿದೆ, ಇದೀಗ ಜನಗಣತಿ ನಡೆಸಲು ಕೇಂದ್ರ ಸರ್ಕಾರವು ಸೂಚನೆ ನೀಡಿದೆ, ಆದ್ದರಿಂದ ಹೊಸ ತಾಲೂಕು, ಹೋಬಳಿ ಘೋಷಣೆ ಮಾಡಲು ಅವಕಾಶವಿಲ್ಲ, ಇದರಿಂದಾಗಿ ವೇಮಗಲ್, ಕ್ಯಾಲನೂರು ಭಾಗದಲ್ಲಿ ಹೆಚ್ಚುವರಿಯಾಗಿ ನಾಡಕಚೇರಿ ತೆರೆಯಲು ಸೂಚಿಸಲಾಗಿದೆ ಎಂದರು.
ಮತ್ತೊಮ್ಮೆ ಸರ್ವೇ ಮಾಡಲಿ!
ರಮೇಶ್ ಕುಮಾರ್ ವಿರುದ್ಧ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿ, ರಮೇಶ್ ಕುಮಾರ್ ಅವರು ನೂರಾರು ಎಕರೆ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಆರೋಪ ಮಾಡಿದರೆ ಅದನ್ನು ಸ್ವೀಕರಿಸಲು ಸಾಧ್ಯವಿಲ್ಲ. ಈಗ ತಂತ್ರಜ್ಞಾನ ಸಾಕಷ್ಟು ಮುಂದುವರಿದಿದೆ, ಆಧಾರ್ ನಂಬರ್ ಹಾಕಿದರೆ ಎಷ್ಟು ಆಸ್ತಿ ಇದೆ ಎಂಬುದು ಸಿಗುತ್ತದೆ, ದಾಖಲೆ ತೆಗೆದು ಮಾತನಾಡಲಿ. ಅವರು ಚುನಾವಣೆ ಸಂದರ್ಭದಲ್ಲಿ ಅಫಿಡೆವಿಟ್ ಸಲ್ಲಿಸಿದಾಗ ಗಮನಿಸಿಲ್ಲವೆ ಎಂದು ತಿರುಗೇಟು ನೀಡಿದರು. 2014ರಲ್ಲಿ ಒಮ್ಮೆ ಸರ್ವೇ ಆಗಿದೆ, ಇದೀಗ ಮತ್ತೆ ಸರ್ವೇಗೆ ಕ್ರಮಕೊಳ್ಳಲಾಗಿದೆ, ಆಗಲಿ ಬಿಡಿ, ಇದಕ್ಕೆಲ್ಲ ಹಾದಿ ಬೀದಿಯಲ್ಲಿ ಹೋಗುವವರೆಲ್ಲ ಮಾತನಾಡಿದರೆ ಪ್ರತಿಕ್ರಿಯೆ ನೀಡಲಾಗುವುದಿಲ್ಲ, 2014ರಿಂದ ಇದುವರೆಗೂ ಸರ್ಕಾರಗಳು ಬದಲಾಗಿವೆ, ಮೂವರು ಸಿಎಂಗಳು ಆಗಿದ್ದರು. ಆಗ ಯಾಕೆ ಕ್ರಮವಹಿಸಲಿಲ್ಲ ಎಂದು ಪ್ರಶ್ನಿಸಿದರು.
ಅರಣ್ಯ ಹೆಸರು ಬದಲಾಯಿಸಲಾಗದು
ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆಗೆ ಶೇ.10 ತಕರಾರು ಇರಬಹುದು, ಆದರೆ ತಕರಾರು ಇಲ್ಲದೆ ಇರುವುದನ್ನು ಅಧಿಕೃತ ಮಾಡಿಕೊಡಲು ಕ್ರಮವಹಿಸಲಾಗಿದೆ. ಅರಣ್ಯ ಇಲಾಖೆಯ ಕಾನೂನುಗಳನ್ನು ಯಾರೂ ಬದಲಾಯಿಸಲು ಸಾಧ್ಯವಿಲ್ಲ, ಇದಕ್ಕೆ ಸುಪ್ರೀಂಕೋರ್ಟ್ ಆದೇಶವೇ ಇದೆ. ಒಂದು ಬಾರಿ ಅರಣ್ಯ ಎಂದು ಕರೆದರೆ, ಅದು ಎಂದಿಗೂ ಅರಣ್ಯ ಜಾಗವೇ, ಅದನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದರು.
ಆಗ್ಯಾಕೆ ಮಾಡಲಿಲ್ಲ?
ಕೋಲಾರಲ್ಲಿ ಇದುವರೆಗೂ ವಕ್ಫ್ ಸಂಬಂಧ ನೊಟೀಸ್ ನೀಡಿಲ್ಲ, ಬಿಜೆಪಿ ಸರ್ಕಾರದ ಅವಧಿಯಲ್ಲಿ ವಿಜಯಪುರದಲ್ಲಿ 138 ಪ್ರಕರಣಗಳನ್ನು ಹಕ್ಕು ವರ್ಗಾವಣೆ ಮಾಡಲಾಗಿದೆ. ಅವತ್ತು ಎಲ್ಲಿ ಹೋಗಿದ್ದರು, ಆಗ್ಯಾಕೆ ಬೆಂಕಿ ಇಡೊ ಕೆಲಸ ಮಾಡಲಿಲ್ಲ?, 41 ನೊಟೀಸ್ ಕೊಟ್ಟಿದ್ದನ್ನು ವಾಪಸ್ ಪಡೆಯಲು ನಾವು ಮುಂದಾಗಿದ್ದೇವೆ, ಅವತ್ತು ಸಹ ಅವರೇ ಶಾಸಕರು, ಸಚಿವರು ಇದ್ದರಲ್ಲ, ಈಗ ಅವರು ಆಡುತ್ತಿರೊದು ಡೋಂಗಿತನ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.
ಸದನದಲ್ಲಿ ಚರ್ಚಿಸಿ ಕ್ರಮ
ರಾಜ್ಯದಲ್ಲಿ ಜಾತಿಗಣತಿ ಸಮೀೆ ನಡೆಸಲು ಸಾಕಷ್ಟು ಆಕ್ಷೇಪಗಳು ವ್ಯಕ್ತವಾಗಿವೆ. ಸದನದಲ್ಲಿ ಚರ್ಚಿಸಿ ಕ್ರಮವಹಿಸಲಾಗುವುದು, ಈ ಸಂಬಂಧ ತಜ್ಞರ ಅಭಿಪ್ರಾಯ ಸಂಗ್ರಹಿಸಲಾಗುತ್ತಿದ್ದು, ಸರ್ಕಾರ ಜಾತಿ ಸಮೀೆಗೆ ಸಿದ್ಧವಿದೆ, ವಿರೋಧ ಪಕ್ಷದವರು ಸಲ್ಲಿಸಿರುವ ವರದಿ ಇನ್ನೂ ಗಮನಿಸಿಲ್ಲ ಎಂದರು.