ಬಡ್ತಿಗಾಗಿ ಹುದ್ದೆ ಸೃಷ್ಟಿಗೆ ತಡೆ: ಬಿಳಿಯಾನೆಯಂಥ ಹುದ್ದೆ ರದ್ದು, ಆಡಳಿತ ಸುಧಾರಣೆಯತ್ತ ಹೆಜ್ಜೆ..

Front
Published on

| ರುದ್ರಣ್ಣ ಹರ್ತಿಕೋಟೆ ಬೆಂಗಳೂರು

ಬಡ್ತಿಗಾಗಿ ಹುದ್ದೆಗಳ ಸೃಷ್ಟಿಗೆ ತಡೆ, ಅನಗತ್ಯ ಯೋಜನಾ ಪ್ರಾಧಿಕಾರಗಳ ರದ್ದು, ಲೋಕೋಪಯೋಗಿ ಇಲಾಖೆಯಿಂದಲೇ ನಿರ್ಮಾಣ ಕಾಮಗಾರಿ ಅನುಷ್ಠಾನ ಸೇರಿ ಕೆಲವೊಂದು ಮಹತ್ವದ ಆಡಳಿತ ಸುಧಾರಣೆ ನಿರ್ಧಾರಗಳನ್ನು ಕೈಗೊಳ್ಳುವ ಸಂಬಂಧ ಸರ್ಕಾರ ಗಂಭೀರ ಪರಿಶೀಲನೆ ನಡೆಸುತ್ತಿದೆ.

ಆಡಳಿತ ಸುಧಾರಣೆಗೆ ಸಂಬಂಧಿಸಿದಂತೆ ವರದಿ ನೀಡಲು ರಚಿಸಿರುವ ನಿವೃತ್ತ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ನೇತೃತ್ವದ ಆಯೋಗ ಹಾಗೂ ಕಂದಾಯ ಸಚಿವ ಆರ್. ಅಶೋಕ್ ಅಧ್ಯಕ್ಷತೆಯ ಸಚಿವ ಸಂಪುಟ ಉಪ ಸಮಿತಿಗಳ ಕೆಲ ಶಿಫಾರಸುಗಳನ್ನು ಒಪ್ಪಲು ಸರ್ಕಾರ ತೀರ್ಮಾನ ಕೈಗೊಂಡಿದೆ. ಆಡಳಿತ ಸುಧಾರಣೆ ಒಂದೆರಡು ದಿನದಲ್ಲಿ ಆಗುವ ಕೆಲಸವಲ್ಲವಾದರೂ, ಕೆಲವೊಂದು ಗಟ್ಟಿ ನಿರ್ಧಾರಗಳನ್ನು ಕೈಗೊಳ್ಳಲು ಸರ್ಕಾರ ಮುಂದಾಗಿದೆ.

ಸರ್ಕಾರ ಕೆಳಹಂತದ ಹುದ್ದೆಗಳನ್ನು ಮಾತ್ರ ರದ್ದು ಮಾಡುವ ಮೂಲಕ ಹೊರೆ ಜಾಸ್ತಿ ಹಾಕುತ್ತದೆ, ಅಧಿಕಾರಿಗಳ ಮಟ್ಟದ ಹುದ್ದೆಗಳನ್ನು ಮುಟ್ಟಲು ಹೆದರುತ್ತದೆ ಎಂಬ ಭಾವನೆ ಇದೆ. ಆದ್ದರಿಂದ ಸರ್ಕಾರ ಅಧಿಕಾರಿಗಳ ಮಟ್ಟದಲ್ಲಿಯೂ ಅನಗತ್ಯವಾದ ಹುದ್ದೆಗಳನ್ನು ಮುಲಾಜಿಲ್ಲದೆ ರದ್ದು ಮಾಡುವ ಮೂಲಕ ಅವರನ್ನು ಬೇರೆಡೆ ಬಳಸಿಕೊಳ್ಳುವ ನಿರ್ಧಾರಕ್ಕೆ ಬಂದಿದೆ.

ಆಡಳಿತ ಸುಧಾರಣೆಗೆ ಸಂಬಂಧಿಸಿದಂತೆ ಕೆಲವೊಂದು ನಿರ್ಧಾರ ಕೈಗೊಳ್ಳ ಲಾಗಿದೆ. ಪ್ರತಿ ಆರು ತಿಂಗಳಿಗೊಂದು ವರದಿ ನೀಡಿ ಅನುಷ್ಠಾನ ಮಾಡಲಾಗುತ್ತದೆ. ಬಿಳಿಯಾನೆಗಳಂತೆ ಇರುವ ಅಧಿಕಾರಿಗಳನ್ನು ತೆಗೆದು ಹಾಕಿ ಅಗತ್ಯ ಇರುವ ಕಡೆ ಬಳಸಬೇಕಾಗಿದೆ. ಕೆಲಸ ಇಲ್ಲದ ನಿಗಮಗಳನ್ನು ವಿಲೀನ ಮಾಡದೆ ವಿಧಿ ಇಲ್ಲ. ಎಲ್ಲ ಕ್ರಮಗಳಿಂದ ಕೋಟ್ಯಂತರ ರೂ. ಉಳಿತಾಯವಾಗಲಿದೆ. | ಆರ್. ಅಶೋಕ್ ಕಂದಾಯ ಸಚಿವ

ಬಿಳಿಯಾನೆ: ಬಹುತೇಕ ಇಲಾಖೆಗಳಲ್ಲಿ ಬಡ್ತಿಗಾಗಿಯೇ ಹುದ್ದೆ ಸೃಷ್ಟಿಸಲಾಗುತ್ತಿದೆ. ಅಧಿಕಾರಿಗಳಿಗೆ ಆಪ್ತಶಾಖೆಗಳು ಆರಂಭವಾಗಿ ಹೊರೆಯಾಗುತ್ತಿದೆ. ಒಬ್ಬರೇ ಅಧಿಕಾರಿ ಮಾಡಬಹುದಾದ ಕೆಲಸವನ್ನು ನಾಲ್ಕು ಐದು ಜನರಿಗೆ ಹಂಚಿಕೆ ಮಾಡಲಾಗುತ್ತಿದೆ. ಅಧಿಕಾರಿಗಳಿಗೆ ಬಡ್ತಿಯಿಂದ ಸೃಷ್ಟಿಯಾಗುವ ಹುದ್ದೆಗಳು ಬಿಳಿಯಾನೆಗಳಂತಾಗಿವೆ. ಇಂತಹ ಪ್ರಕರಣಗಳಿಗೆ ತಡೆ ಹಾಕುವುದು ಸರ್ಕಾರದ ಉದ್ದೇಶವಾಗಿದೆ.

ಎಲ್ಲೆಲ್ಲಿ ಬಿಳಿಯಾನೆಗಳಿವೆ?: ಅರಣ್ಯ ಇಲಾಖೆಯಲ್ಲಿ ಜಿಲ್ಲೆಗೆ ನಾಲ್ಕರಿಂದ ಐವರು ಡಿಸಿಎಫ್​ಗಳಿದ್ದಾರೆ. ಒಬ್ಬರೇ ಅಧಿಕಾರಿ ಸಾಕಾಗುತ್ತದೆ. ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಕುಡಿಯುವ ನೀರು ಪ್ರತ್ಯೇಕ ವಿಭಾಗದ ಅಗತ್ಯವಿಲ್ಲ, ನೀರು, ಕೆರೆ ಹೀಗೆ ತಾಲೂಕಿಗೆ 3-4 ಜನ ಇಂಜಿನಿಯರ್​ಗಳಿದ್ದಾರೆ. ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಜಿಲ್ಲೆಗೊಬ್ಬರೇ ಇಂಜಿನಿಯರ್ ಇರುವಂತೆ ನೋಡಿಕೊಳ್ಳಲು ತೀರ್ವನಿಸಲಾಗಿದೆ. ಜಿಲ್ಲಾ ಆರೋಗ್ಯಾಧಿಕಾರಿ ಇದ್ದ ಮೇಲೆ ಮತ್ತೆ ಜಿಲ್ಲಾ ಸರ್ಜನ್ ಅಗತ್ಯದ ಪ್ರಶ್ನೆ ಕೇಳಿ ಬಂದಿದೆ. ಅನಗತ್ಯ ಹುದ್ದೆಗಳ ರದ್ದತಿಯಿಂದ ಕೋಟ್ಯಂತರ ರೂ.ಗಳನ್ನು ಉಳಿಸಬಹುದು ಎಂಬುದು ಸರ್ಕಾರದ ಲೆಕ್ಕಾಚಾರ.

ಜಿಲ್ಲೆಗೊಂದೇ ಯೋಜನಾ ಪ್ರಾಧಿಕಾರ: ಜಿಲ್ಲೆಗೊಂದೇ ಯೋಜನಾ ಪ್ರಾಧಿಕಾರ ಇರುವಂತೆ ನೋಡಿಕೊಳ್ಳಲು ನಿರ್ಧಾರ ಮಾಡಲಾಗಿದೆ. ಬೆಂಗಳೂರು ನಗರ, ಗ್ರಾಮಾಂತರ ಜಿಲ್ಲೆಯಲ್ಲಿ ಆರೇಳು ಯೋಜನಾ ಪ್ರಾಧಿಕಾರಗಳಿವೆ. ಅದಕ್ಕೆ ಅಧ್ಯಕ್ಷರು, ಆಯುಕ್ತರಂತಹ ಹುದ್ದೆಗಳು ತುಂಬಿವೆ. ಎಲ್ಲ ಪ್ರಾಧಿಕಾರಗಳನ್ನು ಬಿಎಂಆರ್​ಡಿಎನಲ್ಲಿ ವಿಲೀನ ಮಾಡುವ ಬಗ್ಗೆ ಚರ್ಚೆಯಾಗಿದೆ. ಆಗ ಹೆಚ್ಚಿನ ಹುದ್ದೆ ಅಗತ್ಯ ಇರುವುದಿಲ್ಲ. ವೆಚ್ಚ ಉಳಿತಾಯಕ್ಕೆ ದಾರಿಯಾಗುತ್ತದೆ. ಈ ಬಗ್ಗೆ ನಗರಾಭಿವೃದ್ಧಿ ಇಲಾಖೆಯಿಂದ ವರದಿ ಪಡೆದು ಕ್ರಮ ಕೈಗೊಳ್ಳಲು ಸರ್ಕಾರ ನಿರ್ಧರಿಸಿದೆ.

ಹೊರೆ ಸಡಿಲ: ಆರೋಗ್ಯ, ಗ್ರಾಮೀಣಾಭಿವೃದ್ಧಿ, ವಿಶ್ವವಿದ್ಯಾಲಯಗಳು, ಪೊಲೀಸ್ ಹೀಗೆ ಬೇರೆ ಬೇರೆ ಇಲಾಖೆಗಳು ನಿರ್ವಣದ ವಿಭಾಗವನ್ನು ತೆರೆದುಕೊಂಡಿವೆ. ಇದರಿಂದ ಲೋಕೋಪಯೋಗಿ ಇಲಾಖೆ ಮೇಲೆ ಹೊರೆ ಕಡಿಮೆಯಾಗಿದೆ. ಲೋಕೋಪಯೋಗಿ ಇಲಾಖೆಯ ಉದ್ದೇಶವೇ ವಿಫಲವಾಗುತ್ತಿದೆ. ಹಿಂದೆ ಸಚಿವರಾಗಿದ್ದ ಗೋವಿಂದ ಕಾರಜೋಳ ಲೋಕೋಪಯೋಗಿ ಇಲಾಖೆಯಿಂದಲೇ ಕಾಮಗಾರಿಗಳನ್ನು ಕೈಗೊಳ್ಳಬೇಕೆಂದು ಮನವಿ ಮಾಡಿದ್ದರು. ಸರ್ಕಾರ ಈ ಬಗ್ಗೆ ಇಲಾಖೆಯಿಂದ ವರದಿ ಕೇಳಿದೆ.

800 ಸಿಬ್ಬಂದಿ ಲಭ್ಯ: ಪ್ರಾದೇಶಿಕ ಆಯುಕ್ತರ ಹುದ್ದೆಗಳನ್ನು ರದ್ದು ಮಾಡುವ ನಿರ್ಧಾರಕ್ಕೆ ಸರ್ಕಾರ ಬಂದಿದೆ. ನಾಲ್ಕು ವಿಭಾಗಗಳಲ್ಲಿ ನಾಲ್ಕು ಜನ ಪ್ರಾದೇಶಿಕ ಆಯುಕ್ತರಿದ್ದಾರೆ. ಪ್ರತಿ ವಿಭಾಗದಲ್ಲಿ ತಲಾ 200 ಜನ ಸಿಬ್ಬಂದಿ ಇದ್ದಾರೆ. ಹುದ್ದೆ ರದ್ದತಿಯಿಂದ ಒಟ್ಟು 800 ಜನ ಸಿಬ್ಬಂದಿ ಬೇರೆ ಕಡೆ ಕೆಲಸಕ್ಕೆ ಲಭ್ಯವಾಗಲಿದ್ದಾರೆ.

ಉದ್ದೇಶಗಳೇನು?

  • ಆರ್ಥಿಕ ಉಳಿತಾಯ ಸಾಧಿಸುವುದು
  • ಆಡಳಿತದಲ್ಲಿ ಸುಧಾರಣೆ ತರುವುದು
  • ಅಧಿಕಾರಿಗಳಿಗೆ ಹೆಚ್ಚಿನ ಜವಾಬ್ದಾರಿ
  • ಅಗತ್ಯ ಇರುವೆಡೆ ಸಿಬ್ಬಂದಿ ಬಳಕೆ
  • ಹೊಣೆಗಾರಿಕೆ ನಿಗದಿ ಸುಲಭ

ನಿಗಮಗಳ ವಿಲೀನ: ಅರಣ್ಯ ಇಲಾಖೆಯಲ್ಲಿ ಮೂರು ಪ್ರತ್ಯೇಕ ನಿಗಮಗಳಿದ್ದು, ಅವು ಪುನರ್ವಸತಿ ಕೇಂದ್ರಗಳಾಗಿವೆ. ಅವುಗಳನ್ನು ವಿಲೀನ ಮಾಡಿ ಒಂದೇ ನಿಗಮವನ್ನಾಗಿ ಮಾಡಲು ನಿರ್ಧರಿಸಲಾಗಿದೆ. ವಾರ್ತಾ ಇಲಾಖೆಯಡಿಯಲ್ಲಿ ಕಂಠೀರವ ಸ್ಟ್ಟುಡಿಯೋ, ಚಲನಚಿತ್ರ ಅಕಾಡೆಮಿಗಳಿವೆ. ಅವುಗಳನ್ನು ವಿಲೀನ ಮಾಡಲಾಗುತ್ತದೆ. ಮದ್ಯಪಾನ ಸಂಯಮ ಮಂಡಳಿಯ ಜವಾಬ್ದಾರಿಯನ್ನು ಮಾಧ್ಯಮ ಅಕಾಡೆಮಿಗೆ ವಹಿಸುವ ಬಗ್ಗೆ ಪರಿಶೀಲನೆ ಮಾಡಲಾಗುತ್ತಿದೆ.

ಅಧಿಕಾರಿಗಳ ಲಾಬಿ: ಬಡ್ತಿಗಾಗಿ ಹುದ್ದೆ ಸೃಷ್ಟಿಸುತ್ತಿರುವ ಅಧಿಕಾರಿಗಳು, ಇಂತಹ ಹುದ್ದೆ ರದ್ದು ಮಾಡದಿರುವಂತೆ ದೊಡ್ಡ ಮಟ್ಟದಲ್ಲಿಯೇ ಲಾಬಿ ನಡೆಸುತ್ತಿದ್ದಾರೆ ಎಂಬ ಮಾಹಿತಿ ಸರ್ಕಾರದ ಮೂಲಗಳಿಂದಲೇ ಲಭ್ಯವಾಗಿದೆ. ಮಂತ್ರಿಗಳ ಮೂಲಕವೂ ಒತ್ತಡ ಇದೆ. ಸರ್ಕಾರ ಅಧಿಕಾರಿಗಳ ಒತ್ತಡಕ್ಕೆ ಮಣಿಯುವುದೇ ಅಥವಾ ಇಲ್ಲವೇ ಎಂಬುದನ್ನು ಕಾದು ನೋಡಬೇಕಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net