

ಶಿವಮೊಗ್ಗ: ಕಾಂತರಾಜ್ ಆಯೋಗದ ವರದಿಯನ್ನು ಅನುಷ್ಠಾನಗೊಳಿಸುವ ಬಗ್ಗೆ ರಾಜ್ಯ ಸರ್ಕಾರ ಅಧಿವೇಶನದಲ್ಲಿ ಘೋಷಣೆ ಮಾಡಬೇಕು ಎಂದು ಹಿಂದುಳಿದ ಜನಜಾಗೃತಿ ವೇದಿಕೆ ಶಿವಮೊಗ್ಗ ಜಿಲ್ಲಾಧ್ಯಕ್ಷ ತೀ.ನ.ಶ್ರೀನಿವಾಸ್ ಒತ್ತಾಯಿಸಿದರು.
ಚುನಾವಣಾ ಪೂರ್ವದಲ್ಲಿ ಅಧಿಕಾರಕ್ಕೆ ಬಂದರೆ ಕಾಂತರಾಜ್ ವರದಿಯನ್ನು ಅನುಷ್ಠಾನ ಮಾಡುವುದಾಗಿ ಕಾಂಗ್ರೆಸ್ ಭರವಸೆ ನೀಡಿತ್ತು. ಆಯೋಗದ ವರದಿ ಸ್ವೀಕಾರ ಮಾಡಿರುವ ಸಿಎಂ ಸಿದ್ದರಾಮಯ್ಯ ನುಡಿದಂತೆ ನಡೆಯಬೇಕು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.
ಹಿಂದುಳಿದ ವರ್ಗಗಳ ಆಯೋಗದ ವರದಿಯಲ್ಲಿ ಎಲ್ಲ ಜಾತಿಗಳ ಸಮೀಕ್ಷೆ ನಡೆಸಿ ಅಂತಿಮಗೊಳಿಸಲಾಗಿದೆ. ಆದರೆ ಕೆಲವರು ಇದನ್ನು ವಿರೋಧಿಸುತ್ತಿದ್ದು, ಸರ್ಕಾರ ಇದಕ್ಕೆ ಕಿವಿಗೊಡದೆ ತಕ್ಷಣವೇ ಪ್ರಕ್ರಿಯೆ ಆರಂಭಿಸಬೇಕು. ವಿವಿಧ ನಿಗಮ-ಮಂಡಳಿಗಳಲ್ಲಿ ಹಿಂದುಳಿದ ವರ್ಗಗಳ ಕಾರ್ಯಕರ್ತರಿಗೆ ಆದ್ಯತೆ ನೀಡಬೇಕು. ಪ್ರಸ್ತಕ ಸಾಲಿನಲ್ಲಿ ಹೆಚ್ಚಿನ ಅನುದಾನ ಘೋಷಣೆ ಮಾಡುವ ಜತೆಗೆ ತಕ್ಷಣ ಹಣಕಾಸು ಬಿಡುಗಡೆ ಮಾಡಬೇಕು. ಜಿಪಂ, ತಾಪಂ, ಪುರಸಭೆ, ನಗರಸಭೆ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಹಿಂದುಳಿದ ವರ್ಗಗಳ ಮಹಿಳೆಯರಿಗೆ ಆದ್ಯತೆ ಮೇಲೆ ಮೀಸಲಾತಿ ಹೆಚ್ಚಿಸಬೇಕು ಎಂದು ಹೇಳಿದರು.
ಹೊಸದಾಗಿ ವೈದ್ಯಕೀಯ, ತಾಂತ್ರಿಕ ಹಾಗೂ ಇನ್ನಿತರ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಲು ಹಿಂದುಳಿದ ವರ್ಗಗಳ ಜನರಿಗೆ ಅವಕಾಶ ನೀಡುವ ಮೂಲಕ ಈ ವರ್ಗಗಳ ಅಭಿವೃದ್ಧಿಗೆ ವಿಶೇಷ ಗಮನ ಹರಿಸಬೇಕು. ನನೆಗುದಿಗೆ ಬಿದ್ದಿರುವ ಶಿವಮೊಗ್ಗದ ಡಿ. ದೇವರಾಜ ಅರಸು ಭವನ ನಿರ್ಮಾಣ ಕಾರ್ಯವನ್ನು ಮರು ಆರಂಭಿಸಿ ಹಿಂದುಳಿದ ವರ್ಗಗಳ ಕಾರ್ಯಚಟುವಟಿಕೆಗಳಿಗೆ ಅರಸು ಭವನ ದೊರೆಯುವಂತೆ ಮಾಡಬೇಕು ಎಂದು ಮನವಿ ಮಾಡಿದರು.
ಹಿಂದುಳಿದ ವರ್ಗಗಳ ಜನರ ಮಕ್ಕಳ ಮದುವೆ ಹಾಗೂ ಇನ್ನಿತರ ಶುಭ ಸಮಾರಂಭಗಳು ನಡೆಸಲು ಪ್ರತಿ ತಾಲೂಕಿನಲ್ಲೂ ಅರಸು ಸಮುದಾಯ ಭವನಗಳನ್ನು ನಿರ್ಮಿಸಬೇಕು. ಪ್ರಸ್ತುತ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಅನುಕೂಲ ಆಗುವಂತೆ ಹೆಚ್ಚು ಹಾಸ್ಟೆಲ್ ವ್ಯವಸ್ಥೆ ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಉಪಾಧ್ಯಕ್ಷರಾದ ಪ್ರೊ.ಉಮೇಶ್‌ಯಾದವ್, ಪ್ರೊ. ಜಿ.ಪರಮೇಶ್ವರಪ್ಪ, ಅತಿ ಹಿಂದುಳಿದ ವರ್ಗಗಳ ಜನನಾಗೃತಿ ವೇದಿಕೆ ಅಧ್ಯಕ್ಷ ಆರ್.ಮೋಹನ್, ಸಂಚಾಲಕರಾದ ಬಿ.ಜನಮೇಜಿರಾವ್, ಆರ್.ಟಿ.ನಟರಾಜ್, ಹನುಮೇಶ್, ಚನ್ನವೀರಪ್ಪ ಗಾಮನಗಟ್ಟಿ, ರಾಮಚಂದ್ರ ಇತರರಿದ್ದರು.